ಅತಿಥಿ ಉಪನ್ಯಾಸಕರಿಗೆ ವಂಚನೆ: 22ಕ್ಕೆ ಧರಣಿ
ಕೆಜಿಎಫ್: ರಾಜ್ಯಾದ್ಯಂತ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಂಗ್ರೆಸ್ ಸರ್ಕಾರವೂ ವಂಚಿಸುತ್ತಿದೆ ಎಂದು ಡಿವೈಎಫ್‌ಐ ಕಾರ್ಯಕರ್ತರು ಹಾಗೂ ಶಿಕ್ಷಕರು ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿವೈಎಫ್‌ಐ ತಾಲೂಕು ಕಾರ್ಯದರ್ಶಿ ಡಿ.ಕೆ.ಹಳ್ಳಿ ವಿಶ್ವನಾಥ್, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 10,600ಕ್ಕಿಂತ ಹೆಚ್ಚಿರುವ ಅತಿಥಿ ಉಪನ್ಯಾಸಕರು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದು, ಸಾಲ ಮಾಡಿ ಉನ್ನತ ಅಧ್ಯಯನ ಮಾಡಿದ್ದಾರೆ. ಅವರಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ದುಡಿಯುತ್ತಿರುವ ಇವರನ್ನು ಕಡೆಗಣಿಸಲಾಗಿದೆ. ತಿಂಗಳಿಗೆ ಕೇವಲ 8-10 ಸಾವಿರದಂತೆ ಈ ಸರ್ಕಾರವೂ ಪ್ರತಿ ತಿಂಗಳು ವೇತನವನ್ನು ಸರಿಯಾಗಿ ನೀಡುತ್ತಿಲ್ಲ ಎಂದರು.
ರಾಜ್ಯ ಸರ್ಕಾರ ಇಂತಹ ವಿಶ್ವಾಸ ದ್ರೋಹ ಖಂಡಿಸಿ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅ.22 ರಂದು ಮುಖ್ಯಸಂತ್ರಿ ಸಿದ್ದರಾಮಯ್ಯ ಅವರ ಮನೆ ಮುಂದೆ ಪ್ರತಿಭಟನೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಹಾಗೂ ಡಿವೈಎಫ್‌ಐ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅದೇ ರೀತಿ ಅತಿಥಿ ಉಪನ್ಯಾಸಕರ ಹಲವು ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸುತ್ತಿದೆ ಎಂದು ಮಾಧ್ಯಮಗಳ ಮೂಲಕ ಸುಳ್ಳು ಹೇಳಿಕೆಗಳನ್ನು ನೀಡುತ್ತಿರುವ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಸರ್ಕಾರಿ ಇಲಾಖೆಗಳು ಗುತ್ತಿಗೆ, ಹೊರಗುತ್ತಿಗೆ ಹಾಗೂ ಇನ್ನಿತರ ಹೆಸರುಗಳಲ್ಲಿ ದುಡಿಯುತ್ತಿರುವ 5 ಲಕ್ಷ ಯುವಜನತೆಗೆ ಉದ್ಯೋಗ ಭದ್ರತೆ ಒದಗಿಸುತ್ತಿಲ್ಲ. ಜೊತೆಗೆ ಉದ್ಯೋಗ ಸೃಷ್ಟಿಗೆ ಪೂರಕವಾಗಿ ಉದ್ದಿಮೆಗಳ ಸ್ಥಾಪನೆಗೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಅತಿಥಿ ಉಪನ್ಯಾಸಕ ಶಿಕ್ಷಕರಾದ ವೈ.ಬಿ.ರತ್ನಂ, ಕೆ.ನಾಗೇಶ್, ಗೀತಾ, ವೆಂಕಟೇಶ್‌ಬಾಬು, ಜಯಚಂದ್ರ, ವೀಣಾವತಿ, ಜಾಯ್ಸ್, ವೆಂಕಟೇಶ್, ಶೋಭಾ, ವಿಶಾಲ್, ವೆಂಕಟಾಚಲಪತಿ, ರಮೇಶ್, ಗೀತಾ ಡಿವೈಎಫ್‌ಐ ಕಾರ್ಯಕರ್ತರು ಹಾಜರಿದ್ದರು.