ಆರ್ಎಸ್ಎಸ್ ಪಥಸಂಚಲನ
ಕೆಜಿಎಫ್: ನಗರದ ಸುಮತಿ ಜಾನ್ ಪ್ರೌಢಶಾಲೆಯಲ್ಲಿ ಕೆಜಿಎಫ್ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವತಿಯಿಂದ ಅ.16 ರಿಂದ 23 ರ ವರೆಗೆ 9ದಿನಗಳ ಕಾಲ ಕಾರ್ಯಕ್ರಮ ಏರ್ಪಡಿಸಿದ್ದು, ಇದರಲ್ಲಿ ಕೋಲಾರ ಜಿಲ್ಲೆಯ ವಿವಿಧ ಭಾಗಗಳಿಂದ 120 ಸ್ವಯಂ ಸೇವಕರು 30ಕ್ಕೂ ಹೆಚ್ಚು ಸಂಚಾಲಕರು, ಶಿಕ್ಷಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬೌದ್ದಿಕ, ಶಾರೀರಕವಾಗಿ ಮತ್ತು ಮಾನಸಿಕವಾಗಿ ಸಂಘದ ವತಿಯಿಂದ ಪ್ರಾಥಮಿಕ ಶಿಕ್ಷಾವರ್ಗ ಕಾರ್ಯಕ್ರಮ ಆಯೋಜಿಸಲಾಗಿದ್ದು ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಧವನ್ ಅವರು ತಿಳಿಸಿದರು. ಅ.23 ರಂದು ನಗರಸಭೆ ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಮತ್ತು ರಸ್ತೆಗಳಲ್ಲಿ ಧ್ವಜ ಸಮೇತ ಗಣವೇಶದಾರಿಗಳ ಆಕರ್ಷಕ ಪಥಸಂಚಲನ ನಡೆಸಲಾಗುತ್ತದೆ ಎಂದು ತಿಳಿಸಿದರು. ಈ ವೇಳೆ ಕರ್ನಾಟಕ ಪ್ರಾಂತ ಆರ್ಎಸ್ಎಸ್ ಶಾರೀರಕ ಪ್ರಮುಖ್ ಚಂದ್ರಶೇಖರ ಜಹಗೀರ್ಧಾರ್ ಮುಖ್ಯ ಭಾಷಣ ಮಾಡಲಿದ್ದಾರೆ.
ವಾಲ್ಮೀಕಿ ಜಯಂತಿ
ಟೇಕಲ್: ಸಮೀಪದ ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಯ ವೆಂಕಟರಾಜನಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಅರ್ಪಿಸಿದ ವಾಲ್ಮೀಕಿ ನಾಯಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ವೆಂಕಟರಾಮ್ ಮಾತನಾಡಿದರು. ತಾಲೂಕು ಅಧ್ಯಕ್ಷ ಭುವನಹಳ್ಳಿ ಅಬ್ಬಯ್ಯಪ್ಪ, ಟಿ.ಕೆ. ನಾಗರಾಜ್ ಮಾತನಾಡಿದರು. ವೆಂಕಟಚಲಪತಿ, ಗ್ರಾ.ಪಂ. ಸದಸ್ಯರಾದ ಗೌರಮ್ಮ, ರಾಮಚಂದ್ರಗೌಡ, ಚಂದ್ರಮ್ಮ, ತಿಮ್ಮನಾಯಕನಹಳ್ಳಿ ಮುನಿರಾಜ್, ಶಿವಾಜಿರಾವ್, ಕೋಟೆ ಮುನಿರಾಜ್, ಹುಂಗೇನಹಳ್ಳಿ ವೆಂಕಟೇಶ್, ಕಡತೂರು ಶ್ರೀನಿವಾಸ್, ಚೌಡಪ್ಪ, ಕೃಷ್ಣಪ್ಪ, ಶ್ರೀನಿವಾಸ್, ಮುನಿಯಪ್ಪ, ಆಂಜಿನಪ್ಪ ಇದ್ದರು.
ಅಂತರ್ಜಲ ಅಭಿವೃದ್ಧಿಗೆ ಸಹಕರಿಸಲು ಕರೆ
ಕೋಲಾರ: ಜಿಲ್ಲೆಯಲ್ಲಿ ಇತ್ತೀಚೆಗೆ ಬಿದ್ದಿರುವ ಮಳೆಯಿಂದಾಗಿ ಅನೇಕ ಕೆರೆಗಳಿಗೆ ನೀರು ಬಂದಿದ್ದು ರೈತರು ಮತ್ತು ಸಾರ್ವಜನಿಕರು ಕೆರೆಯ ನೀರನ್ನು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಮಾಡದೆ ಅಂತರ್ಜಲ ಮರುಪೂರಣಕ್ಕೆ ಸಹಕಾರ ನೀಡಬೇಕೆಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಎನ್. ಕೃಷ್ಣಪ್ಪ ಕರೆ ನೀಡಿದ್ದಾರೆ. ಕೆರೆಗಳಲ್ಲಿನ ನೀರು ಖಾಲಿಯಾಗದಂತೆ ನೋಡಿಕೊಂಡಲ್ಲಿ ಅಂತರ್ಜಲ ಸಮಸ್ಯೆ ನಿವಾರಣೆಯಾಗುತ್ತದೆ, ಇದರಿಂದ ಬತ್ತಿರುವ ಕೊಳವೆ ಬಾವಿಗಳು ಪುನಶ್ಚೇತನಗೊಳ್ಳುವುದಕ್ಕೆ ಸಹಾಯವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಮೋದಿ ಆಟ ನಡೆಯದು
ಬಂಗಾರಪೇಟೆ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಬಿಜೆಪಿಯವರು ಮುಂದಿಟ್ಟುಕೊಂಡು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರಲು ಹಗಲು ಕನಸು ಕಾಣುತ್ತಿದ್ದಾರೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಟೀಕಿಸಿದರು. ಪುರಸಭೆವತಿಯಿಂದ ಪಟ್ಟಣ ಅಭಿವೃದ್ಧಿಗೆ ರು. 5 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಮೋದಿ ಮಾಟಕ್ಕೆ ಜನ ಬೆರಗಾಗುವುದಿಲ್ಲ ಎಂದರು.
ಪ್ರಶಸ್ತಿಗಾಗಿ ಅರ್ಜಿಗಳ ಆಹ್ವಾನ
ಕೋಲಾರ: ನಗರದ ಆದರ್ಶ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ನೆನಪಿನಲ್ಲಿ ಸರ್ಕಾರಿ ಸ್ವಾಮ್ಯದ ರಾಜ್ಯ-ರಾಷ್ಟ್ರ ಪ್ರಶಸ್ತಿ ಗಳಿಸಿರುವ ಮಹನೀಯರನ್ನು ಹಾಗೂ ಅವರ ಸೇವೆಯನ್ನು ಮತ್ತೊಮ್ಮೆ ನೆನಪಿಸುವ ಅವರನ್ನು ಅಭಿನಂದಿಸುವ ಸಮಾರಂಭವನ್ನು ತನ್ನ 27 ನೇ ವರ್ಷಾಚರಣೆ ಜೊತೆಗೆ ಹಮ್ಮಿಕೊಳ್ಳಲಾಗಿದ್ದು ಪ್ರಶಸ್ತಿ ಪುರಸ್ಕೃತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಪ್ರಶಸ್ತಿಗಳನ್ನು ಪಡೆದವರು ಮಾತ್ರ ಅರ್ಜಿ ಸಲ್ಲಿಸಬಹುದು. ತಾವು ಪಡೆದ ಪ್ರಶಸ್ತಿ ಪತ್ರದ ಬಣ್ಣದ ಜೆರಾಕ್ಸ್, ಛಾಯಾಚಿತ್ರಗಳು, ಪಾಸ್ಪೋರ್ಟ್ ಅಳತೆ2 ಭಾವಚಿತ್ರಗಳು, ಜೊತೆಗೆ ತಮ್ಮ ವಿಳಾಸ ಹಾಗೂ ದೂರವಾಣೆ ಸಂಖ್ಯೆಯೊಂದಿಗೆ ಅಭಿನಂದನಾ ಸಮಿತಿ ಆದರ್ಶ ಸಮಾಜ ಸೇವಾ ಟ್ರಸ್ಟ್, ಕಾಮಧೇನು ಆಯುರ್ವೇದ ಆಸ್ಪತ್ರೆ ಸಂಕೀರ್ಣ, 1ನೇ ತಿರುವು ಬ್ರಾಹ್ಮಣರ ಬೀದಿ, ಕೋಲಾರ. ದೂರವಾಣೆ ಸಂಖ್ಯೆ 99015-01967, 8762266777ಇಲ್ಲಿಗೆ ತಲುಪಿಸಲು ಕಾರ್ಯದರ್ಶಿ ಡಾ. ಮೌನಿ ತಿಳಿಸಿದ್ದಾರೆ.
'ಸಮುದಾಯದಲ್ಲಿ ಒಗ್ಗಟ್ಟು ಮುಖ್ಯ'
ಗೌರಿಬಿದನೂರು: ಸಮುದಾಯದಲ್ಲಿ ಒಗ್ಗಟ್ಟು ಇದ್ದರೆ ಜನಾಂಗದ ಅಭಿವೃದ್ಧಿ ಸಾಧ್ಯ ಎಂದು ವಿಧಾಸಭಾ ಉಪಾಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.
ಪಟ್ಟಣದ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಹಿಂದೂ ಸಾದರ ಸಮಾಜ ತಾಲೂಕಿನಲ್ಲಿ ಒಗ್ಗಟ್ಟಿನ ಸಮುದಾಯ ಜೊತೆಗೆ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುವುದರಲ್ಲೂ ಮುಂದಿರುವ ಜನಾಂಗ. ಕಳೆದ 40 ವರ್ಷಗಳಿಂದಲೂ ಶೈಕ್ಷಣಿಕವಾಗಿ ಹಾಗೂ ಉಚಿತ ವಿಧ್ಯಾರ್ಥಿ ನಿಲಯ ಸ್ಥಾಪಿಸಿ ಅನೇಕ ವಿಧ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಕೀರ್ತಿ ಸಮುದಾಯಕ್ಕೆ ಸಲ್ಲುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಂಘದವತಿಯಿಂದ ಹಾಗೂ ಹಿಂದೂ ಸಾದರ ಸರ್ಕಾರಿ ನೌಕರರಿಂದ ಉಪಾಸಭಾಪತಿ ಎನ್.ಎಚ್. ಶಿಶಂಕರರೆಡ್ಡಿ ಹಾಗೂ ಮುಖ್ಯಮಂತ್ರಿ ಚಂದ್ರು ದಂಪತಿಗಳಿಗೆ ಸನ್ಮಾನ ಹಮ್ಮಿಕೊಳ್ಳಾಲಾಗಿತ್ತು. ಜಿ.ವಿ. ಕೃಷ್ಣಮೂರ್ತಿ, ನಾರಾಯಣಗೌಡ, ವೆಂಕಟೇಗೌಡ, ನಂಜುಂಡೇಗೌಡ, ರಂಗಪ್ಪ, ಕೃಷ್ಣಯ್ಯ, ಜಿ.ಕೆ. ಸತೀಶ್ ಹಾಜರಿದ್ದರು.