15 ದಿನದಲ್ಲಿ ಮೃತ ರಾಸು ವಿವರ ನೀಡಿ
ಕ.ಪ್ರ.ವಾರ್ತೆ ಕೋಲಾರ ಅ. 23
ಜಿಲ್ಲೆಯಲ್ಲಿ ಕಾಲುಬಾಯಿ ಜ್ವರದಿಂದ ಸತ್ತಿರುವ ಹಸುಗಳ ಸಮಗ್ರ ಮಾಹಿತಿಯನ್ನು ಇನ್ನು 15 ದಿನದೊಳಗೆ ಸರ್ಕಾರಕ್ಕೆ ಸಲ್ಲಿಕೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಜಿಲ್ಲಾ ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಕಾಲುಬಾಯಿ ಜ್ವರದಿಂದ ಆಗಿರುವ ನಷ್ಟ ಮತ್ತು ರೋಗ ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪಶು ಇಲಾಖೆಯ ಉಪ ನಿರ್ದೇಶಕ ಡಾ. ಶಿವರಾಮ್ ಅವರಿಂದ ಮಾಹಿತಿ ಪಡೆದ ಸಚಿವರು, ಸರ್ಕಾರ ಕಾಲುಬಾಯಿ ಜ್ವರದಿಂದ ಸತ್ತಿರುವ ಹಸುಗಳಿಗೆ ಪರಿಹಾರ ನೀಡಲು ತೀರ್ಮಾನಿಸಿರುವುದರಿಂದ ಕಾಲಮಿತಿಯಲ್ಲಿ ಸಮೀಕ್ಷೆ ಮಾಡಿ ವರದಿ ಸಲ್ಲಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ಆಗಸ್ಟ್ನಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು ಈವರೆಗೆ 1115 ಹಸುಗಳು ಸತ್ತಿವೆ. ವೈರಸಸ್ನಿಂದ ಹರಡುವ ಕಾಯಿಲೆಗೆ ಔಷಧಿ ಕಂಡು ಹಿಡಿದಿಲ್ಲ, ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ರೋಗ ನಿರೋಧ ಲಸಿಕೆ ಹಾಕಲಾಗುತ್ತಿದೆ. ಕಾಯಿಲೆ ನಿಯಂತ್ರಣಕ್ಕೆ ಬಂದಿದ್ದರೂ ಬೇರೆ ಕಡೆಗಳಿಗೆ ಹರಡುತ್ತಿರುವುದರಿಂದ ಹಸುಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಡಾ. ಶಿವರಾಮ್ ವಿವರಿಸಿದರು.
ಕಾಲುಬಾಯಿ ಜ್ವರದ ಹಿನ್ನಲೆಯಲ್ಲಿ ಹಸುಗಳ ಆರೋಗ್ಯ ಕ್ಷೇಮಕ್ಕಾಗಿ ವಿಶೇಷ ವೈದ್ಯರ ತಂಡವನ್ನು ಕಳುಹಿಸಲಾಗಿಯೇ ಎಂದು ಪ್ರಶ್ನಿಸಿದರಲ್ಲದೆ, ಅನೇಕ ಕಡೆ ಪಶು ವೈದ್ಯರು ಸಕಾಲಕ್ಕೆ ಸಿಗುತ್ತಿಲ್ಲ, ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡುತ್ತಿಲ್ಲವೆಂದು ದೂರುತ್ತಿದ್ದಾರೆಂದು ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಾ. ಶಿವರಾಮ್. ನಮ್ಮಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಹೊರಗಿನಿಂದ 60 ಮಂದಿ ಪಶು ಪರೀಕ್ಷಕರನ್ನು ನಿಯೋಜಿಸಿಕೊಳ್ಳಲಾಗಿದೆ, ಜಿಲ್ಲೆಯ ಎಲ್ಲಾ ಕಡೆ ವೈದ್ಯರು ಮತ್ತು ಸಿಬ್ಬಂದಿಯನ್ನು ಕಳುಹಿಸಿಕೊಡಲಾಗಿದೆ, ಗ್ರಾಮಗಳಿಗೆ ತೆರಳಿ ಸರ್ವೆ ಕಾರ್ಯ ಮುಗಿಸಿದ ನಂತರ ಈ ತಂಡ ಸಮೀಪದ ಪಶು ಚಿಕಿತ್ಸಾ ಕೇಂದ್ರಗಳಲ್ಲೇ ತಂಗುತ್ತಿದ್ದಾರೆ ಎಂದರು.
ಕಾಲುಬಾಯಿ ಜ್ವರದಿಂದ ಸತ್ತಿರುವ ಹಸುಗಳ ಮಹಜರ್ ನಡೆಸಲು ಮತ್ತು ಮಾಹಿತಿ ಸಂಗ್ರಹಣೆಗಾಗಿ ಸಮಿತಿ ರಚನೆ ಮಾಡುವಂತೆ ಸರ್ಕಾರದಿಂದ ಅ.17 ರಂದು ಆದೇಶ ಬಂದಿದೆ. ಇದರ ಅನುಗುಣವಾಗಿ ತಾಲೂಕು ಪಶು ಇಲಾಖೆಯ ಸಹಾಯಕ ನಿರ್ದೇಶಕರ ಮೂಲಕ ಆಯಾ ತಾಲೂಕಿನ ತಹಸೀಲ್ದಾರ್ಗಳಿಗೆ ಸರ್ಕಾರದ ಆದೇಶ ಪ್ರತಿಯನ್ನು ತಲುಪಿಸುವಂತೆ ಸೂಚಿಸಲಾಗಿದೆಯಲ್ಲದೆ ತಾವು ಸಹ ಅಂಚ ಮುಖೇನ ತಹಸೀಲ್ದಾರ್ ಅವರಿಗೆ ಸರ್ಕಾರದ ಆದೇಶ ಪ್ರತಿ ಕಳುಹಿಸಿರುವುದಾಗಿ ಹೇಳಿದರು.
ಸಮಿತಿ ರಚನೆಗೆ ಸಂಬಂಧಿಸಿದಂತೆ ತಮಗೆ ಯಾವುದೇ ಮಾಹಿತಿ ಪಶು ಇಲಾಖೆಯಿಂದ ಬಂದಿಲ್ಲವೆಂದು ಕೋಲಾರ ತಹಸೀಲ್ದಾರ್ ನಾಗರಾಜ್ ಸಚಿವರ ಗಮನಕ್ಕೆ ತಂದಾಗ ಸಿಡಿಮಿಡಿಗೊಂಡ ಸಚಿವರು, ಸಮನ್ವಯತೆ ಇಲ್ಲದಿದ್ದರೆ ಕೆಲಸ ಸುಲಭವಾಗಲ್ಲ, ಕೂಡಲೇ ಸಮಿತಿಯನ್ನು ರಚನೆ ಮಾಡಿ ಸಮರೋಪಾದಿಯಲ್ಲಿ ಸರ್ವೆ ಕಾರ್ಯ ಮುಗಿಸಿ ಎಂದು ಸಚಿವ ಖಾದರ್ ತಾಕೀತು ಮಾಡಿದರು.
ಸರ್ಕಾರದಿಂದ ಸರಬರಾಜು ಆಗಿರುವ ಔಷಧಿಗಳ ಗುಣಮಟ್ಟ ಸರಿಯಿಲ್ಲ, ಖಾಸಗಿ ಔಷಧಿ ಅಂಗಡಿಗಳಿಂದ ಖರೀದಿ ಮಾಡುವ ಔಷಧಿಯ ಗುಣಮಟ್ಟ ಚನ್ನಾಗಿ, ಸರ್ಕಾರ ಒದಗಿಸರುವ ಮತ್ತು ಖಾಸಗಿ ಅಂಗಡಿಗಳಲ್ಲಿ ಸಿಗುತ್ತಿರುವ ಔಷದಿ ಬೆಲೆ ಒಂದೇ ಆಗಿರುವುದರಿಂದ ಜನತೆಯಲ್ಲಿ ಅನುಮಾನ ಮೂಡುವಂತಾಗಿದೆ ಎಂದು ಜಿ.ಪಂ ಸದಸ್ಯ ಆನಂದ್ ತಿಳಿಸಿದರು. ಸರ್ಕಾರಿ ಔಷಧಿಯ ಬಗ್ಗೆ ಜನತೆಯಲ್ಲಿ ಉಂಟಾಗಿರುವ ಸಂಶಯ ನಿವಾರಿಸುವ ಹೊಣೆ ನಿಮ್ಮದು. ಕೂಡಲೇ ತನಿಖೆ ಮಾಡಿ ಜಿಲ್ಲಾಧಿಕಾರಿಗೆ ವರದಿ ನೀಡಿ ಎಂದು ಸಚಿವ ಖಾದರ್ ಅವರು ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.
ಗಡಿ ತಾಲೂಕು ಅಭಿವೃದ್ಧಿಯಾಗದಿದ್ರೆ ಕನ್ನಡ ಉಳಿಯಲ್ಲ: ಶಾಸಕರ ಅಳಲು
ಕೋಲಾರ: ಜಿಲ್ಲೆಯ ಗಡಿ ತಾಲೂಕುಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ನೀಡಬೇಕು, ಗಡಿ ಭಾಗದ ರಸ್ತೆಗಳನ್ನು ಉನ್ನತೀಕರಣಗೊಳಿಸದಿದ್ದರೆ ಕನ್ನಡ ಉಳಿಯಲ್ಲವೆಂದು ಮಾಲೂರು ಶಾಸಕ ಕೋಡಿಹಳ್ಳಿ ಮಂಜುನಾಥಗೌಡ ಅಳಲು ತೋಡಿಕೊಂಡರು.
ಕೆಡಿಪಿ ಸಭೆಯಲ್ಲಿ ಗಡಿ ರಸ್ತೆಗಳ ಸ್ಥಿತಿಗತಿಯನ್ನು ವಿವರಿಸಿದ ಅವರು, ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ರಸ್ತೆಗಳು ಉತ್ತಮವಾಗಿರುವುದರಿಂದ ಅಲ್ಲಿನ ಜನತೆ ಗಡಿ ಭಾಗದಲ್ಲಿ ಆ ರಾಜ್ಯದ ಮುಖ್ಯಮಂತ್ರಿಗಳ ಫೋಟೋ ಹಾಕಿದ್ದಾರೆ, ನಮ್ಮ ಜಿಲ್ಲೆಯ ಗಡಿ ಭಾಗದ ರಸ್ತೆಗಳು ಅಭಿವೃದ್ಧಿಪಡಿಸಲು ಸರ್ಕಾರ ಗಮನ ನೀಡಬೇಕೆಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಖಾದರ್, ಆ ರಾಜ್ಯದ ಪರಿಸ್ಥಿತಿ ಬೇರೆ ಆಗಿರಬಹುದು, ಅಭಿವೃದ್ಧಿ ವಿಚಾರದಲ್ಲಿ ನಾವು ಬೇರೆಯವರಿಗೆ ಹೊಲಿಕೆ ಮಾಡಿಕೊಳ್ಳುವ ಬದಲು ನಮ್ಮ ಜಿಲ್ಲೆಯನ್ನು ಮಾದರಿಗೊಳಿಸಲು ಒಗ್ಗಟ್ಟಿನಿಂದ ಕೆಲಸ ಮಾಡೋಣವೆಂದು ಸಲಹೆ ನೀಡಿದರು.