ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ
ಚಿಕ್ಕಬಳ್ಳಾಪುರ: ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರು ಸೋಮವಾರ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿಮಂದಿರದಿಂದ ಪ್ರತಿಭಟನಾ ಮೆರವಣೆಗೆ ಹೊರಟ ಪ್ರತಿಭಟನಾಕಾರರು ವಾಣಿ ಟಾಕೀಸ್ ಮುಂಭಾಗದ ಬೆಸ್ಕಾಂ ಕಚೇರಿ ಅವರಣದಲ್ಲಿ ಧರಣಿ ಕುಳಿತು ಬೇಡಿಕೆ ಈಡೇರಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಬೇಕೆಂದು ಪಟ್ಟು ಹಿಡಿದರು.
ಸಂಘದ ಜಿಲ್ಲಾಧ್ಯಕ್ಷ ಬಾಬು ಮಾತನಾಡಿ, ಜಿಲ್ಲೆಯಲ್ಲಿ ಸಾರ್ವಜನಿಕರ ಸೇವೆ ಮಾಡುತ್ತ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಧೋರಣೆಯಿಂದ ಉಂಟಾಗುತ್ತಿರುವ ಸಮಸ್ಯೆಗಳಿಂದ ಇದೀಗ ಗುತ್ತಿಗೆದಾರರು ತೊಂದರೆ ಅನುಭವಿಸುತ್ತಿರುವುದರ ಜತೆಗೆ ಸಾರ್ವಜನಿಕರಿಂದ ಕೆಟ್ಟು ಹೆಸರನ್ನು ಪಡೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಹೊಸದಾಗಿ ಬೆಸ್ಕಾಂ ಕಾರ್ಯ ನಿರ್ವಹಣೆಗಾಗಿ ಇನ್ಪೋಸಿಸ್ ಸಾಫ್ಟ್‌ವೇರ್ ಅಳವಡಿಸಿದ್ದು, ಇದು ಲೋಪದೋಷಗಳಿಂದ ಕೂಡಿರುವುದರಿಂದ ಗುತ್ತಿಗೆದಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಕೂಡಲೇ ಈ ವ್ಯವಸ್ಥೆಯನ್ನು ತೆಗೆದು ಹಾಕಿ ಹಿಂದೆ ಇದ್ದ ವ್ಯವಸ್ಥೆ ಮುಂದುವರೆಸಿಕೊಂಡು ಹೋಗಬೇಕು. ತಾತ್ಕಾಲಿಕ ವಿದ್ಯುತ್ ಸಂಪರ್ಕಗಳನ್ನು ಅರ್ಜಿ ಕೊಟ್ಟ ತಕ್ಷಣ ಒಂದು ದಿನದೊಳಗೆ ಸಂಪರ್ಕ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಸುಮಾರು ವರ್ಷಗಳಿಂದ ಗುತ್ತಿಗೆದಾರರು ಗುತ್ತಿಗೆ ಆಧಾರದಲ್ಲಿ ಕೂಲಿ ಕೆಲಸ ಮಾಡಿಕೊಳ್ಳುತ್ತ ಬಂದಿದ್ದು ಇದಕ್ಕೆ ಪೆಟ್ಟು ಕೊಡುವಂತೆ ಇತ್ತೀಚೆಗೆ ಏಕಾಏಕಿ 25 ಸಾವಿರ ರು.ಗಳನ್ನು ಪಿಇಎಂಡಿಯನ್ನು ಏರಿಸಿ 1 ಲಕ್ಷ ರು.ಗಳ 5 ಕೆಲಸಗಳಿಗೆ ಮಾತ್ರ ನಿಗದಿಪಡಿಸಿದ್ದು, ಇದನ್ನು ರದ್ದುಗೊಳಿಸಿ ಮೊದಲಿನಂತೆ ಮುಂದುವರೆಸಬೇಕು. ಗುಡಿಬಂಡೆ ಉಪ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಎಇಇ ರವರನ್ನು ನಿಯೋಜನೆ ಮೇಲೆ ಕಾರ್ಪೋರೇಟ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೂಡಲೇ ಅವರನ್ನು ಹಿಂದಕ್ಕೆ ಕರೆಸಿಕೊಂಡು ಕಾಯಂ ಸ್ಥಳದಲ್ಲಿ ಕಾರ್ಯ ನಿರ್ವಹಿಸುವಂತಾಗಲು ಅಧಿಕಾರಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಬೆಸ್ಕಾಂ ಇಲಾಖೆಯ ಅಧಿಕಾರಿ ಶಶಿಧರ್ ಶಿವಾಚಾರ್ಯ ಆಗಮಿಸಿ, ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಸ್ಥಳೀಯ ಮಟ್ಟದಲ್ಲಿ ಬಗೆಹರಿಯುವ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲಾಗುವುದು. ಇನ್ನು ಕೆಲ ಬೇಡಿಕೆಗಳನ್ನು ಈಡೇರಿಸುವುದು ಮೇಲ್ಮಟ್ಟದ ಅಧಿಕಾರಿಗಳ ಕೈಯಲ್ಲಿದೆ. ಆ ಸಮಸ್ಯೆಗಳನ್ನು ಅವರ ಗಮನಕ್ಕೆ ತರುತ್ತೇನೆ. ಅಲ್ಲಿಯವರೆಗೂ ಹೋರಾಟವನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು. ಆದರೆ, ಪ್ರತಿಭಟನಾಕಾರರು ಸ್ಥಳಕ್ಕೆ ಹಿರಿಯ ಅಧಿಕಾರಿಗಳೇ ಬರಲಿ ಎಂದು ಪಟ್ಟು ಹಿಡಿದರು. ಸಂಘದ ನಾರಾಯಣಸ್ವಾಮಿ, ಹೊನ್ನೇಗೌಡ, ಪ್ರಸಾದ್, ವಿಜಯ್ ಕುಮಾರ ನಾಯ್ಡು, ಮಂಜುನಾಥ್, ಸೀತಪ್ಪ, ಶ್ರೀನಿವಾಸ್ ಭಾಗವಹಿಸಿದ್ದರು.