ಕೆರೆ, ಕಾಲುವೆ ಒತ್ತುವರಿಗೆ ಕ್ರಿಮಿನಲ್ ಕೇಸು ಹಾಕಿ
ಕ.ಪ್ರ.ವಾರ್ತೆ ಕೋಲಾರ ಅ. 22
ನಮ್ಮ ಪೂರ್ವಿಕರು ಪ್ರತಿಯೊಂದು ಊರಿಗೂ ವಾಸ್ತು ಪ್ರಕಾರ ಕೆರೆ, ಕಾಲುವೆ, ಕಲ್ಯಾಣಿಗಳನ್ನು ನಿರ್ಮಿಸಿ ಜನತೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ, ಇವುಗಳು ಊರ ಆಸ್ತಿಯೇ ಹೊರತು ಯಾವುದೇ ಒಬ್ಬ ವ್ಯಕ್ತಿಯ ಸ್ವತ್ತು ಅಲ್ಲವೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಪ್ರತಿಪಾದಿಸಿದರು.
ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನರೇಗಾ ಮೇಳದಲ್ಲಿ ಮಾತನಾಡಿದ ಅವರು, ನಮ್ಮ ಪೂರ್ವಿಕರು ಮೇಧಾವಿಗಳು ಆಗಿದ್ದರಿಂದ ಜನತೆಗಾಗಿ ಕೆರೆ, ಕಾಲುವೆ ಮತ್ತು ಕಲ್ಯಾಣಿಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ, ದುರಾಲೋಚನೆಯ ಕೆಟ್ಟ ಮನುಷ್ಯರು ಅವುಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ನೀರಿನ ಸಮಸ್ಯೆ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಜನತೆ ಕಣ್ಣ ಮುಂದೆಯೇ ಕೆಟ್ಟದ್ದು ನಡೆಯುತ್ತಿದ್ದರೂ ಪ್ರತಿಭಟನೆ ಮಾಡುವುದಿರಲ್ಲಿ ಪ್ರಶ್ನೆಯನ್ನೂ ಮಾಡುವ ಶಕ್ತಿ ಕಳೆದುಕೊಂಡಿರುವುದರಿಂದ ಕೆಲವರು ಕೆರೆ, ಕಾಲುವೆ ಸರ್ಕಾರ ಆಸ್ತಿ ಆಗಿರುವುದರಿಂದ ಒತ್ತುವರಿ ಮಾಡಿಕೊಂಡರೇ ತಪ್ಪೇನು ಎಂದು ನಿರ್ಲಕ್ಷ್ಯ ಪ್ರವೃತ್ತಿ ಹೊಂದುವಂತಾಗಿದೆ ಎಂದು ವಿಷಾದಿಸಿದರು.
ಕೆರೆ, ಕಾಲುವೆ, ಕಲ್ಯಾಣಿಗಳು ಯಾವುದೇ ಒಬ್ಬ ವ್ಯಕ್ತಿಯ ಆಸ್ತಿ ಅಲ್ಲ, ಅದು ಊರ ಆಸ್ತಿ ಆಗಿರುವುದರಿಂದ ನಾವೆಲ್ಲಾ ಸೇರಿ ಸಂರಕ್ಷಣೆ ಮಾಡಬೇಕಾಗಿದೆ. ಪೂರ್ವಿಕರು ನೀಡಿರುವ ಕೊಡುಗೆಯನ್ನು ಕಾಪಾಡಿದರೆ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದರು. ಬಡವರನ್ನು ಮನಸ್ಸಿನಲ್ಲಿಟ್ಟುಕೊಂಡಲ್ಲಿ ಯಾರೂ ಕೆಟ್ಟ ಕೆಲಸ ಮಾಡುವುದಿಲ್ಲ, ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಏಕೆ ಉಂಟಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ, ಬ್ರಿಟಿಷರು ಮತ್ತು ರಾಜಕಾಲದಲ್ಲಿ ನಾವು ಇನ್ನೂ ಇದ್ದೇವೆಂಬ ಗುಂಗು ಬಿಟ್ಟು, ಜನತೆ ನೀಡಿರುವ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ರೀತಿಯಲ್ಲಿ ಆಡಳಿತ ನಡೆಸಿದಲ್ಲಿ ಪ್ರತಿಯೊಂದು ಊರು ಉದ್ಧಾರವಾಗುತ್ತದೆ ಎಂದು ಸೂಚ್ಯವಾಗಿ ನುಡಿದರು.
ನಿಮ್ಮ ಊರುಗಳಲ್ಲಿ ಯಾರಾದರೂ ಸರಿ ಕೆರೆ, ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದಲ್ಲಿ ಅಂತಹ ಜನರಿಗೆ ತಿಳಿವಳಿಕೆ ನೀಡಿ ಒತ್ತುವರಿ ತೆರವು ಮಾಡಿಸಲು ಪ್ರಯತ್ನಿಸಿ, ಒಂದು ವೇಳೆ ನಿಮ್ಮ ಮಾತು ಕೇಳದಿದ್ದರೆ ಕಾನೂನು ಪ್ರಕಾರ ಕ್ರಿಮಿನಲ್ ಕೇಸು ದಾಖಲು ಮಾಡಿ ಎಂದು ಗ್ರಾಪಂ ಸದಸ್ಯರಿಗೆ ಸಲಹೆ ನೀಡಿದರು.
ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಉತ್ತಮರು ಹಾಗೂ ಜನ ವಿರೋಧಿ ಸದಸ್ಯರು ಇರುತ್ತಾರೆ, ಉತ್ತಮವರು ಒಗ್ಗೂಡಿ ಕೆಟ್ಟವರಿಗೆ ಬುದ್ಧಿ ಹೇಳುವ ದೈರ್ಯ ಬೆಳೆಸಿಕೊಳ್ಳಿ, ಕೆರೆ,ಕಾಲುವೆಗಳ ಸಂರಕ್ಷಣೆಯ ಜೊತೆಗೆ ಅಂತರ್ಜಲವನ್ನು ಕಸಿದುಕೊಳ್ಳುತ್ತಿರುವ ನೀಲಗಿರಿ ಮರಗಳನ್ನು ಬೆಳೆಯದಂತೆ ಜನರಿಗೆ ಬುದ್ಧಿ ಹೇಳಿ, ಶ್ರೀಗಂಧ, ಬೇವು, ಮುಂತಾದ ಜಲ ಸಂರಕ್ಷಣೆ ಮಾಡುವ ಮರಗಳನ್ನು ಬೆಳೆಯಲು ಸಲಹೆ ಮತ್ತು ಸಹಕಾರ ನೀಡುವಂತೆ ತಿಳಿಸಿದರು.
ನೀರಿಗಿರಿ ಮರ ಇರುವ ಕಡೆ ಹುಲ್ಲುಗಡ್ಡೆಯೂ ಬೆಳೆಯಲ್ಲ, ಅರಣ್ಯ ಇಲಾಖೆಯವರು ಮುಂದಿನ ವರ್ಷ 20 ಲಕ್ಷಕ್ಕೂ ಹೆಚ್ಚು ಹೆಬ್ಬೇವು ಗಿಡಗಳನ್ನು ಬೆಳೆಸಲು ಸಿದ್ಧತೆ ನಡೆಸಿದ್ದಾರೆ, ರೈತರು ಇದರ ಪ್ರಯೋಜನ ಪಡೆಯಬೇಕೆಂದು ಹೇಳಿದರು. ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ತಮ್ಮ ಊರಿನ ಅಭಿವೃದ್ಧಿಗಾಗಿ ಪ್ರಮಾಣ ಮಾಡಿ ಉತ್ತಮ ಆಡಳಿತ ನೀಡುವ ಮೂಲಕ ಊರ ಆಸ್ತಿಯನ್ನು ಕಾಪಾಡಬೇಕೆಂದು ಕಿವಿಮಾತು ಹೇಳಿದರು.
ನರೇಗಾ ಲೆಕ್ಕ ಕೇಳಿ ಪಡೆಯಿರಿ
ಕೋಲಾರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನರೇಗಾ ಯೋಜನೆಗಾಗಿ ಜಿಲ್ಲೆಗೆ ಕೋಟಿಗಟ್ಟಲೆ ಹಣ ನೀಡಿದೆ. ಈ ಹಣದಲ್ಲಿ ಸಾಕಷ್ಟು ಕೆಲಸಗಳು ಆಗಿವೆ. ನಿಮ್ಮ ಊರಿನಲ್ಲಿ ಆಗಿರುವ ಕಾಮಗಾರಿಗಳ ಬಾಬ್ತಿನ ಲೆಕ್ಕ ಕೇಳಿ ಪಡೆಯುವುದಕ್ಕೆ ಗ್ರಾಪಂ ಸದಸ್ಯರಿಗೆ ಮತ್ತು ಜನರಿಗೆ ಅಧಿಕಾರವಿದೆ ಎಂದು ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಕರೆ ನೀಡಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ನರೇಗಾ ಮೇಳದಲ್ಲಿ ಮಾತನಾಡಿದ ಅವರು, ಪಂಚಾಯತ್ ರಾಜ್ ಕಾಯಿದೆಯಲ್ಲಿ ಚುನಾಯಿತ ಸದಸ್ಯರಿಗೆ ವಿಶೇಷ ಅಧಿಕಾರ ನೀಡಲಾಗಿದೆ. ತಾಪಂ ಮತ್ತು ಜಿಪಂನಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಚೆಕ್ಗೆ ಸಹಿ ಮಾಡುವ ಅಧಿಕಾರ ನೀಡಿಲ್ಲ. ಆದರೆ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಈ ಅಧಿಕಾರ ನೀಡಿರುವುದರಿಂದ ಸದುಪಯೋಗ ಪಡಿಸಿಕೊಳ್ಳಬೇಕೆಂದರು. ನರೇಗಾ ಯೋಜನೆಯಡಿ ಅನೇಕರು ಬಡ್ಡಿಗೆ ಸಾಲ ತಂದು ಕಾಮಗಾರಿಗಳನ್ನು ನಡೆಸಿದ್ದಾರೆ ಎಂದರು. ಕೆಲಸ ಮಾಡಿದವರಿಗೆ ಹಣ ನೀಡದಿರುವುದು ಸರಿಯಲ್ಲವೆಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಬಾಕಿ ಬಿಲ್ಗಳನ್ನು ಪಾವತಿ ಮಾಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನರೇಗಾ ಮೇಳದಲ್ಲಿ ಆಯ್ದ ಸದಸ್ಯರು ವೈಯುಕ್ತಿಕ ಶೌಚಾಲಯಗಳ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳ ಬಗ್ಗೆ ಪ್ರಶ್ನೆ ಕೇಳಿ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರಿಂದ ಉತ್ತರ ಪಡೆದರು.
ಕೆಲ ಸದಸ್ಯರು ಮತ್ತು ಗ್ರಾಮಸ್ಥರು ಶೌಚಾಲಯಗಳಿಗೆ ಕೇವಲ 3700 ನೀಡಲಾಗಿದೆ, ಸರ್ಕಾರ ಈಗ ಅನುದಾನ ಪರಿಷ್ಕರಿಸಿರುವುದರಿಂದ ಬಾಕಿ ಹಣ ನೀಡುವಂತೆ ಒತ್ತಾಯಿಸಿ ವೇದಿಕೆಯ ಮುಂಭಾಗ ಜಮಾಯಿಸಿದಾಗ ಗೊಂದಲ ಉಂಟಾಯಿತು. ಜಿಲ್ಲಾಧಿಕಾರಿ ಡಿ.ಕೆ. ರವಿ ಮಧ್ಯ ಪ್ರವೇಶಿಸಿ, ಕಾರ್ಯಕ್ರಮವನ್ನು ಅನಗತ್ಯ ವಿಚಾರಗಳ ಮೂಲಕ ಹೈಜಾಕ್ ಮಾಡಬೇಡಿ, ಹಳೆಯ ಯೋಜನೆಗಳಲ್ಲಿ ಬಾಕಿ ಏನಾದರೂ ಬರಬೇಕಿದ್ದರೆ ಜಿಪಂ ಸಿಇಒ ಅವರು ಪಿಡಿಒಗಳ ಜೊತೆ ಸಭೆ ಮಾಡಿ ಸಮಸ್ಯೆ ಇತ್ಯರ್ಥ ಮಾಡುತ್ತಾರೆಂದು ಸಮಾಧಾನಪಡಿಸಿದರು.
ಜಿಲ್ಲೆಯ ಐದು ತಾಲೂಕುಗಳಿಂದ ಸುಮಾರು 1500ಕ್ಕೂ ಹೆಚ್ಚು ಫಲಾನುಭವಿಗಳು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಜಿಪಂ ಅಧ್ಯಕ್ಷರು ಹೊರತು ಪಡಿಸಿ ಉಳಿದಂತೆ ಯಾವುದೇ ಒಬ್ಬ ಸದಸ್ಯರು ಹಾಜರಿರಲಿಲ್ಲ.
ಪ್ರಾರಂಭದಲ್ಲಿ ಇನ್ನು ಉದ್ಘಾಟನೆಗೊಳ್ಳದ ಒಳಾಂಗಣ ಕ್ರೀಡಾಂಗಣದಲ್ಲಿ 'ಮೈಕಾ'ಸುರನ ಪ್ರತಿಧ್ವನಿಯ ಕಾಟದಿಂದ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು. ವ್ಯವಸ್ಥೆ ಸರಿಪಡಿಸಲು ಅಧಿಕಾರಿಗಳು ಹರಸಾಹಸಪಟ್ಟರು.
ಗ್ರಾಪಂ ಸದಸ್ಯರು ಒಗ್ಗೂಡಿದರೆ ಯಶಸ್ಸು 'ಖಾತ್ರಿ'
ಕೋಲಾರ: ಗ್ರಾಮ ಪಂಚಾಯಿತಿ ಸದಸ್ಯರು ಒಗ್ಗೂಡಿ ಕೆಲಸ ಮಾಡಿದಲ್ಲಿ ಮಾತ್ರ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಯಶ್ವಸಿಯಾಗಲು ಸಾಧ್ಯವೆಂದು ಜಿಲ್ಲಾಧಿಕಾರಿ ಡಿ.ಕೆ.ರವಿ ತಿಳಿಸಿದರು.
ನಗರದ ಸರ್ಕಾರಿ ಬಾಲಕ-ಬಾಲಕಿಯರ ಪದವಿಪೂರ್ವ ಕಾಲೇಜಿನ ಪಕ್ಕದಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿಯಿಂದ ಹಮ್ಮಿಕೊಂಡಿದ್ದ ನರೇಗಾ ವೈಯಕ್ತಿಕ ಫಲಾನುಭವಿಗಳ ಮೇಳದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಜವಾಬ್ದಾರಿಯನ್ನು ಅರಿತು ಜಾಗರುಕತೆಯಿಂದ ಮಾಹಿತಿಗಳನ್ನು ಸಂಗ್ರಹಿಸಿ ಹಕ್ಕು ಚಲಾಯಿಸಿದಲ್ಲಿ ನರೇಗಾ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳು ಯಾವುದೇ ಸಮಸ್ಯೆಯಿಲ್ಲದೆ ಉತ್ತಮವಾಗಿ ನಡೆಯುತ್ತದೆ ಹಾಗೂ ಬಿಲ್ಗಳನ್ನು ಸಕಾಲಕ್ಕೆ ಪಡೆಯಬಹುದೆಂದರು.
2009-10, 2010-11 ಮತ್ತು 2011-12ನೇ ಸಾಲಿನಲ್ಲಿ ಆಗಿರುವ ಕೆಲವು ಲೋಪ-ದೋಷದಿಂದಾಗಿ ಕೆಲವರಿಗೆ ಬಿಲ್ ಬಾಕಿ ಉಳಿಯುವಂತಾಗಿದೆ. ಇದಕ್ಕೆ ಅಧಿಕಾರಿಗಳು ಕಾರಣರಲ್ಲ, ಕಾಮಗಾರಿ ನಡೆಸಿದವರು ಸಂಬಂಧಪಟ್ಟ ದಾಖಲೆಗಳನ್ನು ಸರಿಯಾಗಿ ನೀಡದಿರುವುದರಿಂದ ಸಮಸ್ಯೆ ಹಾಗೆಯೇ ಉಳಿದಿದೆ ಎಂದರು.
ಕೆಲವರು ಬೋಗಸ್ ಜಾಬ್ ಕಾರ್ಡುಗಳನ್ನು ನೀಡಿದ್ದು ಅಂತಹವರಿಗೆ ಬಿಲ್ ಪಾವತಿಯಾಗಿಲ್ಲ, ಕೆಲವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೂ ಸೂಕ್ತ ದಾಖಲೆ ಒದಗಿಸದಿರುವುದರಿಂದ ಹಣ ಪಡೆಯಲಾಗಿಲ್ಲ. ಕಣ್ಣಿಗೆ ಕಾಣುವಂತಹ ಕೆಲಸ ನೀಡಲು ಸೂಚನೆ ಬಂದಿತ್ತು. ಆದರೆ, ಅಸತ್ಯದಿಂದ ಕೂಡಿದ ಕೆಲಸ ಹೆಚ್ಚಾಗಿದ್ದರಿಂದ ಬಿಲ್ ಪಾವತಿಯಲ್ಲಿ ಅಡಚಣೆ ಆಗಿರುವುದು ನಿಜ ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಜಯಬಾಸ್ಕರ್ ಅವರು ನರೇಗಾ ಯೋಜನೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಆಂಧ್ರ ಮತ್ತು ಇನ್ನಿತರ ರಾಜ್ಯಗಳಲ್ಲಿ ಜಾರಿ ಇರುವ ರೀತಿಯಲ್ಲಿ ವೈಯಕ್ತಕ ಫಲಾನುಭವಿಗಳಿಗೆ ಕೆಲಸ ನೀಡಲು ಆದೇಶ ನೀಡಿರುವುದರಿಂದ ಯಾವುದೇ ಅಕ್ರಮಗಳಿಗೆ ಆಸ್ಪದವಿಲ್ಲದ ರೀತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಪ್ರತಿಯೊಬ್ಬ ಸದಸ್ಯ ತಮ್ಮ ವ್ಯಾಪ್ತಿಯಲ್ಲಿ ಕನಿಷ್ಠ 10 ಮಂದಿ ವೈಯಕ್ತಿಕ ಫಲಾನುಭವಿಗಳಿಗೆ ಕೆಲಸ ಕೊಡಿಸಿದಲ್ಲಿ ಸರ್ಕಾರ ನಿಗದಿ ಮಾಡಿರುವ ಗುರಿ ಸಾಧನೆ ಕಷ್ಟವಾಗದು ಎಂದು ತಿಳಿಸಿದರು.
ನರೇಗಾ ಯೋಜನೆಯಲ್ಲಿ ಪ್ರತಿಯೊಬ್ಬ ಫಲಾನುಭವಿಗೆ 100 ದಿನ ಕೆಲಸ ನೀಡಲಾಗುತ್ತದೆ, ದಿನಕ್ಕೆ 174 ಕೂಲಿ ಸಿಗುತ್ತದೆ, ಜತೆಗೆ ಶೇ. 40ರಷ್ಟು ಸಲಕರಣ ವೆಚ್ಚ ಸಿಗುವುದರಿಂದ ಒಂದು ಕುಟುಂಬಕ್ಕೆ 20 ರಿಂದ 30 ಸಾವಿರ ಸಿಗುವುದರಿಂದ ಗ್ರಾಮೀಣ ಭಾಗದ ಸಣ್ಣ ಮತ್ತು ಅತಿ ಸಣ್ಣ ರೈತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಬಿಪಿಎಲ್ ಕುಟುಂಬಗಳು ಇದರ ಪ್ರಯೋಜನ ಪಡೆಯಬೇಕೆಂದು ಸಲಹೆ ನೀಡಿದರು.
ಈಗ ಜಾಬ್ ಕಾರ್ಡುಗಳಿಗೆ ತೊಂದರೆ ಪಡಬೇಕಾಗಿಲ್ಲ, ವೈಯುಕ್ತಿಕ ಫಲಾನುಭವಿಗಳು ತಮಗೆ ವಹಿಸುವ ಕೆಲಸ ಮುಗಿದ ಬಳಿಕ ತಾವೇ ಸೂಕ್ತ ದಾಖಲೆ ಒದಗಿಸಿದಲ್ಲಿ ಬೇರೆಯವರು ನಿಮ್ಮ ಕಾಮಗಾರಿ ವಿವರಗಳನ್ನು (ಎನ್.ಎಂ.ಆರ್) ಹೈಜಾಕ್ ಮಾಡುವ ಸಾಧ್ಯತೆಗಳಿರುವುದರಿಂದ ಬಿಲ್ ಪಡೆಯುವುದು ಕಷ್ಟವಾಗುತ್ತದೆ ಎಂದು ಎಚ್ಚರಿಕೆ ಮೂಡಿಸಿದರು.
ನರೇಗಾ ಯೋಜನೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ಪಡೆಯುವುದು ಪ್ರತಿಯೊಬ್ಬ ಗ್ರಾಪಂ ಸದಸ್ಯನ ಹಕ್ಕು, ಗ್ರಾಮ ಸಭೆಗಳನ್ನು ಕೇವಲ ಒಂದೆರಡು ಬಾರಿ ಮಾಡಬೇಕೆಂಬ ನಿಯಮವೇನಿಲ್ಲ, ಎಷ್ಟು ಬಾರಿಯಾದರೂ ಸಭೆ ಮಾಡಿ ಗ್ರಾಮಗಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಬಹುದು. ವೈಯಕ್ತಿಕ ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣ, ಜಾನುವಾರು, ಮೇಕೆ ಆಶ್ರಯಕ್ಕೆ, ಒಕ್ಕನೆ ಕಣ, ಕೋಳಿ ಸಾಗಣೆ, ರಿಚಾರ್ಜ್ ಪಿಟ್, ಸೋಕ್ ಪಿಟ್ಗಳಿಗಾಗಿ ನರೇಗಾ ಯೋಜನೆಯಲ್ಲಿ ಹಣ ಸಿಗುವುದರಿಂದ ಗ್ರಾಪಂ ಸದಸ್ಯರು ಜನತೆಯಲ್ಲಿ ಅರಿವು ಮೂಡಿಸಬೇಕೆಂದರು.
ಪ್ರತಿಯೊಂದು ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು, ಜನತೆಯ ಆರೋಗ್ಯ ಕಾಪಾಡಲು ಮುಂದಾಗಬೇಕು. ಗ್ರಾಪಂ ಪಿಡಿಒಗಳು ಸಹಕಾರ ನೀಡದಿದ್ದರೆ ತಾವೇ ಗ್ರಾಪಂಗಳಲ್ಲಿ ಕುಳಿತು ಯೋಜನೆ ಅನುಷ್ಠಾನಕ್ಕೆ ಮುಂದಾದರೆ ಪಿಡಿಒಗಳು ತಾವಾಗಿಯೇ ದಾರಿಗೆ ಬರುತ್ತಾರೆಂದು ಕಿವಿಮಾತು ನುಡಿದರು.
ಗ್ರಾಪಂ ಸದಸ್ಯರು ನಮ್ಮ ಊರು, ನಮ್ಮ ನೆಲ, ನಮ್ಮ ಊರು ನಮ್ಮ ಜಲ, ನಮ್ಮ ಊರು ನಮ್ಮ ಹೊಲ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರುವ ಮೂಲಕ ಮಾದರಿ ಗ್ರಾಪಂಗಳನ್ನಾಗಿ ಪರಿವರ್ತಿಸಬೇಕೆಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜುಲ್ಫಿಖಾರ್ ಉಲ್ಲಾ ನರೇಗಾ ಮೇಳದ ಉದ್ದೇಶ ಹಾಗೂ ಸರ್ಕಾರದ ಆದೇಶಗಳನ್ನು ವಿವರಿಸಿದರು. ಜಿಪಂ ಉಪ ಕಾರ್ಯದರ್ಶಿ ಬದನೂರು ಸ್ವಾಗತಿಸಿದರು, ವೇದಿಕೆಯಲ್ಲಿ ಜಿ.ಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ರೇಷ್ಮೆ ಇಲಾಖೆಯ ಉಪ ನಿರ್ದೇಶಕ ತುಪ್ಪದ್, ಜಿ.ಪಂ ಎಂಜಿನಿಯರಿಂಗ್ ವಿಭಾಗದ ಇಇ ದೇವರಾಜ್, ಯೋಜನಾಧಿಕಾರಿ ಡಿ. ಮೋಹನ್ ಕುಮಾರ್, ಒಂಬುಡ್ಸ್ಮನ್ ಗೋವಿಂದಪ್ಪ, ಕೃಷಿ ಇಲಾಖೆಯ ಡಿಡಿ ಚಿಕ್ಕಣ್ಣ, ಪಶು ಸಂಗೋಪನಾ ಇಲಾಖೆಯ ಡಾ. ಶ್ರೀಕಾಂತ್ ಮತ್ತಿತರರು ಇದ್ದರು.