ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕುಡಿವ ನೀರು; ಒಗ್ಗಟ್ಟಾಗಿ ಬಂದ್ರೆ ಸಿಎಂ ಬಳಿ ನಿಯೋಗ

Srinivasa Murthy VN
Updated On : 24 Oct 2013, 12:04 pm

ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರಿಗೆ ಉಸ್ತುವಾರಿ ಸಚಿವ ಯು.ಟಿ. ಖಾದರ್ ಕಿವಿಮಾತು
ಕ.ಪ್ರ.ವಾರ್ತೆ ಕೋಲಾರ ಅ. 23

ಕುಡಿವ ನೀರಿನ ಸಮಸ್ಯೆ ನಿವಾರಣೆಗಾಗಿ ಜಿಲ್ಲೆಯ ಎಲ್ಲಾ ಶಾಸಕರು ಒಗ್ಗೂಡಿ ಬಂದಲ್ಲಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕರೆದೊಯ್ದು ವಿಶೇಷ ಅನುದಾನ ಕೇಳಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಯು.ಟಿ. ಖಾದರ್ ಪ್ರತಿಪಾದಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಜನರ ಸಮಸ್ಯೆಗಳನ್ನು ಈಡೇರಿಸುವ ಜವಾಬ್ದಾರಿ ಮತ್ತು ಹೊಣೆಗಾರಿಕೆ ಚುನಾಯಿತ ಜನಪ್ರತಿನಿಧಿಗಳ ಮೇಲಿದೆ. ಕುಡಿಯುವ ನೀರು ಮತ್ತು ಇನ್ನಿತರ ಮೂಲ ಸೌಕರ್ಯ ಕಲ್ಪಿಸಲು ಶಾಸಕರು,ಜಿಲ್ಲಾ ಪಂಚಾಯಿತಿ ಸದಸ್ಯರು ಮುಕ್ತ ಮನಸ್ಸಿನಿಂದ ಸಮಾಲೋಚನೆ ನಡೆಸಿ ಸರ್ಕಾರದಿಂದ ಪರಿಹಾರ ಕಂಡುಕೊಂಡಾಗ ಮಾತ್ರ ಜನತೆ ನಿಮ್ಮನ್ನು ನಂಬುತ್ತಾರೆಂದು ಕಿವಿಮಾತು ಹೇಳಿದರು.
ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಕಾರ್ಯಕ್ರಮ ರೂಪಿಸಬೇಕು, ನಾನು ಕೇವಲ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರೆ ಹೆಚ್ಚು ಸಮಯವನ್ನು ಜಿಲ್ಲೆಗೆ ನೀಡಬಹುದಾಗಿತ್ತು. ಆರೋಗ್ಯ ಸಚಿವನಾಗಿ ರಾಜ್ಯದಾದ್ಯಂತ ಸುತ್ತಬೇಕಾಗಿದೆ, ನನ್ನ ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ನೀಡಬೇಕಾಗಿರುವುದರಿಂದ ಜಿಲ್ಲೆಯ ಶಾಸಕರು ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಭಿನ್ನಮತಕ್ಕೆ ಅವಕಾಶ ನೀಡದೆ, ಒಗ್ಗೂಡಿ ಬಂದಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಹೆಚ್ಚಿನ ಅನುಕೂಲ ಪಡೆಯಬಹುದಾಗಿದೆ ಎಂದರು.
ಸ್ಪಷ್ಟನೆ ಬಯಸಿದ ಶಾಸಕ: ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಇದಕ್ಕೂ ಮುನ್ನ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಸರ್ಕಾರದಿಂದ ಮಂಜೂರಾಗಿರುವ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಕೆಲವರು ಗೊಂದಲ ಸೃಷ್‌ಠಿಸುತ್ತಿದ್ದಾರೆ. ಟಾಸ್ಕ್‌ಫೋರ್ಸ್ ಮತ್ತು ಇತರೆ ಯೋಜನೆಗಳ ಮೂಲಕ ಕ್ಷೇತ್ರದಲ್ಲಿ ಕೊರೆಸಲಾಗುತ್ತಿರುವ ಕೊಳವೆ ಬಾವಿಗಳ ವಿಚಾರದಲ್ಲಿ ಕೆಲವರು ಜಿಲ್ಲಾ ಪಂಚಾಯಿತಿಯಿಂದ ಬಿಡುಗಡೆ ಆಗಿರುವ ಅನುದಾನದಲ್ಲಿ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಿರುವುದರಿಂದ ಜನತೆಯಲ್ಲಿ ಅನಗತ್ಯ ಅನುಮಾನ ಮೂಡಲಾರಂಭಿಸಿರುವುದರಿಂದ ಸ್ಪಷ್ಟನೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೋರಿದರು.
ಶಾಸಕರು ತಮ್ಮ ಬಗ್ಗೆಯೇ ಮಾತನಾಡುತ್ತಿದ್ದಾರೆಂದು ಭಾವಿಸಿದ ಬಂಗಾರಪೇಟೆ ತಾಲೂಕಿನ ಜಿ.ಪಂ ಸದಸ್ಯ ಎಂ.ಎಸ್. ಆನಂದ್, ಶಾಸಕರಿಗೆ ಇರುವ ಅಧಿಕಾರದ ಬಗ್ಗೆ ನಾವು ಯಾರೂ ಚಕಾರ ಎತ್ತುತ್ತಿಲ್ಲ. ಕೊಳವೆ ಬಾವಿಗಳನ್ನು ಕೊರೆಸುವ ಸಂದರ್ಭದಲ್ಲಿ ಜನತೆಯಿಂದ ಆಯ್ಕೆಯಾಗಿರುವ ನಮ್ಮನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ಸಮಸ್ಯೆ ಇರುವ ಊರುಗಳಿಗೆ ನೀರು ಕೊಡಬಹುದೆಂಬ ಉದ್ದೇಶವಷ್ಟೇ ಎಂದು ಸಮರ್ಥನೆ ಮಾಡಿಕೊಂಡರು.
ಜಿ.ಪಂ ಸದಸ್ಯ ಎಂ.ಎಸ್. ಆನಂದ್ ಅವರ ವಾದಕ್ಕೆ ಬೆಂಬಲ ನೀಡಿದ ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಅವರು, ಅಧಿಕಾರ ವಿಕೇಂದ್ರಿಕರಣದ ಅನುಗುಣವಾಗಿ ಯಾವುದೇ ಒಂದು ಕಡೆ ಏನೇ ಅಭಿವೃದ್ಧಿ ಕೆಲಸಗಳು ನಡೆದರೂ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂಬ ನೀತಿಯಿದ್ದರೂ ಕೆಲ ಶಾಸಕರು ನಮ್ಮನ್ನು ಕತ್ತಲಿನಲ್ಲಿಟ್ಟು ಕೆಲಸ ಮಾಡಿಸುತ್ತಿದ್ದಾರೆ, ಶಾಸಕರಿಗೆ ಇರು ಅಧಿಕಾರವನ್ನು ಕಸಿದುಕೊಳ್ಳುವ ಉದ್ದೇಶ ನಮಗಿಲ್ಲ. ಅದೇ ರೀತಿ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಇರುವ ಹೊಣೆಗಾರಿಯನ್ನು ಶಾಸಕರು ಅರ್ಥ ಮಾಡಿಕೊಳ್ಳಬೇಕು, ಸರ್ಕಾರ ಎಲ್ಲಾ ಅನುದಾನಗಳನ್ನು ಶಾಸಕರೇ ನಿರ್ವಹಣೆ ಮಾಡುವುದಾದರೆ ನಮಗೇನು ಕೆಲಸವೆಂದು ಪ್ರಶ್ನಿಸಿದರು.
ಸಚಿವರ ಬುದ್ಧಿವಾದ: ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಮತ್ತು ಸದಸ್ಯ ಆನಂದ್ ಅವರ ಅಭಿಪ್ರಾಯಗಳಿಗೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಉತ್ತರ ನೀಡಲು ಮುಂದಾದಾಗ ಪರಿಸ್ಥಿತಿ ಅರ್ಥಮಾಡಿಕೊಂಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿ, ಜನತೆಗೆ ಬೇಕಾದ ಸೌಲಭ್ಯ ಕಲ್ಪಿಸಲು ಚರ್ಚೆ ನಡೆಯಬೇಕೇ ಹೊರತು ಭಿನ್ನಮತಕ್ಕೆ ಅವಕಾಶ ಇರಬಾರದು. ಸ್ಥಳೀಯವಾಗಿ ಏನಾದರೂ ತೊಂದರೆ ಇದಲ್ಲಿ ತಾವುಗಳು ಒಂದು ಕಡೆ ಕುಳಿತು ಪರಸ್ಪರ ಚರ್ಚೆಯ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮವೆಂದು ಬುದ್ಧಿವಾದ ಹೇಳಿದರು.
ಕುಡಿಯುವ ನೀರಿಗೆ ಸೇರಿದಂತೆ ಯಾವುದೇ ಯೋಜನೆಗೂ ಸರ್ಕಾರ ನೀಡುವ ಅನುದಾನ ಸದ್ಬಳಕೆಯಾಗಿ ಜನತೆಗೆ ಅನುಕೂಲವಾಗಬೇಕು. ಜನತೆಯು ನೀಡುವ ತೆರಿಗೆ ಹಣದಿಂದ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಬಿಡುಗಡೆಯಾಗುತ್ತದೆ. ಶಾಸಕರು ಇಲ್ಲವೇ ಜಿಲ್ಲಾ ಪಂಚಾಯಿತಿ ಸದಸ್ಯರು ರೂಪಿಸುವ ಯೋಜನೆಗಳು ಜನರಿಗೇ ಸೇರುವುದರಿಂದ ಭಿನ್ನಮತ ಕಾಣಿಸಿಕೊಳ್ಳಬಾರದು, ಜನಪ್ರತಿನಿಧಿಗಳು ಸ್ವಪ್ರತಿಷ್ಠೆ ಬಿಡದಿದ್ದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
10 ಕೋಟಿ ವಿಶೇಷ ಅನುದಾನಕ್ಕೆ ಮನವಿ: ಮಾಲೂರು ಶಾಸಕ ಕೋಡಿಹಳ್ಳಿ ಮಂಜುನಾಥಗೌಡ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ತುರ್ತಾಗಿ ಕನಿಷ್ಠ 10 ಕೋಟಿ ರು.ಅನುದಾನ ಬೇಕು. ಸಿಎಂ ಸಿದ್ದರಾಮಯ್ಯನವರು ಅನೇಕ ಕೆಲಸಗಳ ಒತ್ತಡದಲ್ಲಿ ಇರುತ್ತಾದ್ದರಿಂದ ನಾವು ಅವರನ್ನು ಭೇಟಿಯಾಗುವುದು ಸುಲಭದ ಮಾತಲ್ಲ, ನೀವೇ ನಮ್ಮ ಪರವಾಗಿ,ಜನರ ಪರವಾಗಿ ಸಿಎಂ ಜೊತೆ ಮಾತನಾಡಿ, ಕೋಲಾರಕ್ಕೆ ನೀವೇ ಸಿಎಂ ಎಂದು ಪ್ರಚೋದಿಸಿದರು.
ಗ್ರಾಮೀಣ ಪ್ರದೇಶಕ್ಕಿಂತ ಪಟ್ಟಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ, ಜನತೆಯ ಬೇಡಿಕೆಯೂ ಹೆಚ್ಚುತ್ತಿದೆ. ಪಟ್ಟಣ ಪ್ರದೇಶಗಳಲ್ಲಿ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲು ಮತ್ತು ಹಾಲಿ ಕೊರೆಸಲಾಗಿರುವ ಪಂಪು ಮೋಟಾರ್‌ಗಳನ್ನು ಆದಷ್ಟು ಬೇಗನೆ ಅಳವಡಿಸುವುದಕ್ಕೆ ಕ್ರಮ ಕೈಗೊಳ್ಳುವಂತೆ ಶಾಸಕರಾದ ನಾರಾಯಣಸ್ವಾಮಿ ಮತ್ತು ಮಂಜುನಾಥಗೌಡ ತಿಳಿಸಿದಾಗ, ಈ ಸಂಬಂಧ ನಗರಾಭಿವೃದ್ಧಿ ಕೋಶದ ನಿರ್ದೇಶಕರು ಕೂಡಲೇ ಸಂಬಂಧಪಟ್ಟ ಪುರಸಭೆಗಳ ಮುಖ್ಯಾಧಿಕಾರಿಗಳ ಜೊತೆ ಚರ್ಚಿಸಿ ಸಮಗ್ರ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಮೂಲಕ ತಮಗೆ ಕಳುಹಿಸುವಂತೆ ನಗರಾಭಿವೃದ್ಧಿ ಕೋಶದ ನಿರ್ದೇಶಕಿ ಸರ್ವರ್ ಮರ್ಚೆಂಟ್ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಜಿ.ಪಂ ಉಪಾಧ್ಯಕ್ಷೆ ಅಲುವೇಲಮ್ಮ, ಶಾಸಕರಾದ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ಜಿಲ್ಲಾಧಿಕಾರಿ ಡಿ.ಕೆ.ರವಿ, ಕೋಲಾರ ಎಸ್ಪಿ ಡಾ. ರಾಮ್‌ನಿವಾಸ್ ಸಪಟ್, ಕೆಜಿಎಫ್‌ನ ಎಸ್ಪಿ ಡಾ. ರೋಹಣಿ ಕಚೂಟ್ ಸಪಟ್, ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಮೋಲ್ ಮೋಹನ್, ಜಿ.ಪಂ ಉಪ ಕಾರ್ಯದರ್ಶಿ ಬದನೂರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ರಾಜೇಂದ್ರನಹಳ್ಳಿ; ಆಸ್ಪತ್ರೆಗೆ ಭೂಮಿ ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್ ಭರವಸೆ
ಕೋಲಾರ:
ಮುಳಬಾಗಿಲು ತಾಲೂಕಿನ ರಾಜೇಂದ್ರನಹಳ್ಳಿಗೆ ಮಂಜೂರು ಆಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಸರ್ಕಾರದಿಂದ ಸೂಕ್ತ ಜಾಗ ಸಿಗದಿದ್ದರೆ ತಾವು ತಮ್ಮ ಸ್ವಂತ ಹಣದಿಂದ ಭೂಮಿ ಖರೀದಿಸಿಕೊಡುವುದಾಗಿ ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ರಾಜೇಂದ್ರನಹಳ್ಳಿಗೆ ಮಂಜೂರಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಸಂಬಂಧ ಉಂಟಾಗಿರುವ ವಿವಾದಕ್ಕೆ ಸ್ಪಷ್ಟನೆ ನೀಡಿದ ಅವರು, ಆಸ್ಪತ್ರೆ ಯಾವುದೇ ಕಾರಣಕ್ಕೂ ಬೇರೆಡೆಗೆ ಸ್ಥಳಾಂತರವಾಗುವುದಕ್ಕೆ ಅವಕಾಶ ನೀಡಲ್ಲ, ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಿರುವ ಪ್ರಸ್ತುತ ಜಾಗದಲ್ಲಿ ಬಡವರು ಮನೆಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರನ್ನು ಒಕ್ಕಲು ಎಬ್ಬಿಸುವುದು ಸರಿಯಲ್ಲ, ಇದೇ ಜಾಗದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಿಸುವ ಪ್ರಸ್ತಾವನೆ ಕೈಬಿಟ್ಟಲ್ಲಿ ತಾವು ಬೇರೆ ಜಾಗ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ಭರವಸೆ ನೀಡಿದರು.
ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಿರುವ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಲಾಗಿದೆ ಎಂದು ಜಿ.ಪಂ ಉಪಾಧ್ಯಕ್ಷೆ ಅಲುವೇಲಮ್ಮ ತಿಳಿಸಿದರಲ್ಲದೆ, ಆಸ್ಪತ್ರೆ ನಿರ್ಮಿಸಲು ಪ್ರಸ್ತುತ ಗುರುತಿಸಿರುವ ಜಾಗವೇ ಸೂಕ್ತವೆಂದಾಗ, ಜಿಲ್ಲೆಯಲ್ಲಿ ಶೇ. 90ರಷ್ಟು ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಇದನ್ನೆಲ್ಲ ತೆರವು ಮಾಡುವುದು ಸಾಧ್ಯವೇ ಎಂದು ಪ್ರಶ್ನಿಸಿದಲ್ಲದೆ, ರಾಜೇನಹಳ್ಳಿಯಲ್ಲೇ ಆಸ್ಪತ್ರೆ ನಿರ್ಮಿಸಲು ಸಹಕಾರ ಮುಖ್ಯವೆಂದರು.
ಶಾಸಕರ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಯು.ಟಿ. ಖಾದರ್, ರಾಜೇನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳು ಅತ್ಯಂತ ಹಿಂದುಳಿದಿದೆ, ಆಸ್ಪತ್ರೆ ಗ್ರಾಮದೊಳಗೆ ಇದ್ದರೆ ಜನರಿಗೆ ಅನುಕೂಲವಾಗುತ್ತದೆ. ಅಲ್ಲಿನ ಜನಪ್ರತಿನಿಧಿಗಳು ಮತ್ತು ಜನರೊಂದಿಗೆ ಚರ್ಚಿಸಿ ಸಮಸ್ಯೆ ನಿವಾರಿಸಬೇಕೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಮಾಲೂರು ಶಾಸಕ ಕೋಡಿಹಳ್ಳಿ ಮಂಜುನಾಥ್ ಅವರು ರಾಜೇಂದ್ರನಹಳ್ಳಿಯಲ್ಲಿ ಆಸ್ಪತ್ರೆ ನಿರ್ಮಿಸಲು ಕಷ್ಟವಿದ್ದಲ್ಲಿ ನನ್ನ ಕ್ಷೇತ್ರಕ್ಕೆ ಸ್ಥಳಾಂತರ ಮಾಡಿ ಎಂದು ಸಚಿವರನ್ನು ಒತ್ತಾಯಿಸಿದರು. ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್, ಆಸ್ಪತ್ರೆ ಸ್ಥಳಾಂತರಕ್ಕೆ ಅವಕಾಶ ನೀಡಲ್ಲ, ಸಮಸ್ಯೆ ನಿವಾರಣೆ ಮಾಡುವೆ ಎಂದರು.
ಕ್ರೀಡಾಂಗಣ ನಿರ್ಮಾಣ: ಕೋಲಾರದ ಸರ್ಕಾರಿ ಜೂನಿಯರ್ ಕಾಲೇಜಿನ ಪಕ್ಕ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 50 ಲಕ್ಷ ರು.ಬೇಕಾಗಿದೆ. ಈ ಸಂಬಂಧ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ. ಹಣ ಬಿಡುಗಡೆಯಾಗುವ ಭರವಸೆ ಸಿಕ್ಕಿದ್ದು, ಶೀಘ್ರವೇ ಕಾಮಗಾರಿ ಮುಗಿಸಿ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡುವುದಾಗಿ ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು. ತಾಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣಗಳು ಇಲ್ಲವೆಂದು ಶಾಸಕ ಮಂಜುನಾಥಗೌಡ ತಿಳಿಸಿದಾಗ, ಪ್ರತಿಯೊಂದು ತಾಲೂಕಿನಲ್ಲಿ 1.50 ಕೋಟಿ ರು. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲು ಅವಕಾಶವಿದೆ. ಪ್ರಸ್ತಾವನೆ ನೀಡಿದಲ್ಲಿ ಸರ್ಕಾರಕ್ಕೆ ಕಳುಹಿಸುವುದಾಗಿ ಜಿಲ್ಲಾಧಿಕಾರಿ ಉತ್ತರಿಸಿದರು.
ಇಷ್ಟು ವರ್ಷಗಳಿಂದ ಮಾಲೂರಿನಲ್ಲಿ ಕ್ರೀಡಾಂಗಣ ಏಕೆ ಆಗಿಲ್ಲವೆಂದು ಸಚಿವ ಖಾದರ್ ಕೇಳಿದಾಗ, ಮಾಲೂರಿನಲ್ಲಿ ಇಷ್ಟು ದಿನ ಪೂಳಿಯೋಗರೆ, ಲಾಡುಗಳ ಕಾರುಬಾರು ಹೆಚ್ಚಾಗಿತ್ತು, ಈಗ ಸ್ಟೇಡಿಯಂ ನಿರ್ಮಾಣಕ್ಕೆ ಪ್ರಯತ್ನ ನಡೆದಿದೆ. ಈ ಸಂಬಂಧ ಹೀರೋ ಹೋಂಡಾ ಸಂಸ್ಥೆಯವರೊಂದಿಗೆ ಚರ್ಚಿಸಿದ್ದೇನೆಂದು ಹೇಳಿದರು.
ಬಾಲ ಭವನಕ್ಕೆ ನಿವೇಶನ: ಕೋಲಾರದಲ್ಲಿ ಬಾಲಭವನ ನಿರ್ಮಾಣಕ್ಕೆ ನಿವೇಶನ ಇಲ್ಲದೆ ಅನುದಾನ ಸರ್ಕಾರಕ್ಕೆ ವಾಪಸ್ ಹೋಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಶಕುಂತಲಾ ತಿಳಿಸಿದರು. ಇದರಿಂದ ಬೇಸತ್ತ ಜಿಲ್ಲಾಧಿಕಾರಿ ನಾನು ಬಂದು ಎರಡು ತಿಂಗಳಾಯಿತು, ಬಾಲ ಭವನದ ಬಗ್ಗೆ ನನ್ನೊಂದಿಗೆ ಚರ್ಚಿಸಿಲ್ಲ, ಪ್ರಸ್ತಾವನೆ ತೆಗೆದುಕೊಂಡು ಬನ್ನಿ ನಿವೇಶನ ಮಂಜೂರು ಮಾಡಿಸುತ್ತೇನೆಂದು ಹೇಳಿದರು. ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ನಾಗರಾಜಗೌಡ, ಕೂಡಾ ವ್ಯಾಪ್ತಿಯ ಟಮಕದಲ್ಲಿ ಬಾಲಭವನಕ್ಕೆ ಸಿಎ ಸೇಟು ನೀಡಲು ಬದ್ಧ. ಈ ಕುರಿತು ಜಿಲ್ಲಾಧಿಕಾರಿಗಳು ಸಹ ಒಪ್ಪಿಗೆ ನೀಡಿದ್ದಾರೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement