ಪರಿಹಾರಕ್ಕೆ ರೈತರ ಆಗ್ರಹ
ಕೋಲಾರ: ಕೈಗಾರಿಕಾ ಅಭಿವೃದ್ಧಿಗಾಗಿ ತಾಲೂಕಿನ ಅಚ್ಚಟ್ನಹಳ್ಳಿಯ ರೈತರಿಂದ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಕರ್ನಾಟಕ ರಾಜ್ಯ ಕೈಗಾರಿಕೆ ಅಭಿವೃದ್ಧಿ ಮಂಡಳಿಯು 2009ರಲ್ಲಿ ತಮ್ಮ ಗ್ರಾಮದ ಸರ್ವೆ ನಂ.135ರಲ್ಲಿ ಸುಮಾರು 12 ಎಕರೆ ಜಮೀನನ್ನು ವಶಪಡಿಸಿಕೊಂಡು ಜಪಾನ್ ಮೂಲದ ಏಷ್ಯನ್ ಆಟೋಮೋಟೀವ್ ಎಂಬ ಕಂಪನಿಗೆ ನೀಡಿದೆ. ಇದರೊಂದಿಗೆ ಸರ್ವೆ ನಂ.136 ರಲ್ಲಿನ 4 ಎಕರೆ ಸ್ವಾಧೀನಪಡಿಸಿಕೊಂಡಿದ್ದು, ಪರಿಹಾರ ಈವರೆಗೂ ನೀಡಿಲ್ಲ ಎಂದು ರೈತರು ದೂರಿದರು.
ಗ್ರಾಮದ ಉಮಾಶಂಕರ್, ಜಿ.ನಾಗರಾಜು, ಎ.ಮಂಜುನಾಥ್, ಕೃಷ್ಣಪ್ಪ, ಚಿಟ್ಟಮ್ಮ, ಸಿ.ಕೃಷ್ಣಯ್ಯ ಎಂಬುವವರು ಕಳೆದ 60 ವರ್ಷಗಳಿಂದ ಬಗರ್‌ಹುಕುಂ ಸಾಗುವಳಿಯ ಮೂಲಕ ಜೀವನ ಸಾಗಿಸುತ್ತಿದ್ದು ಭೂಮಿಯ ಸ್ವಾಧೀನದಿಂದ ತೊಂದರೆ ಅನುಭವಿಸುತ್ತಿದ್ದಾರೆಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಸರ್ವೊಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ರೈತರಿಗೆ ಪರಿಹಾರ ನೀಡಿದ ನಂತರವೇ ಭೂಮಿ ವಶಪಡಿಸಿಕೊಳ್ಳಬೇಕೆಂಬ ನಿಯಮವಿದ್ದರೂ, ಇದುವರೆಗೂ ಪರಿಹಾರ ನೀಡಿಲ್ಲ ಎಂದು ದೂರಿದರು. ಆಂಜಿನಪ್ಪ, ಕೇಶವರೆಡ್ಡಿ, ಎ.ಮಂಜುನಾಥ್, ಶಾಂತಕುಮಾರ್, ಗೋವಿಂದಪ್ಪ, ಬೈರಪ್ಪ ಇದ್ದರು.