ಮತಪಟ್ಟಿ ಪರಿಷ್ಕರಣೆಗೆ ಸಕಲ ಸಿದ್ಧತೆ ತರಬೇತಿ
ಕೋಲಾರ: ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ತಾಲೂಕಿನ 280 ಮಂದಿ ಬೂತ್ ಮಟ್ಟದ ಅಧಿಕಾರಿಗಳಿಗೆ ಮತಪಟ್ಟಿ ಪರಿಷ್ಕರಣೆ ಕುರಿತು ತರಬೇತಿ ಶಿಬಿರದಲ್ಲಿ ತಹಸೀಲ್ದಾರ್ ನಾಗರಾಜ್ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿದರು.
ಮುಂಬರುವ 2014ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಜೂನಿಯರ್ ಕಾಲೇಜಿನಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ನೀಡುತ್ತಿರುವ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಬೂತ್ ಮಟ್ಟದ ಅಧಿಕಾರಿಗಳಿಗೆ ಪ್ರಥಮ ಹಂತದ ತರಬೇತಿಯನ್ನು ನೀಡಲಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆಯಿಂದ ಮತದಾರರ ಪಟ್ಟಿಯ ಪರಿಷ್ಕಣೆ ಮಾಡಬೇಕೆಂದು ಸೂಚಿಸಿದರು.
ಮತದಾರರ ಪಟ್ಟಿ ಕುರಿತು ಯಾವುದೇ ಆರೋಪಗಳು ಕೇಳಿ ಬರದಂತೆ ಕಾರ್ಯನಿರ್ವಹಿಸಲು ಬೂತ್ ಮಟ್ಟದ ಅಧಿಕಾರಿಗಳನ್ನು ಸಿದ್ಧಗೊಳಿಸುತ್ತಿರುವುದಾಗಿ ನುಡಿದರು.
ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ, ಮೃತರ ಹೆಸರು, ವಿಳಾಸದಾರರಿಲ್ಲದವರ ಹೆಸರು ತೆಗೆಯುವಿಕೆ ಮತ್ತಿತರ ಕಾರ್ಯಗಳ ಯಶಸ್ಸಿಗೆ ಶ್ರಮಿಸುವಂತೆ ಬಿಎಲ್ಓಗಳಿಗೆ ಮನವಿ ಮಾಡಿದರು. ಮತಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಕಾರ್ಯನಿರ್ವಹಣೆಗೆ ಅನುಕೂಲವಾಗಲು ಬೂತ್ ಮಟ್ಟದ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ಒದಗಿಸಲಾಗುತ್ತಿದ್ದು ಇದರ ಪ್ರಯೋಜನ ಪಡೆಯುವಂತೆ ಕೋರಿದರು.
ಅ.30ರಂದು ಕರಡು ಪಟ್ಟಿ: ಬೂತ್ ಮಟ್ಟದ ಅಧಿಕಾರಿಗಳು ತಯಾರಿಸಿದ ಮಾಹಿತಿಯನ್ನು ದಾಖಲಿಸಿ ಕರಡು ಮತದಾರರ ಪಟ್ಟಿಯನ್ನು ಅ.30 ರಂದು ಪ್ರಕಟಿಸಲಾಗುವುದು ಎಂದ ತಹಸೀಲ್ದಾರ್ ನಾಗರಾಜ್ ಅವರು, 2014ರ ಜನವರಿ 1ಕ್ಕೆ 18 ವರ್ಷ ತುಂಬಿದವರನ್ನು ಮತಪಟ್ಟಿಗೆ ಸೇರಿಸಿಕೊಳ್ಳಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಮಾಹಿತಿ ಸಂಗ್ರಹಿಸವಂತೆ ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ನಗರದ ಬಾಲಕಿಯರ ಜೂನಿಯರ್ ಕಾಲೇಜಿನ ಉಪನ್ಯಾಸಕ ಜಿ.ಎಂ. ಗೋಪಿಕೃಷ್ಣನ್, ಎಪಿಕ್ ಕಾರ್ಡ್ ಪಡೆಯುವಿಕೆ, ಮತಪಟ್ಟಿಗೆ ಸಂಬಂಧಿಸಿದಂತೆ ಭರ್ತಿ ಮಾಡಬೇಕಾದ ಅರ್ಜಿಗಳ ಬಗ್ಗೆ ಮಾಹಿತಿ ನೀಡಿದರು.
ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸಿ. ನಾರಾಯಣಸ್ವಾಮಿ, ಹೆಚ್. ನಾರಾಯಣಸ್ವಾಮಿ, ನೂತನ ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲ ರುದ್ರಪ್ಪ, ಗುಂಡಪ್ಪ, ವೆಂಕಟೇಶ್ ಇದ್ದರು.
ಬೇಡಿಕೆ ಈಡೇರಿಕೆಗಾಗಿ ಪರವಾನಗಿ ವಿದ್ಯುತ್ ಗುತ್ತಿಗೆದಾರ ಪ್ರತಿಭಟನೆ
ಚಿಕ್ಕಬಳ್ಳಾಪುರ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಗರದ ಬೆಸ್ಕಾಂ ಕಚೇರಿಯ ಮುಂದೆ ಸೋಮವಾರ ಅನಿರ್ದಿಷ್ಟಾವಧಿ ಧರಣಿಯನ್ನು ಪ್ರಾರಂಭಿಸಿದ ಕರ್ನಾಟಕ ರಾಜ್ಯ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರು ಮಂಗಳವಾರ ಸಹ ಪ್ರತಿಭಟನೆ ನಡೆಸಿದರು.
ಸುರಿಯುತ್ತಿರುವ ಮಳೆಯ ನಡುವೆಯೂ ಬೆಸ್ಕಾಂ ಕಚೇರಿಯ ಮುಂದೆ ಧರಣೆ ಕುಳಿತ ಪ್ರತಿಭಟನಾಕಾರರು ಸ್ಥಳಕ್ಕೆ ಬಂದು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವವರೆಗೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಗುತ್ತಿಗೆದಾರರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಅಧಿಕಾರಿಗಳ ಧೋರಣೆ ಮತ್ತು ಸರ್ಕಾರದ ಕ್ರಮಗಳಿಂದ ತೊಂದರೆಯನ್ನು ಅನುಭವಿಸಬೇಕಾಗಿದೆ. ಅಲ್ಲದೇ ಸೇವೆಯ ವಿಳಂಬದಿಂದ ಗುತ್ತಿಗೆದಾರರು ಕೆಟ್ಟ ಹೆಸರನ್ನು ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರದ ಹೊಸ ನೀತಿಗಳಿಂದ ಗುತ್ತಿಗೆದಾರರು ಕೆಲಸ ನಿರ್ವಹಿಸಲು ಪರದಾಡುವಂತಾಗಿದೆ. ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯ ಮೊದಲ ದಿನವೇ ಬೆಸ್ಕಾಂ ಎಂಡಿಯವರು ಸ್ಥಳಕ್ಕೆ ಬಂದು ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದ್ದು ಇಲ್ಲಿನ ಅಧಿಕಾರಿಗಳು ಬಂದು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದು ಪ್ರತಿಭಟನೆಯ ಎರಡನೇ ದಿನವು ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಬಾಬು, ಮಂಜುನಾಧ್, ನಾರಾಯಣಸ್ವಾಮಿ ಮುಂತಾದವರು ಭಾಗವಹಿಸಿದ್ದರು.