ಟೆಂಡರ್ ಕರಾರಿಗೆ ನಕಲಿ ಬ್ಯಾಂಕ್ ಗ್ಯಾರಂಟಿ
- ಪಾ.ಶ್ರೀ. ಅನಂತರಾಮ್
ಕಪ್ರ ವಾರ್ತೆ, ಕೋಲಾರ, ಅ.20
ಜಲ ಸಂಪನ್ಮೂಲ ಇಲಾಖೆಗೆ ಸೇರಿದ ಸಣ್ಣ ನೀರಾವರಿ ವಿಭಾಗದಿಂದ ಕೈಗೆತ್ತಿಗೊಂಡಿರುವ ವಿವಿಧ ಕಾಮಗಾರಿಗಳಿಗೆ ಟೆಂಡರ್ ಪಡೆದಿದ್ದ ಇಬ್ಬರು ಗುತ್ತಿಗೆದಾರರು ಕರಾರು ಮಾಡಿಕೊಳ್ಳುವ ಸಮಯದಲ್ಲಿ ನೀಡಬೇಕಾದ ಭದ್ರತಾ ರೇವಣಿಗಾಗಿ ನಕಲಿ ಬ್ಯಾಂಕ್ ದಾಖಲೆಗಳನ್ನು ನೀಡುವ ಮೂಲಕ ಟೆಂಡರ್ ನಿಯಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.
ಕೋಲಾರ ಜಿಲ್ಲೆ ವ್ಯಾಪ್ತಿಯಲ್ಲಿ ಸರ್ಕಾರದ ಯಾವುದೇ ಕಾಮಗಾರಿಗಳಿಗೆ ಮೂಲ ಗುತ್ತಿಗೆ ಪಡೆಯುವ ಟೆಂಡರ್ ದಾರರು ಕರಾರು ಮಾಡಿಕೊಳ್ಳುವ ಸಮಯದಲ್ಲಿ ಟೆಂಡರ್ ಮೊತ್ತಕ್ಕೆ ಅನುಗುಣವಾಗಿ ಬ್ಯಾಂಕುಗಳಿಂದ ಭದ್ರತಾ ಠೇವಣಿಗೆ ಸಂಬಂಧಿಸಿದ ದಾಖಲೆ ಒದಗಿಸಬೇಕು.
ಆದರೆ ತುಮಕೂರು ಜಿಲ್ಲೆಯ ಉದಯ ಶಿವಕುಮಾರ್ ಎಂಬ 1ನೇ ದರ್ಜೆ ಗುತ್ತಿಗೆದಾರರು ಕೋಲಾರ ತಾಲೂಕಿನ ಕೋಡಿಕಣ್ಣೂರು ಕೊಡಗಿಕೆರೆ ಮತ್ತು ಅರಹಳ್ಳಿ ಕೆರೆಯ ಅಭಿವೃದ್ಧಿ ಕಾಮಗಾರಿಯ ಟೆಂಡರ್ ಪಡೆದಿದ್ದು ಲೆಕ್ಕ ಶೀರ್ಷಿಕೆ 4702ರ ಸುಮಾರು ರು. 1 ಕೋಟಿ ವೆಚ್ಚದ ಕಾಮಗಾರಿಗೆ ಇವರು ನೀಡಿರುವ ಬ್ಯಾಂಕ್ ಗ್ಯಾರೆಂಟಿ ನಕಲಿಯಾಗಿರುವುದು ದೃಢಪಟ್ಟಿದೆ.
ಉದಯ ಶಿವಕುಮಾರ್ ಅವರು 19-9-2013ರಂದು ಸಣ್ಣ ನೀರಾವರಿ ಇಲಾಖೆಗೆ ಕೋಲಾರ ವಿಜಯ ಬ್ಯಾಂಕಿನ ನಕಲಿ ಲೇಟರ್ ಹೆಡ್ ಸೃಷ್ಟಿಸಿ ಕಾಮಗಾರಿಗಳ ಕರಾರು ಬಾಬ್ತಿನ ಭದ್ರತಾ ಠೇವಣಿಗೆ ಸಂಬಂಧಿಸಿದ ದಾಖಲೆ ನೀಡಿದ್ದಾರೆ.
ನಕಲಿ ದಾಖಲೆ ಸೃಷ್ಟಿಛ ಈ ರೀತಿ ನಕಲಿ ಭದ್ರತಾ ಠೇವಣಿ ತೋರಿಸುವುದಕ್ಕೆ ಬ್ಯಾಂಕ್ ಖಾತೆಯಲ್ಲಿ ನಿಗಧಿತ ಮೊತ್ತ ಇಲ್ಲದಿರುವುದು ಕಾರಣವಾಗಿದೆ. ಟೆಂಡರ್ದಾರ ಉದಯ ಶಿವಕುಮಾರ್ ಅವರು, ಬ್ಯಾಂಕಿನಲ್ಲಿ ನಿರ್ಧಿಷ್ಟ ಠೇವಣಿ ಇಲ್ಲದಿದ್ದರೆ ಕಾಮಗಾರಿಗಳ ಗುತ್ತಿಗೆ ಸಿಗಲಾದರು ಎಂಬ ಕಾರಣದಿಂದ ಟೆಂಡರ್ ಕರಾರು ಸಮಯದಲ್ಲಿ ವಿಜಯ ಬ್ಯಾಂಕಿನಿಂದ ನೀಡಿರುವ ರೀತಿಯಲ್ಲೇ ನಕಲಿ ದಾಖಲೆ ಸೃಷ್ಟಿಸಿ
ಬ್ಯಾಂಕಿನಿಂದ ಸ್ಪಷ್ಟನೆ: ಸಣ್ಣ ನೀರಾವರಿ ಇಲಾಖೆಗೆ ಸಲ್ಲಿಸಿ ಕಾಮಗಾರಿಯ ಆದೇಶ ಪತ್ರ ಪಡೆದಿದ್ದಾರೆ.
ಕಾಮಗಾರಿ ಮುಗಿಯುವ ಮುನ್ನವೇ 47.91 ಲಕ್ಷ ರು.ಗಳನ್ನು ಪಡೆದಿದ್ದಾರೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆ ಸಾರ್ವಜನಿಕರು ದೂರು ನೀಡಿದ್ದ ಹಿನ್ನಲೆಯಲ್ಲಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಎನ್. ಕೃಷ್ಣಪ್ಪನವರು ಬ್ಯಾಂಕ್ ಗ್ಯಾರೆಂಟಿಗೆ ಸಂಬಂಧಿಸಿದ ದಾಖಲೆಯ ವಾಸ್ತವಾಂಶ ತಿಳಿಯಲು ಗುತ್ತಿಗೆದಾರ ನೀಡಿದ್ದ ಪತ್ರಗಳನ್ನು ವಿಜಯ ಬ್ಯಾಂಕಿಗೆ 3-10-2013 ರಂದು ಕಳುಹಿಸಲಾಗಿ ಬ್ಯಾಂಕಿನ ಅಧಿಕಾರಿಗಳು ಪರಿಶೀಲಿಸಿ ನಕಲಿ ದಾಖಲೆ ಎಂಬುದನ್ನು ದೃಢಿಕರಿಸಿ 5-10.2013ರಂದು ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಪತ್ರ ಬರೆದಿದ್ದಾರೆ.
ಠೇವಣಿಯ ಪತ್ರ ನೀಡಿಲ್ಲ: ಬ್ಯಾಂಕಿನಿಂದ ಉದಯ ಶಿವಕುಮಾರ್ ಅವರಿಗೆ ಲೆಕ್ಕ ಶೀರ್ಷಿಕೆ 4702ರ ಕಾಮಗಾರಿಗೆ ಸಂಬಂಧಿಸಿದ ಯಾವುದೇ ಭದ್ರತಾ ಠೇವಣಿಯ ಪತ್ರ ನೀಡಿಲ್ಲ, ಗುತ್ತಿಗೆದಾರರು ಸಲ್ಲಿಸಿರುವ ಪತ್ರ ನಕಲಿಯಾಗಿದೆ, ಮೊಹರು ಮತ್ತು ಸಹಿ ನೈಜತೆಯಾಗಿಲ್ಲವೆಂದು ತಿಳಿಸಿರುವುದರಿಂದ ಇಇ ಕೃಷ್ಣಪ್ಪನವರು 10-10-2013ರಂದು ಉದಯಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿ ಬಾಕಿ ಇರುವ ಕಾಮಗಾರಿಗಳನ್ನು ತಕ್ಷಣ ಸ್ಥಗತಗೊಳಿಸಬೇಕು, ಈ ಕ್ಷಣದಿಂದ ಗುತ್ತಿಗೆಯ ಪರವಾನಗಿ ರದ್ದು ಆಗಿರುವುದರಿಂದ ಮುಂದೆ ಇಲಾಖೆಯಿಂದ ಕೈಗೊಳ್ಳುವ ಯಾವುದೇ ಕಾಮಗಾರಿಯಲ್ಲಿ ಭಾಗವಹಿಸುವಂತಿಲ್ಲವೆಂದು ತಿಳಿಸಿದ್ದಾರೆ. ಗುತ್ತಿಗೆಗಾರ ಉದಯ ಶಿವಕುಮಾರ್ ಎಸಗಿರುವ ದ್ರೋಹ, ವಂಚನೆಯ ವಿರುದ್ಧ ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಎಂಜನಿಯರ್ ಅವರಿಗೆ ಅ.10ರಂದೇ ವರದಿ ಮಾಡಿದ್ದಾರಲ್ಲದೆ, ಕೋಲಾರದಲ್ಲಿನ ಗುತ್ತಿಗೆದಾರರು ಮಾಡುತ್ತಿರುವ ಲೋಪದ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಗಮನಕ್ಕೂ ತಂದಿದ್ದಾರೆ.
ಎರಡನೇ ಪ್ರಕರಣ: ಇದೇ ರೀತಿ ಕೋಲಾರ ಜಿಲ್ಲೆಯ ಮುಳಬಾಗಲು ಪಟ್ಟಣದ ಮುತ್ಯಾಲಪೇಟೆಯ ನಿವಾಸಿ 1ನೇ ದರ್ಜೆ ಗುತ್ತಿಗೆದಾರ ಎಸ್. ವೆಂಕಟಕೃಷ್ಣಾರೆಡ್ಡಿ ಎಂಬವರು 2011-12 ಮತ್ತು 13ನೇ ಸಾಲಿನ ಅವಧಿಯಲ್ಲಿ 8 ವಿವಿಧ ಕಾಮಗಾರಿಗಳಿಗೆ ಟೆಂಡರ್ ಪಡೆದಿದ್ದು ಇದಕ್ಕೆ ಸಂಬಂಧಿಸಿದ 9 ಬ್ಯಾಂಕ್ ಗ್ಯಾರೆಂಟಿ ಪತ್ರಗಳನ್ನು ಬ್ಯಾಂಕಿನಿಂದ ಅಧಿಕೃತವಾಗಿ ಪಡೆಯದೆ ತಾವೇ ನಕಲು ಮಾಡಿ ಕಳೆದ ಸೆಪ್ಟೆಂಬರ್ 19ರಂದು ಸಲ್ಲಿಸಿದ್ದು ಇವರ ವಿರುದ್ಧವೂ ಕ್ರಮಕ್ಕೆ ಶಿಪಾರಸ್ಸು ಮಾಡಿದ್ದಾರೆ.
ವೆಂಕಟಕೃಷ್ಣಾರೆಡ್ಡಿಯವರು ಸದರಿ ಕಾಮಗಾರಿಗಳಿಗೆ ಮುಳಬಾಗಲು ಪ್ರಗತಿ ಗ್ರಾಮೀಣ ಬ್ಯಾಂಕಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಇಲಾಖೆಗೆ ಸಲ್ಲಿಸಿದ್ದಾರೆ.
ಈ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಇಲಾಖೆಯ ಇಇ ಎಸ್.ಎನ್. ಕೃಷ್ಣಪ್ಪನವರು ಮುಳಬಾಗಲು ಪ್ರಗತಿ ಗ್ರಾಮೀಣ ಬ್ಯಾಂಕಿಗೆ ಪತ್ರ ಬರೆದು ನೈಜ ಸಂಗತಿ ತಿಳಿಸುವಂತೆ ಕೋರಿದಾಗ, ಬ್ಯಾಂಕಿನ ಅಧಿಕಾರಿಗಳು ಗುತ್ತಿಗೆದಾರ ವೆಂಕಟಕೃಷ್ಣಾರೆಡ್ಡಿ ಬ್ಯಾಂಕಿನಿಂದ ಸದರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಯಾವುದೇ ಭದ್ರತಾ ಠೇವಣಿಯ ಪತ್ರ ಪಡೆದಿಲ್ಲ ಹಾಗೂ ಇಲಾಖೆಗೆ ಸಲ್ಲಿಸಿರುವ ದಾಖಲೆಗಳಲ್ಲಿ ಇರುವ ಮೊಹರು ಮತ್ತು ಸಹಿ ನಕಲಿ ಎಂದು ದೃಢಿಕರಿಸಿರುವುದರಿಂದ ಇಇಯವರು ಗುತ್ತಿಗೆದಾರರಿಗೆ ಸೆ.29 ರಂದು ನೋಟಿಸ್ ಜಾರಿ ಮಾಡಿ, ಕಾಮಗಾರಿ ಮುಂದುವರೆಸದಂತೆ ಸೂಚಿಸಿದ್ದಾರಲ್ಲದೆ, ಗುತ್ತಿಗೆಗಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಸರ್ಕಾರಕ್ಕೆ ಶಿಪಾರಸ್ಸು ಮಾಡಿದ್ದಾರೆ.
ಸಣ್ಣ ನೀರಾವರಿ ಇಲಾಖೆಯಲ್ಲಿ ಮಾತ್ರವಲ್ಲದೆ ಲೋಕೋಪಯೋಗಿ ಇಲಾಖೆ, ಜಿಪಂ ಎಂಜನಿಯರಿಂಗ್ ವಿಭಾಗ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲೂ ಅನೇಕ ಗುತ್ತಿಗೆದಾರರು ಕಾಮಗಾರಿಗಳ ಕರಾರಿಗಾಗಿ ನಕಲಿ ಬ್ಯಾಂಕ್ ಗ್ಯಾರೆಂಟಿ ನೀಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನ ವ್ಯಕ್ತವಾಗಿದ್ದು ಸರ್ಕಾರ ಸಮಗ್ರ ತನಿಖೆ ಕೈಗೊಂಡಲ್ಲಿ ಮತ್ತಷ್ಟು ವಂಚನೆ ಬಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಇಇ ಕೃಷ್ಣಪ್ಪ ಹೇಳಿದ್ದು: ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಳ್ಳುವ ಕಾಮಗಾರಿಗಳಿಗೆ ಗುತ್ತಿಗೆದಾರರು ಟೆಂಡರ್ಗೆ ನಿಗದಿ ಮಾಡುವ ಮೊತ್ತಕ್ಕೆ ಬ್ಯಾಂಕ್ ಗ್ಯಾರೆಂಟಿ ನೀಡಬೇಕು, ಇದಕ್ಕೆ ಬ್ಯಾಂಕಿನಿಂದ ಬಡ್ಡಿ ಸಿಗುತ್ತದೆ. ಆದರೆ ಕೆಲ ಗುತ್ತಿಗೆದಾರರು ನಕಲಿ ದಾಖಲೆ ನೀಡುವ ಮೂಲಕ ಸರ್ಕಾರಕ್ಕೆ ವಂಚನೆ ಮಾಡಲು ಯತ್ನಿಸಿದ್ದಾರೆ. ನಮ್ಮ ಇಲಾಖೆಯಲ್ಲಿ ಈಗ ಎರಡು ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ವರದಿ ಮಾಡಿದ್ದೇನೆ ಹಾಗೂ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.