ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಸಾಜ್ ನೆಪದಲ್ಲಿ ಅಶ್ಲೀಲ ಚಟುವಟಿಕೆ

Srinivasa Murthy VN
Updated On : 20 Oct 2013, 12:43 pm

ಚಿಕ್ಕಬಳ್ಳಾಪುರ: ಮಸಾಜ್ ನೆಪದಲ್ಲಿ ಅಶ್ಲೀಲ ಚಟುವಟಿಕೆ ನಡೆಸುತ್ತಿದ್ದ ಮಂಗಳ ಮುಖಿಯರಿಗೆ ಪೊಲೀಸರು ಎಚ್ಚರಿಕೆ ನೀಡಿ, ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗದಂತೆ ಸೂಚನೆ ನೀಡಿದ್ದಾರೆ. ನಗರದ ಬಿ.ಬಿ. ರಸ್ತೆಗೆ ಹೊಂದಿಕೊಂಡಂತಿರುವ ವಾಪಸಂದ್ರ ಬಡಾವಣೆಯಲ್ಲಿ ಮನೆಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದ ಕೆಲ ಲೈಂಗಿಕ ಅಲ್ಪಸಂಖ್ಯಾತರು ಮಸಾಜ್ ಕೆಲಸ ಕೈಗೊಳ್ಳುತ್ತಿದ್ದರು. ಬೆಂಗಳೂರು-ಹೈದರಾಬಾದ್‌ಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಸಮೀಪದಲ್ಲಿಯೇ ಮನೆಗಳಿದ್ದ ಕಾರಣ ಲಾರಿ, ಟೆಂಪೋ, ಕಾರು ಚಾಲಕರು ಸೇರಿದಂತೆ ಹಲವರು ಹೆಚ್ಚಿಗೆ ಮಸಾಜ್ ಮಾಡಿಸಿಕೊಳ್ಳಲು ಇಲ್ಲಿಗೆ ಬರುತ್ತಿದ್ದರು. ಇವರ ಸೇವೆಯಲ್ಲಿ ತೊಡಗುತ್ತಿದ್ದ ಮಂಗಳ ಮುಖಿಯರು ಹಣ ವಸೂಲಿ ಮಾಡುತ್ತಿದ್ದರು. ಜತೆಗೆ ಕೆಲವರು ಲೈಂಗಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದಿದ್ದು, ಇತ್ತೀಚೆಗೆ ಸಾರ್ವಜನಿಕರಿಂದ ಬಂದ ದೂರಿನ್ವಯ ಮಸಾಜ್ ಪಾರ್ಲರ್‌ಗಳನ್ನು ನಡೆಸುತ್ತಿದ್ದ ಮನೆಗಳ ಮೇಲೆ ದಾಳಿ ನಡೆಸಿದಾಗ ಸಿಗರೇಟ್‌ಪ್ಯಾಕ್, ಮದ್ಯದ ಬಾಟಲ್‌ಗಳು, ನಿರೋಧ್‌ಗಳು ಕೊಠಡಿಗಳಲ್ಲಿ ಬಿದ್ದಿರುವುದು ಕಂಡು ಬಂದಿತ್ತು. ಅಕ್ರಮವಾಗಿ ಮಸಾಜ್ ಸೇವೆ ಕೈಗೊಳ್ಳಲಾಗುತ್ತಿದೆ ಎನ್ನುವುದು ತಿಳಿದು ಬಂದಿದ್ದು ಶನಿವಾರ ಮಂಗಳಮುಖಿಯರನ್ನು ಪೊಲೀಸ್ ಠಾಣೆಗೆ ಕರೆಸಿ ಈ ಬಗ್ಗೆ ಎಚ್ಚರಿಕೆ ನೀಡಲಾಯಿತು.
ಚಿಕ್ಕಬಳ್ಳಾಪುರದಲ್ಲಿ ಅಶ್ಲೀಲ ಚಟುವಟಿಕೆಗಳಿಗೆ ಕಡಿವಾಣ ಹಾಕಿರುವುದರಿಂದ ಹಿತಕರ ವಾತಾವರಣವಿದೆ. ಹೀಗಿರುವಾಗ ನಗರದಲ್ಲಿ ಅಕ್ರಮವಾಗಿ ಮಸಾಜ್ ಪಾರ್ಲರ್‌ಗಳನ್ನು ನಡೆಸುವುದು ಸರಿಯಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಿ, ಇಲ್ಲದಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಡಿವೈಎಸ್ಪಿ ದೇವಯ್ಯ ಎಚ್ಚರಿಕೆ ನೀಡಿದರು.
ಅನುಮತಿ ಕೊಡಿ: ರಾಜ್ಯದ ಇತರೆಡೆ ಮಸಾಜ್ ಪಾರ್ಲರ್‌ಗಳನ್ನು ನಡೆಸಲು ಸರ್ಕಾರದಿಂದ ಪರವಾನಗಿ ನೀಡಲಾಗುತ್ತಿದೆ. ಇಲ್ಲೂ ಕೇಂದ್ರ ನಡೆಸಲು ಅವಕಾಶ ನೀಡಬೇಕು. ನಾವು ಯಾವುದೇ ಅಶ್ಲೀಲ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಕಾನೂನಿನಲ್ಲಿ ತಿಳಿಸಿರುವ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿ ಕೇಂದ್ರವನ್ನು ನಡೆಸುತ್ತ ಜೀವನ ಸಾಗಿಸುತ್ತೇವೆ ಎಂದು ಕೆಲ ಮಂಗಳಮುಖಿಯರು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು. ಆದರೆ, ಪೊಲೀಸರು ಇದಕ್ಕೆ ಒಪ್ಪಲಿಲ್ಲ.
ಚಿಕ್ಕಬಳ್ಳಾಪುರದಲ್ಲಿ ವಾತಾವರಣ ಹದಗೆಡಸಬೇಡಿ, ನಿಲ್ಲಿಸಿ ಎಂದು ಖಡಕ್ಕಾಗಿ ಹೇಳಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಉಪ ನಿರ್ದೇಶಕಿ ಸುರೇಖಾರವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಸಮಸ್ಯೆಯ ಬಗ್ಗೆ ಪೊಲೀಸರು ಗಮನ ಸೆಳೆದಾಗ, ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜದಲ್ಲಿ ಕೀಳಾಗಿ ಕಾಣುವ ಮನೋಭಾವನೆ ದೂರ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಇವರು ಸಮಾಜದ ಮುಖ್ಯವಾಹಿನಿಗೆ ಬರಲು ಇಲಾಖೆಯ ವತಿಯಿಂದ ಕರಕುಶಲ ವಸ್ತುಗಳ ತಯಾರಿಕೆ, ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು ಅವರಿಗೆ ಉದ್ಯೋಗಾವಕಾಶಗಳು ಹೆಚ್ಚಿಗೆ ದೊರೆಯುವಂತೆ ಮಾಡಲಾಗುತ್ತಿದೆ. ಉದ್ಯೋಗ ಬಯಸುವ ಲಿಂಗ ಅಲ್ಪಸಂಖ್ಯಾತರಿಗೆ ಕೆಲಸ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸುರೇಖಾ ಭರವಸೆ ನೀಡಿದರು. ಕೊನೆಗೆ ಇದನ್ನು ಲೈಂಗಿಕ ಅಲ್ಪಸಂಖ್ಯಾತರ ಮುಂದೆ ಪ್ರಸ್ತಾಪಿಸಿದ ನಂತರ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದರು.
ದುರುಪಯೋಗ: ದೇಹದ ನೋವು, ಸಮಸ್ಯೆಗಳನ್ನು ದೂರ ಮಾಡಲು ಮಸಾಜ್ ಪರಿಣಾಮಕಾರಿ. ಆಯುರ್ವೇದದಲ್ಲೂ ಇದರ ಮಹತ್ವ ಹೇಳಲಾಗಿದೆ. ಅಲ್ಲದೇ ಇದು ಅನಾಧಿ ಕಾಲದಿಂದಲೂ ರೂಢಿಯಲ್ಲಿದೆ. ಈಗಾಗಲೇ ಹಲವೆಡೆ ಪರವಾನಗಿ ಪಡೆದು ಕಾನೂನು ಬದ್ಧವಾಗಿ ಮಸಾಜ್ ಪಾರ್ಲರುಗಳನ್ನು ನಡೆಸಲಾಗುತ್ತಿದೆ. ಆದರೆ, ಇದಕ್ಕೆ ಕೆಲ ನಿಯಮಗಳನ್ನು ಪಾಲಿಸಬೇಕು. ಅಶ್ಲೀಲ ಚಟುವಟಿಕೆಗಳಿಗೆ ಪ್ರೇರಣೆ ನೀಡದಂತೆ ನಡೆದುಕೊಳ್ಳಬೇಕು. ಉಡುಪು ಧರಿಸುವಲ್ಲೂ, ಮರ್ದನ ಮಾಡುವಲ್ಲೂ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂಬ ನಿಯಮಗಳಿವೆ. ಇದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಪರವಾನಗಿ ರದ್ದುಪಡಿಸಬಹುದು. ಈ ನಡುವೆ ಅಂಗಮರ್ಧನ ಕೇಂದ್ರಗಳನ್ನು ದುರುಪಯೋಗಪಡಿಸಿಕೊಳ್ಳುವಂತಹುದು ಅನೇಕ ಕಡೆ ನಡೆಯುತ್ತಿದೆ. ಹಣವನ್ನು ಸಂಪಾದನೆ ಮಾಡಬೇಕೆಂಬ ದುರಾಸೆಯಿಂದ ಮಸಾಜ್ ನೆಪದಲ್ಲಿ ಅಕ್ರಮವಾಗಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವಂತಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement