ಮಾಜಿ ಸಚಿವೆ ಪತಿ ಕೆ. ರಾಜೇಂದ್ರನ್ ನಿಧನ
ಟೇಕಲ್: ಮಾಜಿ ಸಚಿವೆ ರೇಣುಕಾ ರಾಜೇಂದ್ರನ್ರವರ ಪತಿ ಕೆ. ರಾಜೇಂದ್ರನ್ (75) ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದು, ಶುಕ್ರವಾರ ರಾತ್ರಿ ಟೇಕಲ್ನ ಗುರುವಗೊಲ್ಲಹಳ್ಳಿಯ ಅಂಬೇಡ್ಕರ್ ಮಂದಿರದಲ್ಲಿ ಕೊನೆಯುಸಿರೆಳೆದರು.
ಇವರಿಗೆ ಅಂತಿಮ ನಮನ ಸಲ್ಲಿಸಲು ಸಮಾಜ ಕಲ್ಯಾಣ ಸಚಿವ ಆಂಜನೇಯ ಆಗಮಿಸಿದ್ದರು. ಕೆ. ರಾಜೇಂದ್ರನ್ರವರು ವಾರ್ತಾ ಮತ್ತು ಪ್ರಚಾರ ಇಲಾಖೆಯ ಉಪನಿರ್ದೇಶಕರಾಗಿ ಮೈಸೂರು ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿದ್ದು, ಟೇಕಲ್ ಹೋಬಳಿಯ ಗುರುವಲಗೊಲ್ಲಹಳ್ಳಿಯಲ್ಲಿ 6 ಎಕರೆ ಪ್ರದೇಶದಲ್ಲಿ ಅಂಬೇಡ್ಕರ್ ಮಂದಿರ ನಿರ್ಮಾಣ ಹಾಗೂ ಅಂಬೇಡ್ಕರ್ ಪ್ರತಿಮೆ ನಿರ್ಮಿಸಿ, ಅಂಬೇಡ್ಕರ್ ಪುಸ್ತಕ ಭಂಡಾರದ ವಾರ್ತಾ ಕೇಂದ್ರವನ್ನು ತೆರೆದಿದ್ದರು. ಮಂದಿರದಲ್ಲಿ ಎಲ್ಲರಿಗೂ ಸಹಾಯವಾಗುವಂತೆ ಸಂಶೋಧನಾ ಕೇಂದ್ರವನ್ನು ತೆರೆಯುವ ಆಸೆಯಿತ್ತು.
ಇದನ್ನು ಬಡಜನರಿಗೆ ಅರ್ಪಿಸಲು ಪಣತೊಟ್ಟಿದ್ದರು.
ಮೃತರಿಗೆ ಅಂತಿಮ ನಮನ ಸಲ್ಲಿಸಲು ಜಿಪಂ ಸದಸ್ಯೆ ರತ್ನಮ್ಮ ನಂಜೇಗೌಡ, ಕೆ.ವೈ. ನಂಜೇಗೌಡ, ಎನ್. ವೆಂಕಟರಾಮ್, ಆರ್. ರಾಜಣ್ಣ, ಆರ್. ವೆಂಕಟೇಶ್ ಗೌಡ, ಮಮತಾ ಅಣ್ಣಯ್ಯ, ಮುನಿಸ್ವಾಮಿ, ಎ.ಕೆ. ವೆಂಕಟೇಶ್, ಸಂಪಂಗಿ, ತಿಪ್ಪಸಂದ್ರದ ಶ್ರೀನಿವಾಸ್ ಹಾಗೂ ಹಲವಾರು ದಲಿತ ಮುಖಂಡರು ಉಪಸ್ಥಿತರಿದ್ದರು. ಮೃತರ ಆಣತಿಯಂತೆ ಮಂದಿರದ ಆವರಣದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.
ಅಂಬೇಡ್ಕರ್ ಮಂದಿರ ಪುನರ್ ನಿರ್ಮಾಣ
ಟೇಕಲ್: ಗುರುವಲಗೊಲ್ಲಹಳ್ಳಿಯ ಕೆ. ರಾಜೇಂದ್ರನ್ ಜ್ಞಾಪಕಾರ್ಥವಾಗಿ ಶಿಥಿಲವಾಗಿರುವ ಅಂಬೇಡ್ಕರ್ ಮಂದಿರ ಪುನರ್ ನಿರ್ಮಾಣ ಹಾಗೂ ಇತರೆ ಕಾರ್ಯಗಳಿಗೆ ಸಮಾಜ ಕಲ್ಯಾಣ ಸಚಿವ ಆಂಜನೇಯ ರು. 1 ಕೋಟಿ ಅನುದಾನ ನೀಡುವುದಾಗಿ ಘೋಷಿಸಿದರು.
ಮಾಜಿ ಸಚಿವೆ ರೇಣುಕಾ ರಾಜೇಂದ್ರನ್ರವರ ಪತಿ ಕೆ. ರಾಜೇಂದ್ರನ್ರವರ ಅಂತಿಮ ನಮನಕ್ಕೆ ಆಗಮಿಸಿದ ಸಚಿವ ಆಂಜನೇಯ ಸ್ಥಳೀಯ ಜನರ ಮನವಿಗೆ ಸ್ಪಂದಿಸಿ ಅಂಬೇಡ್ಕರ್ ಮಂದಿರದ ಪುನರ್ ನಿರ್ಮಾಣ ಮಾಡಲು ಹಾಗೂ ಅಲ್ಪಸಂಖ್ಯಾತ ಹಾಗೂ ದಲಿತ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ತರಬೇತಿ ನೀಡಲು ಗಣಕಯಂತ್ರಗಳನ್ನು ಸ್ಥಾಪಿಸಲಾಗುವುದು ಎಂದರು. ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ, ಮಾಜಿ ಶಾಸಕರಾದ ಶಿವಾನಂದ್, ಅನುಸೂಯಮ್ಮ, ರಾಜಣ್ಣ, ವೆಂಕಟೇಶ್ ಗೌಡ, ಎನ್. ವೆಂಕಟರಾಮನ್ ಇದ್ದರು.