ಕನ್ನಡ ಪೂರ್ವಭಾವಿ ಸಭೆ; ಆಂಗ್ಲ ಭಾಷೆಯಲ್ಲಿ ಚರ್ಚೆ!
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಅ. 22
ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ನ.1ರಂದು ಅದ್ಧೂರಿಯಾಗಿ ಆಚರಿಸುವ ಸಲುವಾಗಿ ಕೈಗೊಳ್ಳಬೇಕಾದ ಅಗತ್ಯ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸಲಾಯಿತು.
ಆದರೆ, ಬಹುತೇಕ ಚರ್ಚೆ ಆಂಗ್ಲ ಭಾಷೆಯಲ್ಲಿ ನಡೆದು ಹಲವರ ಆಕ್ರೋಶಕ್ಕೆ ಕಾರಣವಾಯಿತು. ಕನ್ನಡ ರಾಜ್ಯೋತ್ಸವ ಆಚರಣೆಯ ಈ ಪೂರ್ವಭಾವಿ ಸಭೆಯಲ್ಲಿ ಸ್ವತಃ ಜಿಲ್ಲಾಧಿಕಾರಿಯೇ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಮರೆತು ಆಂಗ್ಲ ಭಾಷೆಯಲ್ಲಿಯೇ ಹೆಚ್ಚಿಗೆ ಮಾತನಾಡುತ್ತ ತಮ್ಮ ಆಂಗ್ಲ ವ್ಯಾಮೋಹವನ್ನು ಪ್ರದರ್ಶಿಸಿದರು.
ಜಿಲ್ಲಾಧಿಕಾರಿ ಡಾ. ವಿಶಾಲ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಅಧಿಕಾರಿಗಳು ಇದ್ದರು. ಕರವೇ, ಜಯ ಕರ್ನಾಟಕ ಸಂಘಟನೆ, ಕರುನಾಡ ಸೇನೆ ಸೇರಿದಂತೆ ಕನ್ನಡಪರ ಹೋರಾಟಗಾರರು ಹೆಚ್ಚಿಗೆ ಭಾಗವಹಿಸಿದ್ದರಲ್ಲದೇ, ಪ್ರತಿ ವರ್ಷ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಮೂಲಕ ಕನ್ನಡ ಭಾಷೆಯ ಕಂಪು ಎಲ್ಲೆಡೆ ಪಸರಿಸುವಂತೆ ಮಾಡಿ ನಾಡ ತಾಯಿ ಭುವನೇಶ್ವರಿ ಮಾತೆಯನ್ನು ಪೂಜ್ಯ ಭಾವದಿಂದ ಸ್ಮರಿಸಲಾಗುತ್ತಿದೆ. ಜತೆಗೆ ನಾಡು, ನುಡಿಯ ಬಗ್ಗೆ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಜಾಗೃತಗೊಳಿಸಲಾಗುತ್ತಿದೆ. ಇಂತಹ ಕಾರ್ಯಕ್ರಮವನ್ನು ಈ ವರ್ಷ ಸಹ ಅದ್ಧೂರಿಯಾಗಿ ಆಚರಿಸಬೇಕೆಂದು ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ನಡುವೆ ಕಾರ್ಯಕ್ರಮ ಆಚರಣೆಯ ಬಗ್ಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದ ಜಿಲ್ಲಾಧಿಕಾರಿ ಬಹುತೇಕ ಹೆಚ್ಚಿಗೆ ಅಂಗ್ಲ ಭಾಷೆಯಲ್ಲಿ ಮಾತಗಳನ್ನಾಡಿಕೊಂಡು ಹೋದರು. ಬ್ಯುಟಿಫುಲ್ ಕನ್ನಡ ರಾಜ್ಯೋತ್ಸವ ಫಂಕ್ಷನ್ ಅರೆಂಜ್ಮೆಂಟ್ಸ್ ಆ್ಯಂಡ್ ವರ್ಕ್ಸ್ ವಿಲ್ ಕ್ವಿಕ್ಲಿ ವಿಲ್ ಡು, ಡಿಸ್ಟ್ರಿಕ್ಟ್ ಆಡ್ಮಿಮಿನಿಸ್ಟ್ರೇಟ್ ಗ್ರಾಂಡ್ಲಿ ಸೆಲಿಬ್ರೇಟ್, ಆಫಿಸರ್... ಹೀಗೆ ಅವರು ನಯವಾಗಿ ಹೆಚ್ಚಿನ ಅಂಗ್ಲ ಭಾಷೆಯ ಪದಗಳೊಂದಿಗೆ ಆಗಾಗ ಊಟಕ್ಕೆ ಉಪ್ಪಿನಕಾಯಿ ಬಳಸಿಕೊಳ್ಳುವಂತೆ ಕನ್ನಡ ಭಾಷೆಯ ಪದಗಳನ್ನು ಬಳಸಿಕೊಂಡರು. ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಇದು ಸಭೆಯಲ್ಲಿ ಕನ್ನಡಪರ ಹೋರಾಟಗಾರರ ಅಸಮಾಧಾನಕ್ಕೆ ಕಾರಣವಾಯಿತು.
ಕನ್ನಡಕ್ಕೆ ಅಂಗ್ಲ: ಕನ್ನಡ ನಾಡು, ನುಡಿಯ ಅಭಿಮಾನ, ಒಲವು ಬೆಳೆಸುವ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಇಂತಹ ಕಾರ್ಯಕ್ರಮ ಆಚರಣೆಗೆ ಸಿದ್ಧತೆಗಳನ್ನು ಕೈಗೊಳ್ಳಬೇಕಾದ ಚರ್ಚೆಯು ಅಂಗ್ಲ ಭಾಷೆಯಲ್ಲಿ ನಡೆದರೆ ಹೇಗೆ ಹೋಗಲಿ ಜಿಲ್ಲಾಧಿಕಾರಿ ನೆರೆಯ ರಾಜ್ಯದವರಾಗಿದ್ದರೆ, ಅವರಿಗೆ ಕನ್ನಡ ಬರೋದಿಲ್ಲ, ಇಲ್ಲವೇ ಕೇವಲ ಅಧಿಕಾರಿಗಳನ್ನೊಳಗೊಂಡ ಸಭೆಯಾಗಿದೆ ಎನ್ನುವುದಾರರೆ ಹೋಗಲಿ ಬಿಡಬಹುದು ಅಂತಾ ಸುಮ್ಮನಾಗಬಹುದು. ಆದರೆ ಕನ್ನಡ ಬಲ್ಲ, ಅದರಲ್ಲೂ ಕನ್ನಡಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ, ಕನ್ನಡಪರ ಹೋರಾಟ ನಡೆಸುತ್ತಿರುವ ಹೋರಾಟಗಾರರೊಂದಿಗೇಯೇ ಅವರು ಅಂಗ್ಲ ಭಾಷೆಯಲ್ಲಿಯೇ ಸಂಭಾಷಣೆ ನಡೆಸಿದರೆ ಹೇಗೆ ಇನ್ನೂ ಇವರ ಅಧೀನ ಅಧಿಕಾರಿಗಳು ಎಷ್ಟರ ಮಟ್ಟಿಗೆ ಜನರೊಂದಿಗೆ ಕನ್ನಡ ಭಾಷೆಯಲ್ಲಿ ಮಾತನಾಡಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಮುಖಂಡರು, ರಾಜ್ಯ ಸರ್ಕಾರ ಆಡಳಿತದಲ್ಲಿ ಹೆಚ್ಚಿಗೆ ಕನ್ನಡ ಭಾಷೆಯ ಬಳಕೆಯಾಗಲು ಶ್ರಮಿಸುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿಗಳು ಕಾಯ್ದೆಗಳನ್ನು ಸಹ ಕನ್ನಡದಲ್ಲಿ ಬರೆಯುವಂತಾಗಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಮೂಲಕ ಕನ್ನಡತನ ಎಲ್ಲರಲ್ಲೂ ಮೂಡುವಂತಾಗಲು ಶ್ರಮಿಸುತ್ತಿರುವ ಇಂತಹ ವಾತಾವರಣ ನಡುವೆ ಕನ್ನಡ ಭಾಷೆಯ ಬಗ್ಗೆ ಅರಿವಿದ್ದರೂ ಅಂಗ್ಲ ವ್ಯಾಮೋಹವನ್ನು ಅಧಿಕಾರಿಗಳು ತೋರಿಸುತ್ತಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.