ದೇಗುಲ ಭೂವಿವಾದ: ಗುಂಪುಗಳ ಮಾತಿನ ಚಕಮಕಿ
ಚಿಂತಾಮಣಿ: ದೇವಾಲಯ ಭೂವಿವಾದ ಹಿನ್ನೆಲೆಯಲ್ಲಿ ಭೂ ಮಾಲೀಕನಿಗೂ ಹಾಗೂ ಸ್ಥಳೀಯ ನಾಗರೀಕ ಮತ್ತು ಭಕ್ತಾಧಿಗಳಿಗೂ ಪರ-ವಿರೋಧ ಮಾತಿನ ಚಕಮಕಿಯಾಗಿ ಕೈ ಕೈ ಮಿಲಾಯಿಸುವ ಯತ್ನಿಸಿದ ಘಟನೆ ನಡೆದಿದೆ.
ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಅರಿತ ಪೊಲೀಸರು ಮಧ್ಯ ಪ್ರವೇಶಿಸಿ ಗುಂಪುಗಳನ್ನು ಚದುರಿಸಿದರು.
ಘಟನೆ ವಿವರ: ಪಟ್ಟಣದ ರೈಲ್ವೇ ಸ್ಟೇಶನ್ ರಸ್ತೆ ಬಳಿ ಇರುವ ಚೌಡೇಶ್ವರಿ ದೇವಾಲಯದ ಇನಾಂತಿ ಜಮೀನು ನಕ್ಕುಂದಿ ಗ್ರಾಮದ ಸರ್ವೆ ನಂ.160 ರ 2 ಎಕರೆ 33 ಕುಂಟೆ ದೇವಾಲಯದ ಜಮೀನಿನ ಬಗ್ಗೆ ಶ್ರೀನಿವಾಸ್ ಬಿನ್ ಲೇಟ್ ಗಿಡ್ಡಣ್ಣಗಾರಿ ನಾರಾಯಣಪ್ಪ ಎಂಬುವರಿಗೂ ಮತ್ತು ದೇವಾಲಯದ ಟ್ರಸ್ಟ್ ಸದಸ್ಯರಿಗೂ ಹಾಗೂ ಸ್ಥಳೀಯ ನಿವಾಸಿಗಳಿಗೂ ಭೂ ವಿವಾದ ನ್ಯಾಯಾಲಯದಲ್ಲಿ ಕಳೆದ 15 ವರ್ಷಗಳಿಂದ ದಾವೆ ನಡೆಯುತ್ತಿತ್ತು.
ಬುಧವಾರ ಬೆಳಿಗ್ಗೆ ನ್ಯಾಯಾಲಯದ ತೀರ್ಪು ಶ್ರೀನಿವಾಸ ಎಂಬುವರಿಗೆ ಭೂ ಮಾಲೀಕತ್ವವನ್ನು ತೀರ್ಪು ನೀಡಿದ ನ್ಯಾಯಾಲಯದ ಆದೇಶವನ್ನು ಪಡೆದು ನನಗೆ ಜಮೀನು ಹದ್ದುಬಸ್ತು ಮಾಡಲು ಪೊಲೀಸ್ ರಕ್ಷಣೆ ಕೋರಿ ಮಾಲೀಕನು ಕಲ್ಲು ಚಪ್ಪಡಿಗಳನ್ನು ನೆಡಲು ಮುಂದಾದರು. ಈ ಸುದ್ದಿ ತಿಳಿದ ಸ್ಥಳೀಯ ನಾಗರೀಕರು ಮತ್ತು ಭಕ್ತಾಧಿಗಳು ನೂರಾರು ಜನ ಗುಂಪು ಸೇರಿದಾಗ ಪರಿಸ್ಥಿತಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು.
ಭಕ್ತಾಧಿಗಳ ಮನವಿ: ಪುರಾಣ ಪ್ರಸಿದ್ಧ ಚೌಡೇಶ್ವರಿ ದೇವಾಲಯದ ಸುತ್ತಮುತ್ತಲಿರುವ ಹಳೇ ಕಾಲದ ಕಲ್ಲುಗಳನ್ನು ತೆಗೆಸಿ ಭಕ್ತಾಧಿಗಳಿಗೆ ಪೂಜೆ ಸಲ್ಲಿಸಲು ಹೋಗಿಬರದಂತೆ ಅಡ್ಡಲಾಗಿ ನಿರ್ಮಾಣಕ್ಕೆ ಚಪ್ಪಡಿಗಳನ್ನು ಹಾಕುತ್ತಿರುವುದರ ವಿರುದ್ಧ ಭಕ್ತಾಧಿಗಳು ತಿರುಗಿ ಬಿದ್ದರು. ದೇವಸ್ಥಾನಕ್ಕೆ ಹಾದುಹೋಗುವ ಏಕೈಕ ದಾರಿಯನ್ನು ಮುಚ್ಚಿದ್ದು, ಕಾನೂನು ಬಾಹಿರವಾಗಿರುತ್ತದೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸಾರ್ವಜನಿಕರ ಹಿತಾಸಕ್ತಿಯಿಂದ ದೇವಾಲಯಕ್ಕೆ ದಾರಿ ತೆರುವುಗೊಳಿಸಿ ಧಾರ್ಮಿಕ ಭಾವನೆಗಳಿಗೆ ದಕ್ಕೆ ಆಗದಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಸೂಕ್ತ ಬಂದೋಬಸ್ತ್: ದೇವಾಲಯ ವಿವಾದಕ್ಕೆ ಸಂಬಂಧಿಸಿ ಡಿವೈಎಸ್ಪಿ ಸಣ್ಣತಿಮ್ಮಪ್ಪ ಮಾರ್ಗದರ್ಶನದಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿಡ್ಲಘಟ್ಟ, ದಿಬ್ಬೂರಹಳ್ಳಿ, ಕೆಂಚಾರ್ಲಹಳ್ಳಿ, ಬಟ್ಲಹಳ್ಳಿ ಸೇರಿದಂತೆ ಠಾಣೆಗಳ ನೂರಾರು ಪೊಲೀಸರನ್ನು ದೇವಾಲಯದ ಸುತ್ತಲೂ ಬಂದೋಬಸ್ತ್ ಮಾಡಲಾಗಿದೆ.