ಸಾರ್ವಜನಿಕರಿಗೆ ಸಂಚಾರ ತಂದ ಕಿರಿಕಿರಿ
-ಎನ್.ಬಾಬು
ಚಿಂತಾಮಣಿ: ವಾಣಿಜ್ಯ ನಗರಿಯ ಪ್ರಮುಖ ವೃತ್ತಗಳಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸದೆ ಸವಾರರು ವಾಹನ ಚಲಾಯಿಸುತ್ತಿದ್ದು, ಪಾದಚಾರಿಗಳಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ಪ್ರಮುಖ ಜನಸಂದಣಿ ವೃತ್ತಗಳಾದ ಗಜಾನನ ವೃತ್ತ, ಚೇಳೂರು ಸರ್ಕಲ್, ಪಿ.ಸಿ.ಆರ್.ಕಾಂಪ್ಲೆಕ್ಸ್‌ವೃತ್ತಗಳಲ್ಲಿ ನಿತ್ಯ ಸಾವಿರಾರು ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಸರಕು ಸಾಗಣೆಯ ವಾಹನ, ಬಸ್ಸುಗಳು ಸಂಚಾರಿ ನಿಯಮಗಳನ್ನು ಪಾಲಿಸದೆ ಅವಸರವಾಗಿ ಚಾಲನೆ ಮಾಡುತ್ತಿರುವುದು ಸಾರ್ವಜನಿಕರಿಗೆ ತಲೆನೋವಾಗಿದೆ.
ಚಿಂತಾಮಣಿಗೆ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ ವ್ಯಾಪಾರ ವಹಿವಾಟು ನಡೆಸಲು ಸಾವಿರಾರು ವಾಹನಗಳು ಬರುತ್ತಿವೆ. ಆದರೆ ಸಾರ್ವಜನಿಕರ ಹಿತ ಕಾಪಾಡಬೇಕಾದ ಪೊಲೀಸರು ನಾಮ್ ಕೆ ವಾಸ್ತೆ ಕೆಲಸ ಮಾಡಿದರೆ ಟ್ರಾಫಿಕ್ ಜಾಮ್ ಆಗಿ ಜನರ ತಾಳ್ಮೆ ಪರೀಕ್ಷಿಸುವಂತಾಗಿದೆ.
ವೃದ್ಧರಿಗೆ, ಮಹಿಳೆ, ವಿದ್ಯಾರ್ಥಿಗಳಿಗೆ ರಸ್ತೆ ದಾಟಲು 1 ಗಂಟೆ ಸಮಯ ಬೇಕಾಗಿದೆ. ಜತೆಗೆ ಬೈಕ್ ಸವಾರರು ಕೂಡ ಎತ್ತಬೇಕೆಂದತ್ತ ಸಂಚಾರ ಮಾಡುತ್ತಿರುವುದರಿಂದ ಪಾದಚಾರಿಗಳಿಗೆ ಮತ್ತಷ್ಟು ಸಂಕಷ್ಟವಾಗಿದೆ.
ಈ ಹಿಂದೆ ಕೆಲಸ ಮಾಡಿದ ಐ.ಪಿ.ಎಸ್ ಅಧಿಕಾರಿ ರಮೇಶ್ ಭಾನೂತ್ ಅವಧಿಯಲ್ಲಿ ಸಂಚಾರಿ ಪೊಲೀಸ್ ಠಾಣೆ ತೆರೆಯಲು ಸರ್ಕಾರ ಗಮನಕ್ಕೆ ತರಲಾಗಿತ್ತು. ಆದರೆ ಚುನಾವಣೆ ಸಂದರ್ಭದಲ್ಲಿ ಅವರು ವರ್ಗಾವಣೆಗೊಂಡ ನಂತರ, ಈ ಪ್ರಯತ್ನ ವಿಫಲವಾಯಿತು.
ದಿನನಿತ್ಯ ನಗರದಲ್ಲಿ ವಾಹನಗಳಲ್ಲಿ ಬರುವ ದಟ್ಟ ಹೊಗೆ, ವಾಹನಗಳಲ್ಲಿ ಬಳಸುವ ಅತಿಯಾದ ಧ್ವನಿವರ್ದಕ ಮತ್ತು ವಾಯುಮಾಲಿನ್ಯ ಹಾಳಾಗಿ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆಯೆಂದು ಸಾರ್ವಜನಿಕರ ಅಭಿಪ್ರಾಯ. ಕೂಡಲೇ ಪೊಲೀಸ್ ಉನ್ನತ ಅಧಿಕಾರಿಗಳು ಇತ್ತ ಗಮನ ಹರಿಸಿ ಜಿಲ್ಲೆಯಲ್ಲೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಕ್ಕೆ ಸಂಚಾರಿ ಪೊಲೀಸ್ ಠಾಣೆ ತೆರೆದು ಜನರ ಸುಗಮ ಸಂಚಾರಕ್ಕೆ ಅವಕಾಶ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.