ಪೊಲೀಸರಿಗೆ ಜನತೆ ಸಹಕಾರ ಅಗತ್ಯ
ಕನ್ನಡಪ್ರಭ ವಾರ್ತೆ, ಕೋಲಾರ,ಅ.21
ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುವ ಪೊಲೀಸರಿಗೆ ಜನತೆ ಸಹಕಾರ ಅತ್ಯವಶ್ಯಕ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ರೇಣುಕಾ ಪ್ರಸಾದ್ ಕರೆ ನೀಡಿದರು.
ನಗರದ ಪೊಲೀಸ್ ಪರೆಡ್ ಮೈದಾನದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ತವ್ಯ ನಿರತರಾಗಿದ್ದಾಗ ಹುತಾತ್ಮರಾದ ಪೊಲೀಸರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಪೊಲೀಸರು ನಮಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಸಮಾಜ ಘಾತುಕ ಶಕ್ತಿಗಳ ವಿರುದ್ಧ ಹೋರಾಡುವಾಗ ಜೀವ ಕಳೆದುಕೊಳ್ಳುತ್ತಿದ್ದಾರೆ. ನಾಗರಿಕರ ಮಾನ-ಪ್ರಾಣ, ಆಸ್ತಿ-ಪಾಸ್ತಿ ರಕ್ಷಣೆಗೆ ಹೋರಾಟ ನಡೆಸುವ ಪೊಲೀಸರ ಸೇವೆಯನ್ನು ಪ್ರತಿಯೊಬ್ಬರು ಮೆಚ್ಚಬೇಕು. ಹಾಗೆಯೇ ನಮಗಾಗಿ ದುಡಿಯುವ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಪೊಲೀಸ್ ಇಲಾಖೆಗೆ ಬಲ ತುಂಬಬೇಕೆಂದರು.
ಪೊಲೀಸರು ಮತ್ತು ನಾಗರಿಕರ ನಡುವೆ ಉತ್ತಮ ಬಾಂಧವ್ಯವಿರಬೇಕು, ಪರಸ್ಪರ ಪ್ರೀತಿ, ವಿಶ್ವಾಸಗಳಿಂದ ಸಮಾಜ ಕಟ್ಟುವ ಕೆಲಸವಾಗಬೇಕಾಗಿದೆ ಎಂದ ನ್ಯಾಯಾಧೀಶರು, ಪೊಲೀಸರು ತಮ್ಮ ಉತ್ತಮವಾದ ಕೆಲಸ ಮತ್ತು ಕರ್ತವ್ಯಗಳ ಮೂಲಕ ಆದರ್ಶಪ್ರಾಯರಾಗ ಬೇಕು ಎಂದರು.
ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸರ ಕುರಿತು ಮಾಹಿತಿ ನೀಡಿದ ಎಸ್ಪಿ ಡಾ. ರಾಮನಿವಾಸ್ ಸಪಟ್, ದೇಶದಲ್ಲಿ ಕಳೆದ 2011-12ನೇ ಸಾಲಿನಲ್ಲಿ 574 ಹಾಗೂ ರಾಜ್ಯದಲ್ಲಿ ಐವರು ಪೊಲೀಸರು ಕರ್ತವ್ಯದಲ್ಲಿದ್ದಾಗ ಪ್ರಾಣ ಕಳೆದುಕೊಂಡಿದ್ದಾರೆ. 2012-13 ನೇ ಸಾಲಿನಲ್ಲಿ 577 ಮಂದಿ ಬಲಿದಾನವಾಗಿದ್ದು ಅವರಲ್ಲಿ 19 ಮಂದಿ ಕರ್ನಾಟಕದವರು ಎಂದು ತಿಳಿಸಿ ಎಲ್ಲರ ಹೆಸರು ಓದಿದರು. ಕಾರ್ಯಕ್ರಮಕ್ಕೆ ಮುನ್ನ ನ್ಯಾಯಾಧೀಶರಾದ ರೇಣುಕಾಪ್ರಸಾದ್, ಎಸ್ಪಿ ಡಾ. ರಾಮನಿವಾಸ್ ಸಪಟ್, ಡಿವೈಎಸ್ಪಿ ಅಶೋಕ್ ಕುಮಾರ್, ಸಿದ್ದಪ್ಪ, ಹಿರಿಯ ಪತ್ರಕರ್ತ ಕೆ. ಪ್ರಹ್ಲಾದರಾವ್, ಮುಖಂಡರಾದ ಲಿಯಾಖತ್, ವಕೀಲ ಶ್ರೀಕೃಷ್ಣ ಸೇರಿದಂತೆ ಹಲವಾರು ಗಣ್ಯರು ಪೊಲೀಸ್ ಸ್ಮಾರಕಕ್ಕೆ ಹೂಗುಚ್ಛವಿರಿಸಿ ಗೌರವ ಸಲ್ಲಿಸಿದರು. ನಂತರ ಡಿ.ಎ.ಆರ್. ಕಮಾಂಡೆಂಟ್ ಬಸವರಾಜ್ ನೇತೃತ್ವದಲ್ಲಿ ಪೊಲೀಸ್ ದಳದಿಂದ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಮರ್ಪಣೆ, ಸ್ವರ ನಮನ, ಎರಡು ನಿಮಿಷ ಮೌನಾಚರಣೆ, ಪಥ ಸಂಚಲನ ಮತ್ತಿತರ ಕಾರ್ಯಕ್ರಮಗಳು ನಡೆದವು. ನಿವೃತ್ತ ಡಿವೈಎಸ್ಪಿ ವೆಂಕಟಸ್ವಾಮಿ ನಿರೂಪಿಸಿದರು.
'ಪೊಲೀಸರ ಸೇವೆ ಮಹತ್ತರವಾದುದು'
ಚಿಕ್ಕಬಳ್ಳಾಪುರ: ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಶಾಂತಿಯುತ ವಾತಾವರಣ ನಿರ್ಮಾಣ ಮಾಡುವ ಪೊಲೀಸರ ಸೇವೆ ಮಹತ್ತರವಾದುದು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಈರಣ್ಣವರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪೋಲಿಸ್ ಇಲಾಖೆ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಹೆಚ್ಚಿನ ಜವಾಬ್ದಾರಿ ಹೊಂದಿರುವ ಪೊಲೀಸರು ಒತ್ತಡ ಕೆಲಸಗಳ ನಡುವೆಯೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ತಮ್ಮ ಬಗ್ಗೆ ಉತ್ತಮ ಕಾಳಜಿಯನ್ನು ಹೊಂದಿದ್ದರೆ ಮಾತ್ರ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದರು.
ದೇಶದ ಗಡಿಯಲ್ಲಿ ಸೈನಿಕರು ಕಾಪಾಡುತ್ತಿದ್ದಾರೆ. ದೇಶದೊಳಗೆ ಜನರನ್ನು ಪೊಲೀಸರು ಕಾಪಾಡುತ್ತಿದ್ದಾರೆ ಎಂದರು. ಕಾನೂನು ನಿಯಮಗಳಿರುವುದು ಸಮಾಜದ ಕಲ್ಯಾಣಕ್ಕಾಗಿ, ಜನರ ಹಿತಕ್ಕಾಗಿ. ಇದನ್ನು ಅರಿತು ಕಾನೂನು ನಿಯಮಗಳಿಗೆ ಬದ್ಧರಾಗಿ ಪ್ರತಿಯೊಬ್ಬರು ನಡೆದುಕೊಳ್ಳಬೇಕು. ಆಗ ಪೊಲೀಸರ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಎನ್. ಶಿವಪ್ರಸಾದ್ ಮಾತನಾಡಿ, ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಪೊಲೀಸರನ್ನು ಸ್ಮರಿಸಲು ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತಿದೆ. ಈ ಮೂಲಕ ಅವರ ಸೇವೆಗೆ ಗೌರವ ನೀಡುವ ಕೆಲಸ ಪ್ರತಿ ವರ್ಷ ಮಾಡಲಾಗುತ್ತಿದೆ ಎಂದರು.
ಪೊಲೀಸ್ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾರ್ವಜನಿಕರು ಸಹಕಾರ ನೀಡಬೇಕು. ಪೊಲೀಸರೊಂದಿಗೆ ಉತ್ತಮ ಬಾಂದವ್ಯ ಹೊಂದಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬೇಕೆಂದು ಸಲಹೆ ನೀಡಿದರು. ನ್ಯಾಯಾಧೀಶರಾದ ರಾಜೇಶ್ವರಿ ಹೆಗಡೆ, ಅನಿತಾ, ನಳಿನಿ, ಪ್ರೊ. ಕೋಡಿರಂಗಪ್ಪ ಉಪಸ್ಥಿತರಿದ್ದರು.
ಸಾರ್ವಜನಿಕರ ರಕ್ಷಣೆಗೆ ದುಡಿಯುವ ಪೊಲೀಸರ ಸೇವೆ ಶ್ಲಾಘನೀಯ
ಕೆಜಿಎಫ್: ಹಗಲಿರಳು ದುಡಿಯುವ ಪೊಲೀಸರ ಸೇವೆ ಶ್ಲಾಘನೀಯವಾದುದು ಎಂದು ಕೆಜಿಎಪ್ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ತಿಳಿಸಿದರು.
ಕೆಜಿಎಫ್ ಪೊಲೀಸ್ ಜಿಲ್ಲೆಯ ರಾಬರ್ಟ್ಸನ್ಪೇಟೆ ಪೊಲೀಸ್ ವೃತ್ತದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮಕ ದಿನಾಚರಣೆಯಲ್ಲಿ ಮಾತನಾಡಿ, ಸಮಾಜದಲ್ಲಿ ಶಾಂತಿ, ಸೌಹಾರ್ಧತೆ ಮತ್ತು ನಾಗರಿಕರ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ದುಡಿಯುತ್ತಿರುವ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ಸಮಯದಲ್ಲಿ ಹುತಾತ್ಮಕರಾದದ್ದನ್ನು ಸ್ಮರಿಸಿ ಹುತಾತ್ಮರ ದಿನ ಆಚರಿಸಿ ಗೌರವ ಸಲ್ಲಿಸುತ್ತಿರುವುದು ಪ್ರಶಂಸನೀಯವೆಂದರು.
ಕೆಜಿಎಫ್ ಪೊಲೀಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿಕಟೋಚ್ ಸೆಫಟ್ ಮಾತನಾಡಿ, ರಾಷ್ಟ್ರಾದ್ಯಂತ 577 ಮಂದಿ ಪೊಲೀಸರು ಮೃತಪಟ್ಟಿದ್ದಾರೆ. ಪೊಲೀಸರ ಕರ್ತವ್ಯ ನಿರ್ವಹಣೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿ ದೇಶಾದ್ಯಂತ ಹುತಾತ್ಮರಾದ ಪೊಲೀಸರ ಪಟ್ಟಿಯನ್ನು ವಾಚಿಸಿದರು.
ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ಇದೇ ವೇಳೆ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು. ಬಂಗಾರಪೇಟೆ ತಹಸೀಲ್ದಾರ್ ಉಷಾ, ನಗರಸಭೆ ಪೌರಾಯುಕ್ತ ವಿ. ಬಾಲಚಂದ್ರ, ಕೆಡಿಯುಎ ಆಯುಕ್ತ ಭೀಮನೀಡಿ, ಗೃಹರಕ್ಷಕದಳ ಪುರುಷೋತ್ತಮ, ಉಪರಕ್ಷಣಾಧಿಕಾರಿ ಎಚ್.ಪಿ. ರಾಜಣ್ಣ, ವೃತ್ತನಿರೀಕ್ಷಕ ಲಕ್ಷ್ಮೀನಾರಾಯಣ, ಪಿಎಸ್ಐಗಳಾದ ಎಲ್. ಆಂಜಪ್ಪ, ರಂಗಶಾಮಯ್ಯ, ಮಾರ್ಕೊಂಡಪ್ಪ, ಮಧುಸೂದನ್ ಹಾಜರಿದ್ದರು.
ಸಮಾಜ ಘಾತುಕ ಶಕ್ತಿಗಳ ವಿರುದ್ಧ ಹೋರಾಡುವಾಗ ಜೀವ ಕಳೆದುಕೊಳ್ಳುತ್ತಿದ್ದಾರೆ. ನಾಗರಿಕರ ಮಾನ-ಪ್ರಾಣ, ಆಸ್ತಿ-ಪಾಸ್ತಿ ರಕ್ಷಣೆಗೆ ಹೋರಾಟ ನಡೆಸುವ ಪೊಲೀಸರ ಸೇವೆಯನ್ನು ಪ್ರತಿಯೊಬ್ಬರು ಮೆಚ್ಚಬೇಕು. ಹಾಗೆಯೇ ನಮಗಾಗಿ ದುಡಿಯುವ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಪೊಲೀಸ್ ಇಲಾಖೆಗೆ ಬಲ ತುಂಬಬೇಕೆಂದರು.
-ನ್ಯಾ. ಎಸ್. ರೇಣುಕಾ ಪ್ರಸಾದ್