ಲಕ್ಷ್ಮೀ ವಿಲಾಸ ಬ್ಯಾಂಕ್ ಲೋಕಾರ್ಪಣೆ
ಕ.ಪ್ರ.ವಾರ್ತೆಬಂಗಾರಪೇಟೆ ಅ. 21
ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಲೂ ಖಾಸಗಿ ಬ್ಯಾಂಕುಗಳು ರಾಜ್ಯದಲ್ಲಿ ಉತ್ತಮ ಸೇವೆ ನೀಡುತ್ತಿರುವುದನ್ನು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಶ್ಲಾಘಿಸಿದರು.
ಪಟ್ಟಣದಲ್ಲಿ ನೂತನವಾಗಿ ಆರಂಭವಾಗಿರುವ ಲಕ್ಷ್ಮೀ ವಿಲಾಸ ಬ್ಯಾಂಕ್ ಲೋಕಾರ್ಪಣೆ ಮಾಡಿ ಮಾತನಾಡಿ, ಲಕ್ಷ್ಮೀವಿಲಾಸ ಬ್ಯಾಂಕು ಕಳೆದ 87 ವರ್ಷಗಳಿಂದ ಯಾವುದೇ ಕಪ್ಪು ಚುಕ್ಕಿ ಇಲ್ಲದೆ ಗ್ರಾಹಕರಿಂದ ಮೆಚ್ಚುಗೆ ಪಡೆದು ಸಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬ್ಯಾಕಿನ ಎಂ.ಡಿ. ಆಂಜನೇಯಲು ಮಾತನಾಡಿ, 1920ರಲ್ಲಿ ಕರೂರ್ನಲ್ಲಿ ಜನ್ಮ ತಾಳಿದ ಲಕ್ಷ್ಮೀವಿಲಾಸ್ ಬ್ಯಾಂಕ್ ಈವರೆಗೂ 308 ಶಾಖೆಗಳನ್ನು ಹೊಂದಿದೆ. ಮುಂದೆ ಸಾವಿರ ಶಾಖೆಗಳನ್ನು ಮಾಡುವ ಗುರಿ ಇದೆ ಎಂದು ಹೇಳಿದರು. ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿದರು. ಬ್ಯಾಂಕಿನ ನಿರ್ದೇಶಕ ಡಾ. ಶಂಕರ್, ಕುಸುಮಾ ಮುನಿರಾಜು, ಗಂಗಾಧರ್, ವ್ಯವಸ್ಥಾಪಕ ರಾಜನ್, ಮಂಜುನಾಥ್, ಪಾರ್ಥಸಾರಥಿ, ನಂಜಪ್ಪ, ಶಂಷುದ್ದಿನ್ ಬಾಬು ಇದ್ದರು.
ತಲಕಾಡು ಅಭಿವೃದ್ಧಿಗೆ 100 ಕೋಟಿ: ಸಿಎಂ ಜತೆ ಚರ್ಚೆ
ಬೆಂಗಳೂರು: ವಿಶ್ವಪ್ರಸಿದ್ದ ತಲಕಾಡು ಪಂಚಲಿಂಗ ದರ್ಶನ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಹಾಗೂ ಮೂಲ ಸೌಕರ್ಯ ಒದಗಿಸುವುದಕ್ಕೆ 100 ಕೋಟಿ ಅನುದಾನ ಬಿಡುಗಡೆಗೊಳಿಸುವುದಕ್ಕೆ ಸರ್ಕಾರ ಚಿಂತನೆ ನಡೆಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ ಮಹದೇವಪ್ಪ ಹಾಗೂ ಸ್ಥಳೀಯ ಶಾಸಕರ ನಿಯೋಗದ ಜತೆಗಿನ ಚರ್ಚೆ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಪಂಚಲಿಂಗ ದರ್ಶನದ ಅಭಿವೃದ್ಧಿಗೆ ವಿಶೇಷ ಕ್ರಮ ತೆಗೆದುಕೊಳ್ಳುವುದಕ್ಕೆ ಬಜೆಟ್ನಲ್ಲೇ ಭರವಸೆ ನೀಡಲಾಗಿದೆ. ಈ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ರು. 100 ಕೋಟಿ ಮೀಸಲು ಇಡುವುದಕ್ಕೆ ಸಭೆಯಲ್ಲಿ ನಿರ್ಧರಿಸಲಾಗಿದೆ.