ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹೊಸ ಚಳವಳಿಗೆ ಸಾಹಿತಿ ದೇವನೂರು ಕರೆ

Srinivasa Murthy VN
Updated On : 20 Oct 2013, 12:46 pm

ಕೋಲಾರ: ಜಾತಿ ಪದ್ಧತಿಯಿಂದಾಗಿ ಭಾರತ ದೇಶದ ಸಾಮಾಜಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಉಂಟಾಗಿದೆ. ಇದನ್ನು ಬದಲಾಯಿಸುವ ಜವಾಬ್ದಾರಿ ನಮ್ಮ ಯುವಕರ ಮೇಲಿದೆ ಎಂದು ಸಾಹಿತಿ, ಕರ್ನಾಟಕ ಸರ್ವೋದಯ ಪಕ್ಷದ ಅಧ್ಯಕ್ಷರೂ ಆಗಿರುವ ದೇವನೂರು ಮಹದೇವ್ ತಿಳಿಸಿದರು.
ತಾಲೂಕಿನ ತೇರಹಳ್ಳಿ ಬೆಟ್ಟದಲ್ಲಿನ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಸಾಹಿತಿ ಶ್ರೀಕೃಷ್ಣ ಆಲನಹಳ್ಳಿ ಸಾಹಿತ್ಯ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಸಮಾಜದ ಬದಲಾವಣೆಗಾಗಿ ದಲಿತ ಸಂಘರ್ಷ ಸಮಿತಿ ಭಾರತೀಯ ಇತಿಹಾಸದಲ್ಲಿ ಗಮನಾರ್ಹವಾಗಿ ಕಾರ್ಯ ನಿರ್ವಹಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ದಲಿತ ಚಳವಳಿ ಹಾದಿ ತಪ್ಪಿರುವುದು ವಿಷಾದಕರ ಸಂಗತಿ ಎಂದರು.
ಯುವ ಜನತೆಯ ನೇತಣತ್ವದಲ್ಲಿ ಹೊಸದೊಂದು ಚಳವಳಿ ಕಟ್ಟಿದರೆ ಮಾತ್ರ ಭಾರತದಲ್ಲಿ ಸಾಮಾಜಿಕ ಬದಲಾವಣೆ ಸಾಧ್ಯವೆಂದು ದೇವನೂರು ಮಹದೇವ ಪ್ರತಿಪಾದಿಸಿದರು.
ಸಾಮಾಜಿಕ ಬದಲಾವಣೆ ತರಲು ನಾವು ನಮಗಾಗಿ ಬದುಕುವಂತ ದಿನಗಳಿಗಾಗಿ ಎದುರು ನೋಡದೆ ಮುಂದಿನ ಯುವ ಪೀಳಿಗೆ ದೇಶದ ವ್ಯವಸ್ಥೆಯನ್ನು ಸರಿಪಡಿಸುವುದಕ್ಕೆ ಸಾಧ್ಯವಾಗುವಂತಹ ವಾತಾವರಣ ಕಲ್ಪಿಸಬೇಕು ಹಾಗೂ ಯುವಕರು ಸಹ ಇದನ್ನು ನೆರವೇರಿಸುವಂತಾಗಬೇಕೆಂದು ಆಶಿಸಿದರು.
ಮುಂದಿನ ದಿನಗಳಲ್ಲಿ ಸಮಾಜದ ಬದಲಾವಣೆಗೆ ಇಂದಿನ ಯುವ ಪೀಳಿಗೆಯ ನಾಯಕತ್ವದಲ್ಲಿ ಚಳವಳಿ ರೂಪುಗೊಂಡರೆ, ಆಗ ಮಾತ್ರ ಇಂದಿನ ಜಾಗತಿಕ ವೇಗಕ್ಕನುಗುಣವಾಗಿ ಬದಲಾವಣೆಯನ್ನು ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮತ್ತೊಂದೆಡೆ ಜೀವನದ ಮುಖ್ಯ ಸ್ಥರಗಳಾದ ಸಂಸ್ಕೃತಿ, ರಾಜಧರ್ಮ, ಜೀವನ ಕ್ರಮ, ಪ್ರಕೃತಿ, ಸಾಮಾಜಿಕ ಸಂಬಂಧ ಎಲ್ಲವೂ ಕೆಟ್ಟುಹೋಗುತ್ತಿದೆ ಎಂದು ವಿಷಾಧಿಸಿದ ದೇವನೂರು ಮಹದೇವ್ ಅವರು, ಇಂದು ಮನುಷ್ಯ ಮತ್ತು ಪ್ರಕೃತಿ ನಡುವೆ ಇರಬೇಕಾದ ಸಮತಲದ ಹೊಂದಾಣಿಕೆ ಮರೆಯಾಗುತ್ತಿದ್ದು, ಮನುಷ್ಯನ ನಿರಂತರ ಕ್ರೌರ್ಯದ ಪರಿಣಾಮ  ಪ್ರಕೃತಿಯು ಆಕ್ರಂದನ-ಚೀತ್ಕಾರ ಮಾಡುತ್ತಿದೆ, ಮನುಷ್ಯ ತನ್ನ ದಾಳಿ ಮುಂದುವರೆಸಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.
ನಾವು ಸಮಾಜದಲ್ಲಿ ನಮಗಾಗಿ ಬದುಕುತ್ತಿಲ್ಲ, ನಮ್ಮ ನೆರೆಯವರನ್ನು ಒಪ್ಪಿಸುವ ಸಲುವಾಗಿ ನಾವು ಆಚರಣೆಗಳನ್ನು ಮಾಡುತ್ತಿದ್ದೇವೆ, ಹಾಗೇಯೇ ಬದುಕುತ್ತಿದ್ದೇವೆ ಜಾತಿ ವಿಚಾರದಲ್ಲೂ ಸಹ ನಾವು ಇತರರನ್ನು ಒಪ್ಪಿಸುವ ಸಲುವಾಗಿ ಬೇರೊಬ್ಬರಿಗಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ಸೂಚ್ಯವಾಗಿ ನುಡಿದರು.
ನಾಯಕತ್ವದ ಸ್ಪರ್ಧೆಯ ಕಾರಣಕ್ಕೆ ಇಂದು ದಲಿತ ಚಳುವಳಿ ಸಂಘಟನೆಗಳು ಕೆಲವು ಭಾಗಗಳಾಗಿ ವಿಂಗಡನೆಯಾಗಿದ್ದರೂ, ಇಂದಿಗೂ ಮೂಲ ದಲಿತ ಚಳವಳಿಯ ಹಾದಿ ತಪ್ಪಿಲ್ಲ. ನಾಯಕತ್ವದಲ್ಲಿರುವ ಎಲ್ಲಾ ಮೂಲ ದಸಂಸದವರು ಇಂದಿಗೂ ಮೂಲ ಸಿದ್ಧಾಂತಕ್ಕೆ ಚ್ಯುತಿಬಾರದಂತೆ ತಮ್ಮ ಶಕ್ತ್ಯಾನುಸಾರ ಹೋರಾಟ ನಡೆಸುತ್ತಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಆದಿಮ ಸಂಸ್ಥೆಯ ಕೋಟಿಗಾನಹಳ್ಳಿ ರಾಮಯ್ಯ, ನಿವೃತ್ತ ಡಿ.ಐ.ಜಿ. ಹರಿಕೇಶ್, ಕೆ.ಎನ್. ತ್ಯಾಗರಾಜ್, ಡಾ.ಶಿವಪ್ಪ, ರಮೇಶ್, ಚಾಣಕ್ಯ ಇದ್ದರು. 90ನೇ ಹುಣ್ಣಿಮೆ ಹಾಡಿನ ಪ್ರಯುಕ್ತ ಗದ್ದುಗೆ ದಾಸಪ್ಪನವರನ್ನು ಗೌರವಿಸಲಾಯಿತು. ಅಜೀವಕ ಗುರುಕುಲದ ಜಿ.ಮುನಿರೆಡ್ಡಿ ಹಾಡುಗಾರಿಕೆ ರೋಮಾಂಚನ ಮೂಡಿಸಿತು.
ಸಾಹಿತಿ ದೇವನೂರು ಮಹದೇವ ಅವರು ತಮ್ಮ ಕಾದಂಬರಿ ಕುಸುಮ ಬಾಲೆಯ ಕುರಿತು ವಿದ್ಯಾರ್ಥಿಗಳು, ಸಭೀಕರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement