ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಡಿಸಿ ಕಚೇರಿ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ

Srinivasa Murthy VN
Updated On : 22 Oct 2013, 1:03 am

ಕೋಲಾರ: ಈಗಿರುವ ಜಿಲ್ಲಾಧಿಕಾರಿಗಳ ಕಚೇರಿಯನ್ನು ನಗರದ ಹೊರ ವಲಯದ ಟಮಕಕ್ಕೆ ಸ್ಥಳಾಂತರಿಸಲು ಜಿಲ್ಲಾಡಳಿತ ನಿರ್ಧರಿಸಿರುವುದನ್ನು ವಿರೋಧಿಸಿ ಸೋಮವಾರ ಜನಪರ ಸಂಘಟನೆಗಳು ಪ್ರತಿಭಟನೆ ನಡೆಸಿತು.
ಜಿಲ್ಲೆಯ ಸಾವಿರಾರು ಮಂದಿಯ ದಿನನಿತ್ಯದ ಅಗತ್ಯ ಮತ್ತು ವ್ಯವಹಾರಗಳಿಗೆ ಪ್ರಸ್ತುತವಿರುವ ಜಿಲ್ಲಾಧಿಕಾರಿಗಳ ಕಚೇರಿ ಜನರಿಗೆ ಹತ್ತಿರವಿದ್ದು ಕೆಲ ರಾಜಕಾಣಿಗಳ ಕುಮ್ಮಕ್ಕಿನಿಂದ ಸುಮಾರು ಆರು ಕಿ.ಮೀ ದೂರಕ್ಕೆ ಸ್ಥಳಾಂತರಿಸಲು ಉದ್ದೇಶಿಸಿರುವುದನ್ನು ಜನತೆಯ ಹಿತದೃಷ್ಟಿಯಿಂದ ಕೈಬಿಡಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.
ಕಚೇರಿ ಸ್ಥಳಾಂತರದಿಂದ ಭೂ ಮಾಫಿಯಗಳಿಗೆ ಲಾಭವಾಗುತ್ತದೆಯೇ ಹೊರತು ಜನ ಸಾಮಾನ್ಯರಿಗಲ್ಲ. ಜಿಲ್ಲಾಡಳಿತ ನೇತೃತ್ವ ವಹಿಸಿರುವ ಜಿಲ್ಲಾಧಿಕಾರಿಗಳ ಕಚೇರಿಯನ್ನು ಭೂ ಮಾಫಿಯ ಹಾಗೂ ಪಟ್ಟಭದ್ರರು ಅನುಕೂಲ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಬಾರದೆಂದು ಆಗ್ರಹಿಸಿದರು.
ಪ್ರಸ್ತುತ ಇರುವ ಕಚೇರಿಯು ಹಳೆಯದಾಗಿದ್ದು ದೈನಂದಿನ ಕೆಲಸಗಳಿಗೆ ಅಡಚಣೆಯಾಗುತ್ತಿದೆ, ನೂತನ ಕಟ್ಟಡವನ್ನು ಕಟ್ಟಲು ಸ್ಥಳಾವಕಾಶವಿಲ್ಲ ಎಂಬುದು ಜಿಲ್ಲಾಡಳಿತಕ್ಕೆ ಕೇವಲ ನೆಪಗಳಷ್ಟೆ. ಜನಪರ ಹೋರಾಟಗಳನ್ನು, ಸಾರ್ವಜನಿಕರನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ದೂರವಿರಿಸುವ ಹುನ್ನಾರವಿದು. ಕೋರ್ಟ್ ಆವರಣ ಮತ್ತು ತೋಟಗಾರಿಕೆ ಇಲಾಖೆ ಹೊರತುಪಡಿಸಿದರೆ ಸುಮಾರು ಆರುವರೆ ಎಕರೆಯಷ್ಟು ಸ್ಥಳಾವಕಾಶವಿದ್ದು ಈಗಿರುವ ಹಳೆಯ ಕಟ್ಟಡವನ್ನು ಉರಳಿಸದೆ, ಸ್ಮಾರಕವಾಗಿ ಉಳಿಸಿಕೊಂಡು ಪಕ್ಕದಲ್ಲೇ ಇರುವ ತೋಟಗಾರಿಕೆ ಇಲಾಖೆಯ ನರ್ಸರಿಯನ್ನು ಬೇರೆಡೆಗೆ ವರ್ಗಾಯಿಸಿ ಜಿಲ್ಲಾಧಿಕಾರಿಗಳ ಕಚೇರಿಯನ್ನು ಇಲ್ಲಿಯೇ ಉಳಿಸಬಹುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿರುವ ಬಹುಮಹಡಿಗಳಂತಹ ಬೃಹತ್ ಕಟ್ಟಡವನ್ನು ಕಟ್ಟಬಹುದೆಂದು ನಿರ್ಮಾಣ ತಾಂತ್ರಿಕ ಪರಿಣಿತರೇ ಅಭಿಪ್ರಾಯ ಪಟ್ಟಿರುತ್ತಾರೆ. ಸರ್ಕಾರಗಳು ಆರ್.ಟಿ.ಐ, ಸಕಾಲದಂತಹ ಯೋಜನೆಗಳನ್ನು ಜಾರಿ ಮಾಡಿ ಆಡಳಿತವನ್ನು ಜನ ಸಾಮಾನ್ಯರ ಬಳಿ ಕೊಂಡಯ್ಯಲು ಮುಂದಾಗುತ್ತಿದ್ದರೆ, ಇತ್ತ ಜಿಲ್ಲಾಡಳಿತ ಸಾರ್ವಜನಿಕರ ಗಮನಕ್ಕೆ ಬಾರದಂತೆ ಕಚೇರಿಗಳನ್ನು ಜನ ಸಾಮಾನ್ಯರಿಂದ ದೂರಕ್ಕೆ ಕೊಂಡಯ್ಯುವ ಪ್ರಕ್ರಿಯೆಗೆ ಮುಂದಾಗಿರುವುದು ಜನ ವಿರೋಧಿ ನೀತಿಯಾಗಿದೆ ಎಂದು ಆರೋಪಿಸಿದ್ದಾರೆ.
ಜಿಲ್ಲಾಡಳಿತವನ್ನು ವರ್ಗಾಯಿಸಿದರೆ ಜಿಲ್ಲೆಯ ವಿವಿಧ ತಾಲೂಕುಗಳಾದ ಮಾಲೂರು, ಬಂಗಾರಪೇಟೆ, ಶ್ರೀನಿವಾಸಪುರ, ಗಡಿಭಾಗದ ಗ್ರಾಮಾಂತರ ಜನರಿಗೆ ಸಾರಿಗೆ ವ್ಯವಸ್ಥೆಯೇ ಸವಲಾಗುತ್ತದೆ. ಇದರಿಂದಾಗಿ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿಯಾಗಿರುತ್ತದೆ ಎಂದರು.
ಪ್ರತಿಭಟನೆಯಲ್ಲಿ ವಕೀಲ ಶ್ರೀಕೃಷ್ಣ, ಪತ್ರಕರ್ತ ಎಂ.ಜಿ.ಪ್ರಭಾಕರ್, ನಗರಸಭೆ ಸದಸ್ಯರಾದ ಗಾಂಧೀನಗರ ನಾರಾಯಣಸ್ವಾಮಿ, ಮುಬಾರಕ್, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಮುಖಂಡ ಟಿ. ವಿಜಯಕುಮಾರ್, ಸಮತಾ ಸೈನಿಕ ದಳದ ಪಂಡಿತ್ ಮುನಿವೆಂಕಟಪ್ಪ, ಎಸ್.ಎಫ್.ಐ ಜಿಲ್ಲಾಧ್ಯಕ್ಷ ಅಂಬರೀಷ್, ಅಂಚೆ ಅಶ್ವಥ್, ಎಂ. ಇಮ್ರಾನ್, ಮುಜೀಬ್, ಕಿರಣ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement