ಸೌರಶಕ್ತಿ ಬಳಕೆಯಿಂದ ದೇಶದ ಪ್ರಗತಿ
ಗೌರಿಬಿದನೂರು: ಸೌರಶಕ್ತಿ ಬಳಕೆಯಿಂದ ಆರ್ಥಿಕ ಉಳಿತಾಯ ಹಾಗೂ ದೇಶದ ಪ್ರಗತಿಗೆ ನಾಂದಿ ಹಾಡಿದಂತಾಗುತ್ತದೆ ಎಂದು ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.
ಪಟ್ಟಣದ ಆಚಾರ್ಯ ಪ್ರೌಢ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಗ್ರೀನ್ ಎನರ್ಜಿ ಸಲ್ಯೂಷನ್ಸ್ ಮತ್ತು ನ್ಯೂಟೆಕ್ ಸೋಲಾರ್ ಸಿಸ್ಟಮ್ಸ್ ಆಶ್ರಯದಲ್ಲಿ ಸೋಲಾರ್ ಸಂತೆ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.
ಜಾಗತಿಕ ಯುಗದಲ್ಲಿ ವಿದ್ಯುತ್ನಿಂದ ಅಪಾರ ಪ್ರಮಾಣದ ಹಣ ಪೋಲಾಗುತ್ತಿದ್ದು, ವಿದ್ಯುತ್ ಉತ್ಪಾದನೆಗೆ ಸರ್ಕಾರಗಳು ಪರದಾಡುತ್ತಿವೆ. ಪಾಶ್ಚಿಮಾತ್ಯ ದೇಶಗಳು ಸೋಲಾರ್ ಬಳಕೆಯಲ್ಲಿ ಹೆಚ್ಚು ಮುಂದುವರೆದಿದ್ದು, ಈ ಬಳಕೆ ನಮ್ಮ ದೇಶದಲ್ಲೂ ಅಳವಡಿಸಿದರೆ ಸಾವಿರಾರು ಕೋಟಿ ರು. ಉಳಿಸಿದಂತಾಗುತ್ತದೆ ಎಂದರು. ನ್ಯೂಟೆಕ್ ಸಂಸ್ಥೆಯ ವ್ಯವಸ್ಥಾಪಕ ಅನಂತು ಮಾತನಾಡಿ, ಸಂಸ್ಥೆ ದೇಶದಲ್ಲಿ ಸೌರ ಶಕ್ತಿ ಉತ್ಪಾದನೆಯಲ್ಲಿ 4ನೇ ಸ್ಥಾನದಲ್ಲಿದ್ದು, ಇದು ವ್ಯಾಪಾರೀಕರಣಕ್ಕಾಗಿ ಕಾರ್ಯಕ್ರಮ ಮಾಡುತ್ತಿಲ್ಲ. ಸಾರ್ವಜನಿಕರಲ್ಲಿ ವಿದ್ಯುತ್ ಬಳಕೆಯ ಅರಿವು ಮೂಡಿಸುವ ಕಾರ್ಯಕ್ರಮವಾಗಿದೆ ಎಂದರು.
ಚಿನ್ನದಂಗಡಿಗೆ ಕನ್ನ
ಮುಳಬಾಗಲು: ಬಂಗಾರದ ಅಂಗಡಿಗೆ ಕನ್ನ ಕೊರೆದು ಒಳ ನುಗ್ಗಿ ಅಪಾರ ಪ್ರಮಾಣದ ಚಿನ್ನ ಬೆಳ್ಳಿ ಕಳವು ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಕಿಶನ್ ಲಾಲ್ ಎಂಬವರ ಅಂಗಡಿಗೆ ಕನ್ನ ಕೊರೆಯಲಾಗಿದ್ದು, ಸೋಮವಾರ ಬೆಳಗ್ಗೆ ಅಂಗಡಿಗೆ ಬಂದ ಅವರು ಕನ್ನ ಹಾಕಿರುವುದು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ನಂತರ ಕೋಲಾರದಿಂದ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಬಂದು ಪರಿಶೀಲಿಸಿದರು. ಅಂಗಡಿಯಲ್ಲಿ 150 ಕೆಜಿ ಬೆಳ್ಳಿ ಹಾಗೂ 150 ಗ್ರಾಮ್ ಚಿನ್ನ ಕಳುವಾಗಿರುವುದು ಬೆಳಕಿಗೆ ಬಂದಿದೆ. ಕಳ್ಳರು ಸೇಪ್ ಲಾಕರ್ನಲ್ಲಿ ಗಿರವಿಗಿಟ್ಟಿದ್ದ ಬಂಗಾರಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಮುಳಬಾಗಲು ಡಿವೈಎಸ್ಪಿ ಟಿ. ಸಿದ್ದಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಸಬ್ ಇನ್ಸ್ಪೆಕ್ಟರ್ ಮಲ್ವಿನ್ ಫ್ರಾನ್ಸಿಸ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.