ಇಂದು ನರೇಗಾ ವೈಯಕ್ತಿಕ ಫಲಾನುಭವಿಗಳ ಮೇಳ
ಪಾ.ಶ್ರೀ. ಅನಂತರಾಮ್
ಕೋಲಾರ: ನಗರದ ಸರ್ಕಾರಿ ಬಾಲಕರ ಕಾಲೇಜಿನ ಮುಂಭಾಗದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವೈಯಕ್ತಿಕ ಫಲಾನುಭವಿಗಳ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿ ಗ್ರಾಮ ಪಂಚಾಯಿತಿಯಿಂದ ತಲಾ 10 ಫಲಾನುಭವಿಗಳನ್ನು ಮೇಳಕ್ಕೆ ಕರೆ ತರಲು ಗ್ರಾಪಂ ಪಿಡಿಒ ಹಾಗೂ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯ 156 ಗ್ರಾಪಂಗಳಿಂದ ಸುಮಾರು 1500ಕ್ಕೂ ಹೆಚ್ಚು ಫಲಾನುಭವಿಗಳು, ಜಿಪಂ, ತಾಪಂ, ಗ್ರಾಪಂ ಸದಸ್ಯರು ಹಾಗೂ ಪಿಡಿಒಗಳು ಸೇರಿದಂತೆ ಅಂದಾಜು 2500 ರಿಂದ 3 ಸಾವಿರ ಜನರು ನರೇಗಾ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ನರೇಗಾ ಯೋಜನೆಯ ಸಮರ್ಪಕ ಅನುಷ್ಠಾನ, ಕಾಯಕ ಬಂಧು ಮತ್ತು ಕಾಯಕ ಸಂಘಗಳ ರಚನೆ, ಅರ್ಜಿಗಳ ಭರ್ತಿ ಮಾಡುವ ವಿಧಾನ ಹಾಗೂ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ನರೇಗಾ ಮೇಳ ಹಮ್ಮಿಕೊಳ್ಳಲಾಗಿದೆ. ನಗರದ ಸರ್ಕಾರಿ ಬಾಲಕ-ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಮೇಳ ನಡೆಸಲು ಉದ್ದೇಶಿಸಲಾಗಿತ್ತು.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಕಾರ್ಯಕ್ರಮವನ್ನು ಕಾಲೇಜಿನ ಪಕ್ಕದಲ್ಲಿ ಇರುವ ಒಳಾಂಗಣ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ.
ಒಳಾಂಗಣ ಕ್ರೀಡಾಂಗಣ ನಿರ್ಮಾಣಗೊಂಡು ಎರಡು ವರ್ಷ ಕಳೆದರೂ ಸಣ್ಣ ಪುಟ್ಟ ಕಾಮಗಾರಿಗಳ ಬಾಕಿಯಿಂದ ಉದ್ಘಾಟನೆಯ ಭಾಗ್ಯ ಕಂಡಿಲ್ಲ, ನರೇಗಾ ಮೇಳದ ಮೂಲಕವಾದರೂ ಕ್ರೀಡಾಂಗಣದ ಬಾಗಿಲು ತೆರೆಯುವುದನ್ನು ನೋಡುವ ಸೌಭಾಗ್ಯವನ್ನು ಜಿ.ಪಂ. ಅಧಿಕಾರಿಗಳು ಕಲ್ಪಿಸಿದ್ದಾರೆ.
ನರೇಗಾ ಮೇಳದಲ್ಲಿ ಮುಳಬಾಗಿಲು ತಾಲೂಕಿನ ಸ್ವಚ್ಛತಾ ಕಲಾ ತಂಡದಿಂದ ಬೀದಿನಾಟಕ ಪ್ರದರ್ಶನ, ಜಿ.ಪಂ ಸಿಇಒ ಎಸ್.ಎಂ. ಝುಲ್ಫಿಕಾರ್ ಉಲ್ಲಾ ರವರಿಂದ ಮೇಳದ ಬಗ್ಗೆ ಪ್ರಾಸ್ತಾವಿಕ ನುಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಆಯುಕ್ತರಾದ ಮುನೀಶ್ ಮೌದ್ಗಿಲ್, ಹಾಗೂ ಕೋಲಾರ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರಿಂದ ಭಾಷಣವಿರುತ್ತದೆ.
ಅತಿಥಿಗಳ ಭಾಷಣದ ನಂತರ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಂದ ನರೇಗಾ ಕುರಿತು ಅನಿಸಿಕೆಗಳ ಮಂಡನೆ, ನರೇಗಾ ಕಾಮಗಾರಿಗಳ ಬಗ್ಗೆ ಅನುಷ್ಠಾನ ಅಧಿಕಾರಿಗಳಿಂದ ಮಾಹಿತಿ ನೀಡಲಿದ್ದಾರೆ.