ವಾಲ್ಮೀಕಿ ಜಯಂತಿ ಪ್ರತ್ಯೇಕ ಆಚರಣೆ
ಬಂಗಾರಪೇಟೆ: ವಾಲ್ಮೀಕಿ ಜಯಂತಿಯನ್ನು ರಾಜಕೀಯ ದಾಳವಾಗಿ ಬಳಸಿಕೊಂಡು ಜನಾಂಗದಲ್ಲಿ ಒಡಕುಂಟು ಮಾಡಿ ಪ್ರತ್ಯೇಕವಾಗಿ ಆಚರಿಸುವ ಮೂಲಕ ತಾಲೂಕು ಆಡಳಿತಕ್ಕೆ ಸೆಡ್ಡು ಹೊಡೆದಿದ್ದಾರೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿರುವ ಬಿಜೆಪಿಯ ಎಂ.ನಾರಾಯಣಸ್ವಾಮಿ ವಾಲ್ಮಿಕಿ ಜಯಂತಿಯನ್ನು ಪ್ರಥಮ ಬಾರಿಗೆ ಕಾಮಸಮುದ್ರದಲ್ಲಿ ಆಚರಿಸಿದರು. ಇಲ್ಲಿಯೂ ಹತ್ತಾರು ವಾಲ್ಮೀಕಿ ಭಾವಚಿತ್ರವಿದ್ದ ಪಲ್ಲಕಿಗಳು ಸಂಚರಿಸಿತು. ನಂತರ ಮಾತನಾಡಿದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ವಾಲ್ಮೀಕಿ ದೇಶದ ಮಹಾನ್ ವ್ಯಕ್ತಿಗಳ ಸಾಲಿಗೆ ಸೇರಿದ್ದಾರೆ. ಇಂತಹ ವ್ಯಕ್ತಿಯ ಜಯಂತಿಯನ್ನು ಒಂದೆಡೆ ಮಾಡುವ ಬದಲು ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಆಚರಿಸಬೇಕು ಎಂದು ಹೇಳಿದರು. ಜಿಪಂ ಸದಸ್ಯೆ ಸಿಮೋಲ್ ಮೋನ್ ಮೂರ್ತಿ, ಬಿಜೆಪಿ ಅಧ್ಯಕ್ಷ ಮಾರ್ಕಂಡೇಗೌಡ, ಕಾರ್ಯದರ್ಶಿ ಮೋಹನ್ ಮೂರ್ತಿ, ಕಾಮಸಮುದ್ರ ಪಂ- ಅಧ್ಯಕ್ಷ ಗೌರಮ್ಮ, ನಾರಾಯಣಪ್ಪ, ತಿಪ್ಪಾರೆಡ್ಡಿ, ವೆಂಕಟೇಶ್ ಇದ್ದರು.
ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ: ಅಲ್ಪಸಂಖ್ಯಾತರ ಸಮುದಾಯ ಹಾಗೂ ಕ್ರಿಶ್ಚಿಯನ್ ಸಮುದಾಯದ ಯುವಕ, ಯುವತಿಯರಿಂದ 2013-14ನೇ ಸಾಲಿಗೆ ಉಚಿತವಾಗಿ ಗಣಕಯಂತ್ರ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತರಬೇತಿಗೆ ಸೇರಲು ಇಚ್ಚಿಸುವ ಅಭ್ಯರ್ಥಿಗಳು ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿಗೆ ನ.10 ರೊಳಗೆ ಸಲ್ಲಿಸಬೇಕು. ಅಭ್ಯರ್ಥಿ ತರಬೇತಿಯನ್ನು ಮಧ್ಯದಲ್ಲಿ ಬಿಡುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಡಬೇಕು.
ಹ್ಯಾಂಡ್‌ಬಾಲ್ ಪಂದ್ಯಾವಳಿ
ಚಿಕ್ಕಬಳ್ಳಾಪುರ: ನಗರದ ಸರ್.ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಅ.22 ರಂದು ಬೆಳಗ್ಗೆ 10 ಗಂಟೆಗೆ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬೆಂಗಳೂರು ವಿಭಾಗ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಗಳ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಡಳಿತ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸುವರು. ಅಧ್ಯಕ್ಷತೆಯನ್ನು ಶಾಸಕ ಡಾ.ಕೆ. ಸುಧಾಕರ್ ವಹಿಸುವರು. ಕೇಂದ್ರ ಸಚಿವ ಎಂ. ವೀರಪ್ಪ ಮೊಯಿಲಿ, ಕೆ.ಎಚ್. ಮುನಿಯಪ್ಪ, ವಿಧಾನಸಭೆ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರ್‌ರೆಡ್ಡಿ, ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ, ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಡಿಸಿ ಡಾ.ಆರ್. ವಿಶಾಲ್, ಜಿಪಂ ಸಿಇಒ ನೀಲಾ ಮಂಜುನಾಥ್, ಎಸ್‌ಪಿ ಎನ್. ಶಿವಪ್ರಸಾದ್ ಭಾಗವಹಿಸಲಿದ್ದಾರೆ.
ಕಾಲುಬಾಯಿ ಜ್ವರ; ಹಸು ಸಾವು
ಚಿಂತಾಮಣಿ: ಕಾಲುಬಾಯಿ ಜ್ವರದಿಂದ ಹಸುವೊಂದು ಮೃತಪಟ್ಟಿದ್ದು, ರೈತ ಪರಿಹಾರಕ್ಕಾಗಿ ಆಗ್ರಹಿಸಿರುವ ಘಟನೆ ಪಟ್ಟಣದ ಹೊರ ವಲಯದ ಕರಿಯಪ್ಪಲ್ಲಿಯಲ್ಲಿ ಶನಿವಾರ ನಡೆದಿದೆ.
ತಾಲೂಕಿನಲ್ಲಿ ಕಾಲುಬಾಯಿ ಜ್ವರದಿಂದ ನೂರಾರು ಜಾನುವಾರುಗಳು ಮೃತಪಟ್ಟಿದ್ದರೂ ಸ್ಥಳೀಯ ಪಶು ಸಂಗೋಪನಾ ಅಧಿಕಾರಿಗಳು ಮತ್ತು ಕೋಮುಲ್ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಹಸುಗಳು ಸಾವನ್ನಪ್ಪಿರುವುದಾಗಿ ನಷ್ಟಹೋದ ರೈತ ಮುನಿಯಪ್ಪ ಆರೋಪಿಸಿದ್ದಾನೆ.
ಮೂಲ ಸೌಲಭ್ಯಕ್ಕೆ ನಾಗರಿಕರ ಆಗ್ರಹ
ಚಿಂತಾಮಣಿ: ಆಶ್ರಯ ಬಡಾವಣೆಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ವಿಫಲಗೊಂಡಿದ್ದಾರೆಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ಪಟ್ಟಣದ ಆಶ್ರಯ ಬಡಾವಣೆಯ 1ನೇ ವಿಭಾಗಕ್ಕೆ ಸೇರಿದ ನಿವಾಸಿಗಳಿಗೆ ಕಳೆದ 1 ವರ್ಷದಿಂದ ಮೂಲ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಶ್ವಾಸನೆ ನೀಡುತ್ತಿದ್ದಾರೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲವೆಂದು ದೂರಿದ್ದಾರೆ.
ಪಹಣಿ ಸಮಸ್ಯೆ ಬಗೆಹರಿಸಲು ಮನವಿ
ಶ್ರೀನಿವಾಸಪುರ: ರೈತಗಾಗಿ ವಿತರಣೆ ಮಾಡುತ್ತಿರುವ ಆರ್‌ಟಿಸಿ ಪಹಣಿ ಕೌಂಟರಿನಲ್ಲಿ ಕೆಲಸ ನಿರ್ವಹಿಸುವವರು ಬೇಜಾಬ್ದಾರಿತನದಿಂದ ವರ್ತಿಸುತ್ತಿದ್ದರೂ ಸಂಬಂಧಪಟ್ಟವರು ಇತ್ತ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ. ದಿನಗಟ್ಟಲೆ ಸಾಲಿನನಲ್ಲಿ ರೈತರು ನಿಲ್ಲಬೇಕಾದ ದುಸ್ಥಿತಿ ಒದಗಿದೆ. ಪಹಣಿ ವಿತರಣೆಯಲ್ಲಿ ನೂಕಲಾಟ ಶುರುವಾಗಿ ಪ್ರತಿ ದಿನ ಗಲಾಟೆ ನಡೆಯುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಕ್ರಮ ವಹಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಬಾಗೇಪಲ್ಲಿ ಶಾಸಕರಿಂದ ಆನೆ ದತ್ತು ಸ್ವೀಕಾರ
ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ 45 ಸಾವಿರ ಪಾವತಿಸಿ, ಅಭಿಷೇಕ್ ಆನೆಯನ್ನು ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದಾರೆ. ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಅವರು ಶಾಸಕರನ್ನು ಅಭಿನಂದಿಸಿದ್ದಾರೆ.
ಮಾದಿಗ ದಂಡೋರ ಪದಾಧಿಕಾರಿಗಳಿಗೆತರಬೇತಿ ಶಿಬಿರ
ಕೋಲಾರ: ತಾಲೂಕಿನ ಕರ್ನಾಟಕ ಮಾದಿಗ ದಂಡೋರ ಮತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪೂರ್ವಭಾವಿ ಸಭೆಯು ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಅಧ್ಯಕ್ಷ ಟಮಕ ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಜಯಚಂದ್ರ ಅ. 27,28 ರಂದು ಎರಡು ದಿನಗಳ ಕಾಲ ಕೈವಾರದಲ್ಲಿ ಹಮ್ಮಿಕೊಂಡಿರುವ ತರಬೇತಿ ಶಿಬಿರಕ್ಕೆ ತಾಲೂಕಿನ ಪ್ರತಿಯೊಂದು ಹೋಬಳಿಯಿಂದ ಕಾರ್ಯಕರ್ತರು ಭಾಗವಹಿಸುವಂತೆ ತಿಳಿಸಿದರು. ರಾಜ್ಯ ಸಮಿತಿ ಕಾರ್ಯದರ್ಶಿ ಸಾಹುಕಾರ ಶಂಕರಪ್ಪ, ಹೆಚ್. ವೆಂಕಟೇಶಪ್ಪ, ಹೂಹಳ್ಳಿ ಕೃಷ್ಣಪ್ಪ, ಕೆ.ಎಸ್. ವೆಂಕಟಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಹೆಚ್. ಮುನಿರಾಜು, ತಾಲೂಕು ಉಪಾಧ್ಯಕ್ಷ ಲೋಕೇಶ್, ಖಜಾಂಚಿ ದಿನ್ನೆಹೊಸಹಳ್ಳಿ ಆಂಜಿ, ಚಂಜಿಮಲೆ ನಾರಾಯಣಸ್ವಾಮಿ, ನರಸಾಪುರ ಹೋಬಳಿ ಅಧ್ಯಕ್ಷ ನಾರಾಯಣಸ್ವಾಮಿ, ಸುಗಟೂರು ಹೋಬಳಿ ಅಧ್ಯಕ್ಷ ಉಮೇಶ್, ಹೋಳೂರು ಹೋಬಳಿ ಅಧ್ಯಕ್ಷ ಶ್ರೀನಿವಾಸ್, ಗೌರವಾಧ್ಯಕ್ಷ ಶೆಟ್ಟಿಹಳ್ಳಿ ವೆಂಕಟಪ್ಪ, ಕುರುಗಲ್ ನಾರಾಯಣಸ್ವಾಮಿ, ಪಿಳ್ಳಯ್ಯ ಇತರರು ಭಾಗವಹಿಸಿದ್ದರು.
ರಸ್ತೆ ಅಪಘಾತ: ವ್ಯಕ್ತಿ ಸಾವು
ಕೋಲಾರ: ತಾಲೂಕಿನ ಕ್ಯಾಲನೂರು ಗ್ರಾಮದ ಗೇಟ್ ಬಳಿ ದ್ವಿಚಕ್ರ ವಾಹನಕ್ಕೆ ರಾಜ್ಯ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ತಾವರೆಕೆರೆ ಗ್ರಾಮದ ವಾಸಿ ಬಸವರಾಜ್ ಮೃತ ವ್ಯಕ್ತಿ. ದ್ವಿಚಕ್ರ ವಾಹನದಲ್ಲಿ ದೊಡ್ಡಬಳ್ಳಾಪುರದಿಂದ ತಮ್ಮ ಗ್ರಾಮಕ್ಕೆ ಹೋಗಲು ಬರುತ್ತಿದ್ದಾಗ ಕೋಲಾರ ಕಡೆಯಿಂದ ಬಂದ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಾಯಾಳು ಸ್ಥಳದಲ್ಲೇ ಮೃತಪಟ್ಟಿದ್ದು ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.