ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸರ್‌ಎಂವಿ ಕ್ರೀಡಾಂಗಣದಲ್ಲಿ ಬ್ಯಾಸ್ಕೆಟ್ ಬಾಲ್ ಅಂಕಣ

Srinivasa Murthy VN
Updated On : 21 Oct 2013, 12:01 pm

ಕಪ್ರ ವಾರ್ತೆ, ಕೋಲಾರ, ಅ.20
ನಗರದ ಅಂತರಗಂಗೆ ರಸ್ತೆಯ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸುಸಜ್ಜಿತವಾದ ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಿಲ್ಲಾಧಿಕಾರಿ ಡಿ.ಕೆ. ರವಿ ಭರವಸೆ ನೀಡಿದರು.
ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಬ್ಯಾಸ್ಕೆಟ್ ಬಾಲ್ ಅಂಕಣದಲ್ಲಿ ಭಾನುವಾರ ಚಾಮುಂಡೇಶ್ವರಿ ಕ್ರೀಡಾ ಯುವಕರ ಸಂಘ ಹಮ್ಮಿಕೊಂಡಿದ್ದ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಸಂಘದವರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರತಿ ದಿನ ಯುವಕರು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸದೃಢ ಆರೋಗ್ಯ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಉಲ್ಲಾಸದಿಂದ ಭಾಗವಹಿಸಲು ಸಹಕಾರಿಯಾಗಲಿದೆ ಎಂದರು.
ದೇಶದ ಸಂಪತ್ತು ಆಗಿರುವ ಯುವಜನತೆ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕು. ಸುಸಜ್ಜಿತವಾದ ಅಂಕಣವಿಲ್ಲದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿರುವುದು ಹೆಮ್ಮೆ ಪಡುವಂತಹ ಸಂಗತಿ ಎಂದರು.
ಚಾಮುಂಡೇಶ್ವರಿ ಕ್ರೀಡಾ ಯುವಕರ ಸಂಘದ ಅಧ್ಯಕ್ಷ ದೇವಣ್ಣ ಮಾತನಾಡಿ, ಕೀಲುಕೋಟಿ, ಕಾರಂಜಿಕಟ್ಟೆ, ಮುನೇಶ್ವರ ನಗರ, ಖಾದ್ರಿಪುರ ಸೇರಿದಂತೆ ವಿವಿಧ ಬಡಾವಣೆಗಳಿಂದ ಸುಮಾರು 25 ರಿಂದ 30 ಜನ ಯುವಕರು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಇಲ್ಲಿಗೆ ಆಗಮಿಸಿ ಬ್ಯಾಸ್ಕೆಟ್ ಬಾಲ್ ಆಟವನ್ನು ಆಡುತ್ತಾರೆ. ಆದರೆ ಇಲ್ಲಿ ಸುಸಜ್ಜಿತವಾದ ಅಂಕಣವಿಲ್ಲದೆ ಇಲ್ಲದಿರುವುದರಿಂದ ಜಿಲ್ಲಾ ಆಡಳಿತ ಗಮನ ಹರಿಸಬೇಕೆಂದರು.
ಈ ಬಗ್ಗೆ ಈ ಹಿಂದಿನ ಜಿಲ್ಲಾಧಿಕಾರಿಗಳಿಗೆ ಮತ್ತು ಕ್ರೀಡಾಧಿಕಾರಿಗಳಿಗೆ ಮನವಿ  ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದ ಅವರು, ಯುವ ಕ್ರೀಡಾಪಟುಗಳ ಬೇಡಿಕೆ ಈಡೇರುವಂತೆ ಕೋರಿದರು. ಇದಕ್ಕೆ ಸ್ಪಂದಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಕೆ. ರವಿ ಈ ಬಗ್ಗೆ ಪರಿಶೀಲಿಸಿ ಅದಷ್ಟು ಬೇಗ ಸುಸಜ್ಜಿತವಾದ ಬ್ಯಾಸ್ಕೆಟ್ ಬಾಲ್ ಅಂಕಣ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಸದಸ್ಯ ಕಾಶಿ ವಿಶ್ವನಾಥ್ ವಹಿಸಿದ್ದರು. ಚಾಮುಂಡೇಶ್ವರಿ ಕ್ರೀಡಾ ಯುವಕರ ಸಂಘದ ಸದಸ್ಯರಾದ ಬಾಬು, ರವಿ, ಸತೀಶ್, ಆನಂದ್, ಶಂಕರ್, ಸಂತೋಷ್, ಅಮರ್, ನಂದೀಶ್, ಪ್ರಸಾದ್, ರಾಜೇಶ್, ದೇವು, ಶ್ರೀನಿವಾಸರೆಡ್ಡಿ, ಗುರು, ಅನು, ಧನುಷ್, ಲೋಕೇಶ್, ಚೇತನ್, ಸುನೀಲ್ ಇದ್ದರು.

ಅಕ್ರಮ ಮರಳು; 10 ಎಂಜಿನ್ ನಾಶ
ಮುಳಬಾಗಲು: ತಾಲೂಕಿನ ಮರಳುಮೇಡು, ಮೇಲೇರಿ, ಕಲಿಕಿರಿ  ಸುತ್ತಮುತ್ತಲ ಅಕ್ರಮ ಮರಳು ಕೇಂದ್ರಗಳ ಮೇಲೆ ನೂತನ ಅಕ್ರಮ ಮರಳು ತಡೆ ಪಡೆ ದಾಳಿ ಮಾಡಿ 15 ಮರಳು  ಫೀಲ್ಟರಿಂಗ್ ಕೇಂದ್ರ ಹಾಗೂ 10 ಎಂಜಿನ್ ನಾಶಪಡಿಸಿತು. ಕಾರ್ಯಾಚರಣೆಯಲ್ಲಿ ಕೋಲಾರ ಸಬ್ ಇನ್ಸ್‌ಪೆಕ್ಟರ್ ಮಹದೇವಯ್ಯ, ಕಂದಾಯ ನಿರೀಕ್ಷಕ ಸಿ. ಸುಬ್ರಮಣಿ, ಲೋಕೋಪಯೋಗಿ ಇಲಾಖೆಯ ಬಾಬು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement