ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೀಗ ಹೊಡೆದು ನಾಣ್ಯ ಲೂಟಿ

Srinivasa Murthy VN
Updated On : 22 Oct 2013, 1:26 am

ಚಿಂತಾಮಣಿ: ತೀರ್ಥ ಯಾತ್ರೆಗೆ ಹೋಗಿದ್ದ ಮನೆಯ ಬೀಗ ಹೊಡೆದು ಲಕ್ಷಾಂತರ ರು. ಬೆಲೆ ಬಾಳುವ ನಗ, ನಾಣ್ಯ ದೋಚಿ ಪರಾರಿಯಾಗಿರುವ ಘಟನೆ ಪಟ್ಟಣದ ಎನ್.ಆರ್. ಬಡಾವಣೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಬಡಾವಣೆಯ ಆರೋಗ್ಯ ಇಲಾಖೆ ಗೋಪಾಲಕೃಷ್ಣ ಎಂಬುವರು ಕುಟುಂಬ ಸಮೇತವಾಗಿ ತಿರುಪತಿ ಯಾತ್ರಾ ಸ್ಥಳಕ್ಕೆ ಹೋಗಿದ್ದಾಗ ಕಳ್ಳರ ಗುಂಪೊಂದು ಮನೆ ಬೀಗ ಹೊಡೆದು ಒಳನುಗ್ಗಿ ಬೀರುನಲ್ಲಿದ್ದ ಸುಮಾರು 1.5 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಸೇರಿದಂತೆ 20 ಸಾವಿರ ನಗದನ್ನು ದೋಚಿ ಪರಾರಿಯಾಗಿರುವುದಾಗಿ ಮನೆ ಮಾಲೀಕ ಗೋಪಾಲಕೃಷ್ಣ ದೂರು ನೀಡಿದ್ದು ಪೊಲೀಸ್ ವೃತ್ತ ನಿರೀಕ್ಷಕ ನಂಜಪ್ಪ ಸ್ಥಳ ಪರಿಶೀಲಿಸಿದರು. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಂದ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಕರೆಸಲಾಗಿ ಸುಮಾರು 1 ಕಿ.ಮೀ ಸುತ್ತು ವೀಕ್ಷಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವಿದ್ಯುತ್ ಶಾಕ್‌ನಿಂದ ಬಾಲಕ ಸಾವು
ಬಂಗಾರಪೇಟೆ: ನೀರು ಕಾದಿದೆಯೋ ಇಲ್ಲವೋ ನೋಡಲು ವಿದ್ಯಾರ್ಥಿಯೊಬ್ಬ ಬಾಯ್ಲರ್ ಒಳಗೆ ಕೈಹಾಕಿದಾಗ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ತಾಲೂಕಿನ ಲೆಕ್ಕೇನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಬಾಲಕೃಷ್ಣ ಎಂಬವರ ಏಕೈಕ ಪುತ್ರ ಆದರ್ಶ 14 ಸೋಮವಾರ ಬೆಳಗ್ಗೆ ತಮ್ಮ ಮನೆಯಲ್ಲಿ ವಿದ್ಯುತ್ ಬಾಯ್ಲರ್‌ಗೆ ಕೈ ಹಾಕಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾಮಸಮುದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಲುಬಾಯಿ ಜ್ವರಕ್ಕೆ ಸೀಮೆ ಹಸು ಸಾವು
ಬಂಗಾರಪೇಟೆ: ಕಾಲುಬಾಯಿ ಜ್ವರದಿಂದ ಹಸುವೊಂದು ಮೃತಪಟ್ಟಿದ್ದರೂ ಪಶು ವೈದ್ಯರು ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲಿಸದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕಿನಲ್ಲಿ ಕಳೆದ ಎರಡು ತಿಂಗಳಿಂದ ಹತ್ತಾರು ಹಸುಗಳು ಮೃತಪಟ್ಟಿವೆ, ಈ ಬಗ್ಗೆ ಪಶು ಇಲಾಖೆಯಿಂದ ರೈತರಿಗೆ ತಿಳವಳಿಕೆ ಮೂಡಿಸುವ ಕಾರ್ಯಗಳು ನಡೆದಿಲ್ಲ. ರೈತರು ಪಟ್ಟಣದ ಪಶು ವೈದ್ಯ ಆಸ್ಪತ್ರೆಗೆ ಹೋದರೂ ಅಲ್ಲಿ ವೈದ್ಯರು ಸಕಾಲಕ್ಕೆ ಲಭಿಸುತ್ತಿಲ್ಲ. ಮೃತಪಟ್ಟಿರುವ ಹಸು ಮಾಲೀಕರಿಗೆ ಪಿರಹಾರ ನೀಡುವಂತೆ ಆಗ್ರಹಿಸಲಾಗಿದೆ.

ಆರ್‌ಎಸ್‌ಎಸ್ ಪಥಸಂಚಲನ
ಕೆಜಿಎಫ್: ನಗರದ ಸುಮತಿ ಜಾನ್ ಪ್ರೌಢಶಾಲೆಯಲ್ಲಿ ಕೆಜಿಎಫ್ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವತಿಯಿಂದ ಅ.16 ರಿಂದ 23 ರ ವರೆಗೆ 9ದಿನಗಳ ಕಾಲ ಕಾರ್ಯಕ್ರಮ ಏರ್ಪಡಿಸಿದ್ದು, ಇದರಲ್ಲಿ ಕೋಲಾರ ಜಿಲ್ಲೆಯ ವಿವಿಧ ಭಾಗಗಳಿಂದ 120 ಸ್ವಯಂ ಸೇವಕರು 30ಕ್ಕೂ ಹೆಚ್ಚು ಸಂಚಾಲಕರು, ಶಿಕ್ಷಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬೌದ್ದಿಕ, ಶಾರೀರಕವಾಗಿ ಮತ್ತು ಮಾನಸಿಕವಾಗಿ ಸಂಘದ ವತಿಯಿಂದ ಪ್ರಾಥಮಿಕ ಶಿಕ್ಷಾವರ್ಗ ಕಾರ್ಯಕ್ರಮ ಆಯೋಜಿಸಲಾಗಿದ್ದು ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಧವನ್ ಅವರು ತಿಳಿಸಿದರು. ಅ.23 ರಂದು ನಗರಸಭೆ ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಮತ್ತು ರಸ್ತೆಗಳಲ್ಲಿ ಧ್ವಜ ಸಮೇತ ಗಣವೇಶದಾರಿಗಳ ಆಕರ್ಷಕ ಪಥಸಂಚಲನ ನಡೆಸಲಾಗುತ್ತದೆ ಎಂದು ತಿಳಿಸಿದರು. ಈ ವೇಳೆ ಕರ್ನಾಟಕ ಪ್ರಾಂತ ಆರ್‌ಎಸ್‌ಎಸ್ ಶಾರೀರಕ ಪ್ರಮುಖ್ ಚಂದ್ರಶೇಖರ ಜಹಗೀರ್‌ಧಾರ್ ಮುಖ್ಯ ಭಾಷಣ ಮಾಡಲಿದ್ದಾರೆ.

ವ್ಯಕ್ತಿ ಆತ್ಮಹತ್ಯೆ
ಟೇಕಲ್: ಸಮೀಪದ  ಹಳೇಪಾಳ್ಯ ಗ್ರಾಮದ ಸಮೀಪದಲ್ಲಿ ಶಂಕರಪ್ಪ (32)ಅವರು ಅನುಮಾನಾಸ್ಪದವಾಗಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಶಂಕರಪ್ಪ ಚಿಂತಾಮಣಿ ತಾಲೂಕಿನ ಗಂಜೂರು ಗ್ರಾಮದ ನಿವಾಸಿಯಾಗಿದ್ದು ಇದೇ ಗ್ರಾಮದ ಸರಸ್ವತಮ್ಮನನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದರು. ಮಾಸ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆತ್ಮಹತ್ಯೆಗೆ ಯತ್ನ ವ್ಯಕ್ತಿ ರಕ್ಷಣೆ
ನೆಲಮಂಗಲ: ತಾಲೂಕಿನ ಶಿವಗಂಗೆಯ ಕಲ್ಯಾಣಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವ್ಯಕ್ತಿಯೋರ್ವನನ್ನು  ಸ್ಥಳದಲ್ಲಿದ್ದ ಸಾರ್ವಜನಿಕರು ರಕ್ಷಿಸಿ  ಪ್ರಾಣಾಪಾಯದಿಂದ ಪಾರು ಮಾಡಿರುವ ಘಟನೆ ಭಾನುವಾರ ನಡೆದಿದೆ. ಮೃತ್ಯುವಿನ ದವಡೆಯಿಂದ ಪಾರಾದವನನ್ನು ಆಂಧ್ರದ ಮೋಹನ್ (30) ಎಂದು ಗುರುತಿಸಿದ್ದು ಕೌಟುಂಬಿಕ ಸಮಸ್ಯೆಯಿಂದ ಬೇಸತ್ತ  ಆತ ಆತ್ಮಹತ್ಯೆಗೆ ಮುಂದಾಗಿದ್ದಾಗಿ ತಿಳಿಸಿದ್ದಾನೆ. ದಾಬಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಹಾಜರಿರಲು ಸಿಬ್ಬಂದಿಗೆ ಸೂಚನೆ
ಹೊಸಕೋಟೆ: ಪಟ್ಟಣದಲ್ಲಿ ನ.1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಎಲ್ಲಾ ಸರಕಾರಿ ಇಲಾಖೆಗಳ ಅಧಿಕಾರಿಗಳು , ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಶಾಸಕ ಎನ್. ನಾಗರಾಜ್ ಸೂಚಿಸಿದರು. ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ವೆಂಕಟೇಶ್ವರ ಗಣಪ ವಿಸರ್ಜನೆ
ಮಾಲೂರು: ಇಲ್ಲಿನ ಕುಪ್ಪಶೆಟ್ಟಿ ಬಾವಿ ಬಳಿಯ ಶ್ರೀ  ವರಸಿದ್ಧಿ ವಿನಾಯಕ ದೇವಾಲಯದ ಅವರಣದಲ್ಲಿ ಕನ್ನಡ ಅಭಿಮಾನಿ ಗೆಳಯರ ಬಳಗ ಪ್ರತಿಷ್ಠಾಪಿಸಿದ 41 ದಿನಗಳ ವೆಂಕಟೇಶ್ವರ ಅಲಂಕೃತ ಗಣಪನನ್ನು ಸೋಮವಾರ ಅದ್ಧೂರಿ ಮೆರವಣಿಗೆ ಮೂಲಕ ವಿರ್ಸಜಿಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ನಂದಿಧ್ವಜ ಕುಣಿತ ಸೇರಿದಂತೆ ಹಲವು ಕಲಾ ತಂಡಗಳು ಭಾಗವಹಿಸಿದ್ದವು. ವಿನಾಯಕ ಗೆಳಯರ ಬಳಗ ಗಣೇಶ ವಿಸರ್ಜನೆಯ ಅಂಗವಾಗಿ ಪಟ್ಟಣದಾದ್ಯಂತ ಹತ್ತು ಸಾವಿರ ತಿರುಪತಿ ಲಾಡುಗಳನ್ನು ವಿತರಿಸಿದರು. ಹೈದ್ರಬಾದ್‌ನಿಂದ ತಂದಿದ್ದ 21 ಅಡಿ ಎತ್ತರ ಗಣೇಶನ ವಿಸರ್ಜನೆ ಮೆರವಣಿಗೆ ವೀಕ್ಷಿಸಿಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜನತೆ ನಿಂತು ಚಿಕ್ಕ ಕೆರೆಗೆ ಹೂರಟ ಗಣಪನಿಗೆ ಪೊಜೆ ಸಲ್ಲಿಸಿದರು. ಬೆಳಿಗ್ಗೆ ಪ್ರಾರಂಭವಾದ ಮೆರವಣಿಗೆ ಸಂಜೆ ವೇಳೆಗೆ ಚಿಕ್ಕಕೆರೆಯಲ್ಲಿ ಗಣಪನನ್ನು ವಿರ್ಸರ್ಜಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement