ಸಂಗೀತ ವಿವಿ ಕುಲಪತಿ- ಕುಲಸಚಿವರ ವಾಕ್ಸಮರ
ಮೈಸೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಕುಲಪತಿ ಡಾ. ಹನುಮಣ್ಣ ನಾಯಕ ದೊರೆ ಮತ್ತು ಕುಲಸಚಿವ ಪ್ರೊ. ಎಂ. ಬಸವಣ್ಣ ಅವರ ವಾಕ್ಸಮರಕ್ಕೆ ವೇದಿಕೆಯಾಯಿತು.
ಪ್ರಾಸ್ತಾವಿಕ ಭಾಷಣ ಮಾಡಿದ ಕುಲಸಚಿವ ಡಾ.ಎಂ. ಬಸವಣ್ಣ, ಸಂಗೀತ ವಿವಿ ಗಾಂಧಿ ಜಯಂತಿ, ವಾಲ್ಮೀಕಿ ಜಯಂತಿ, ಅಂಬೇಡ್ಕರ್ ಜಯಂತಿ ಹೀಗೆ ಎಲ್ಲ ಜಯಂತಿಗಳನ್ನೂ ಆಚರಿಸಿಕೊಂಡು ಬರುತ್ತಿದೆ. ಆದರೆ ಕಳೆದೆರಡು ವರ್ಷಗಳಿಂದ ಬಸವ ಜಯಂತಿಯನ್ನು ಆಚರಿಸಿಲ್ಲ. ಅದನ್ನು ಮುಂದೆಯಾದರೂ ತಪ್ಪದೆ ಆಚರಿಸಬೇಕೆಂದು ಹೇಳಿದ್ದೇ ವಾಕ್ಸಮರಕ್ಕೆ ಕಾರಣವಾಯಿತು.
ಈ ವೇಳೆಯೇ ಮಧ್ಯ ಪ್ರವೇಶಿಸಿದ ಡಾ. ದೊರೆ, 'ವಿವಿಯ ಕುಲಸಚಿವರು, ಆಡಳಿತಾಧಿಕಾರಿಗಳೂ ಆದ ನೀವು ಕಾರ್ಯಕ್ರಮ ಆಯೋಜಿಸಬೇಕಿತ್ತು. ನಾನಲ್ಲ' ಎಂದು ಮೂದಲಿಸಿದರು.
ಇದರಿಂದ ಮತ್ತಷ್ಟು ಆಕ್ರೋಶಗೊಂಡ ಡಾ.ಬಸವಣ್ಣ 'ಮಿಸ್ಟರ್ ವಿಸಿ, ಬಸವ ಜಯಂತಿ ಆಚರಿಸದಿರಲು ನೀವೇ ಕಾರಣ ಎನ್ನಲಿಲ್ಲ. ಎಲ್ಲ ಜಯಂತಿಗಳನ್ನೂ ಸಮಾನವಾಗಿ ನೋಡಬೇಕಿರುವುದು ನಿಮ್ಮ ಕರ್ತವ್ಯ' ಎಂದರು. ಮತ್ತೆ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅವರನ್ನು ಸ್ವಾಗತಿಸುವಾಗ ಮತ್ತೊಮ್ಮೆ ಡಾ. ದೊರೆ ಕುಲಸಚಿವ ಡಾ.ಬಸವಣ್ಣ ಅವರನ್ನು ಏಕವಚನದಲ್ಲಿ ಮೂದಲಿಸಿದರು. ಆಗ ಬಸವಣ್ಣ ಅವರು, 'ಮಿಸ್ಟರ್ ವಿಸಿ, ಅಸಂವಿಧಾನಿಕ ಪದಗಳನ್ನು ಬಳಸಬೇಡಿ' ಎಂದು ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದರು.
ಆದರೂ ಸುಮ್ಮನಾಗದ ವಿಸಿ 'ನೀವು ದಲಿತ ವಿರೋಧಿ, ಕಮ್ಯುನಿಸ್ಟ್ ಮ್ಯಾನ್. ನಿಮ್ಮ ತಲೆಯಲ್ಲಿ ಏನಿದೆ?' ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಹಾಜರಿದ್ದ ಮೈಸೂರು ವಿವಿ ವಿಸಿ ಮತ್ತು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಮತ್ತು ಸಂಗೀತ ವಿವಿ ಸಿಬ್ಬಂದಿ ಇಬ್ಬರನ್ನೂ ಸಮಾಧಾನ ಪಡಿಸಿದರು.
ಜಾರಿ ಬಿದ್ದ ಡಾ.ದೊರೆ: ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಸಾಹಿತಿ ಪ್ರೊ. ನಾಗವಾರ ಅವರು ಮಾತನಾಡುತ್ತಿರುವಾಗ, 2011ರಲ್ಲಿ ಸಂಗೀತ ವಿವಿಯಲ್ಲಿ ಆಚರಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಜೆರಾಕ್ಸ್ ಪ್ರತಿಯನ್ನು ಡಾ. ದೊರೆ ತರಿಸಿದರು. ವೇದಿಕೆಯ ಮೇಲಿದ್ದ ಕೆಲವರಿಗೆ ಮತ್ತು ಸಂಗೀತ ವಿವಿಯ ಕೆಲವು ಸಿಬ್ಬಂದಿಗೆ ತಮ್ಮ ಸಹಾಯಕರ ಮೂಲಕ ಅವುಗಳನ್ನು ವಿತರಿಸಿದರು. ಬಳಿಕ ವೇದಿಕೆಯ ಮೇಲಿಂದ ಎದ್ದು ಹೊರಗೆ ಬಂದು, ಮತ್ತೆ ವೇದಿಕೆ ಏರಿ ಕೂರಬೇಕು ಎನ್ನುವಾಗ ವೇದಿಕೆಯ ಹಿಂಭಾಗಕ್ಕೆ ಜಾರಿ ಬಿದ್ದರು.
ಕೂಡಲೇ ವೇದಿಕೆಯ ಮೇಲಿದ್ದ ಗಣ್ಯರು ಮತ್ತು ಸಿಬ್ಬಂದಿ ಅವರನ್ನು ಮೇಲಿತ್ತಿ, ಅವರ ಕಾರಿನಲ್ಲಿಯೆ ಆಸ್ಪತ್ರೆಗೆ ಕರೆದೊಯ್ದರು.