ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಾಳೆ ಹಣಕಾಸು ಆಯೋಗದ ತಂಡ ಭೇಟಿ

Srinivasa Murthy VN
Updated On : 24 Oct 2013, 12:11 pm

ಚಿಕ್ಕಬಳ್ಳಾಪುರ: ಜಿಲ್ಲೆಗೆ 14 ನೇ ಹಣಕಾಸು ಆಯೋಗದ ತಂಡ ಅ.25 ರಂದು ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಹಣಕಾಸು ಆಯೋಗದ ತಂಡ ಬೆಳಗ್ಗೆ 9.30 ಕ್ಕೆ ತೋಟಗಾರಿಕೆ ಫಾರ್ಮ್,10 ಕ್ಕೆ ಎಸ್ಟಿಪಿ ಸೈಟ್, 10.30 ಕ್ಕೆ ಜಿಲ್ಲಾಡಳಿತ ಭವನ, 11.30 ಕ್ಕೆ ಚಾಮರಾಜ ಪೇಟೆಯ ವಾರ್ಡ್ ನಂ 30, ಅಂಬೇಡ್ಕರ್ ಭವನ,(ರೈಲ್ವೆ ಯೋಜನೆ ವಿಸ್ತೀರ್ಣ), ಮಧ್ಯಾಹ್ನ 12 ಕ್ಕೆ ಜಿಲ್ಲಾಸ್ಪತ್ರೆ, 12.30 ಕ್ಕೆ ಕಂದವಾರ ಕೆರೆ ವೀಕ್ಷಣೆ ಮತ್ತು ಮಧ್ಯಾಹ್ನ 1 ಗಂಟೆಗೆ ಮುದ್ದೇನಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ಕೌಟುಂಬಿಕ ಕಲಹ; ಆತ್ಮಹತ್ಯೆಗೆ ಯತ್ನ
ಚಿಕ್ಕಬಳ್ಳಾಪುರ:
ಕೌಟುಂಬಿಕ ಕಲಹದಿಂದ ಮಹಿಳೆಯೊಬ್ಬರು ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಪ್ರಶಾಂತ ನಗರದಲ್ಲಿ ಸಂಭವಿಸಿದೆ. ಗಾಯಾಳುವನ್ನು ಶಶಿಕಲಾ (26) ಎಂದು ಗುರುತಿಸಲಾಗಿದೆ. ಕೌಟುಂಬಿಕ ವಿಷಯಕ್ಕೆ ಸಂಬಂಧಪಟ್ಟಂತೆ ಆಗಾಗ ಮನೆಯಲ್ಲಿ ಜಗಳ ನಡೆಯುತ್ತಿದ್ದು ಇದರಿಂದ ಬೇಸತ್ತ ಮಹಿಳೆ ಬುಧವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳೀಯರು ಬೆಂಕಿ ನಂದಿಸಿ ಸ್ಥಳೀಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತೀವ್ರ ಸುಟ್ಟಗಾಯಗಳಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಗಾಯಾಳುವನ್ನು ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೊಬೈಲ್ ಕಳವು
ಕೆಜಿಎಫ್:
ದಾರಿ ಕೇಳುವ ನೆಪದಲ್ಲಿ ಮೂವರು ದುಷ್ಕರ್ಮಿಗಳು ವ್ಯಕ್ತಿಯಿಂದ ಬೆಲೆಬಾಳುವ ಮೊಬೈಲ್ ಫೋನ್ ಸುಲಿಗೆ ಮಾಡಿರುವ ಘಟನೆ ಬೆಮೆಲ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಮೆಲ್ ನಗರದ ಆಫಿಸರ್ಸ್ ಕ್ವಾರ್ಟಸ್ ನಿವಾಸಿ ಅರುಣ್‌ಕುಮಾರ್ ಎಂಬವರು ಮೆಡಿಕಲ್ ಸೆಂಟರ್ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಮೂವರು ಅಪರಿಚಿತರು ದಾರಿ ಕೇಳುವ ನೆಪದಲ್ಲಿ ಕತ್ತಿ ತೋರಿಸಿ ಬೆದರಿಸಿ ಮೊಬೈಲ್ ಫೋನ್ ಕಿತ್ತುಕತೊಂಡು ಪರಾರಿಯಾದ ಬಗ್ಗೆ ಅರುಣ್‌ಕುಮಾರ್ ಬೆಮೆಲ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಆಸ್ಪತ್ರೆ ಮೇಲ್ದರ್ಜೆಗೇರಿಸಲು ರು. 6.80 ಕೋಟಿ ಪ್ರಸ್ತಾವನೆ
ಬಂಗಾರಪೇಟೆ:
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿಸಲು ರು. 6.80 ಕೋಟಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಒಂದು ವರ್ಷದಲ್ಲಿ ಧರ್ಮಾಸ್ಪತ್ರೆ ಹೆಸರಿಗೆ ತಕ್ಕಂತೆ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಲಯನ್ಸ್ ಭವನದಲ್ಲಿ ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆಶ್ರಯದಲ್ಲಿ ನಡೆದ ಉಚಿತ ಹೃದಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಆರೋಗ್ಯಕ್ಕೆ ಎಲ್ಲರು ಒತ್ತು ಕೊಟ್ಟು ಜೀವನವನ್ನು ಅನುಭವಿಸಬೇಕು ಎಂದರು. ಒಕ್ಕೂಟದ ಮಾಜಿ ಅಧ್ಯಕ್ಷ ಜಯಸಿಂಹ ಕೃಷ್ಣಪ್ಪ ಮಾತನಾಡಿ, ಹಾಲು ಉತ್ಪಾದಕರ ಸಂಘಗಳ ಸದಸ್ಯರಿಗೆ ಅನುಕೂಲವಾಗಲೆಂದು ಶೀಘ್ರದಲ್ಲೇ ಆಂಧ್ರದ ವಿಶಾಪಟ್ಟಣಂನಲ್ಲಿರುವ ಮಾದರಿ ಆಸ್ಪತ್ರೆಯಂತೆ ಎರಡು ಜಿಲ್ಲೆಗಳ ಸದಸ್ಯರಿಗೆ ನೆರವಾಗುವ ಒಂದು ನೂರು ಕೋಟಿ ವೆಚ್ಚದ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದರು.ಪುರಸಭೆ ಮಾಜಿ ಅಧ್ಯಕ್ಷ ಕೆ. ಚಂದ್ರಾರೆಡ್ಡಿ ಮಾತನಾಡಿದರು.

ನಾಳೆ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಸಭೆ
ಕೋಲಾರ:
ನಗರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತಂತೆ ಕೋಲಾರ ಜಿಲ್ಲಾ ಕನ್ನಡ ಪರ ಸಂಘಟನೆಗಳ ಒಕ್ಕೂಟ ದಿಂದ ರೂಪುರೇಷಗಳ ಬಗ್ಗೆ ಚರ್ಚೆ ನಡೆಸಲು ಒಕ್ಕೂಟ ಅಧ್ಯಕ್ಷ ಅ.ಕ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ 25 ರಂದು ಬೆಳಿಗ್ಗೆ 10.30ಕ್ಕೆ  ಗಂಟೆಗೆ ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದೆ. ಕಳೆದ 19 ರಂದು ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಿರ್ಣಯಿಸಿದಂತೆ ಜಿಲ್ಲಾಡಳಿತ, ಭುವನೇಶ್ವರಿ ಕನ್ನಡ ಸಂಘ ಮತ್ತು ಕೋಲಾರ ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ನ.1 ರಂದು  ನಗರದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಕನ್ನಡಾಭಿಮಾನಿಗಳೂ ಸಭೆಯಲ್ಲಿ ಭಾಗವಹಿಸುವಂತೆ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಾವಿದ ವಿಷ್ಣು ಕೋರಿದ್ದಾರೆ.

'ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ಅವಶ್ಯ'
ಗುಡಿಬಂಡೆ:
ಇಂದಿನ ಯುವಜನತೆ ಕಂಪ್ಯೂಟರ್ ಶಿಕ್ಷಣ ಮತ್ತು ಅಂತರ್ಜಾಲದ ಬಳಕೆ ಕುರಿತು ಶಿಕ್ಷಿತರಾದಾಗ ಮಾತ್ರ ಹೆಚ್ಚಿನ ಪ್ರಗತಿ ಸಾಧಿಸಬಹುದೆಂದು ಕೋಲಾರದ ನೆಹರು ಯುವಕೇಂದ್ರದ ಜಿಲ್ಲಾ ಯುವಸಮನ್ವಯಾಧಿಕಾರಿ ಜಿ.ಇ.ನಾರಾಯಣಗೌಡ ಅಭಿಪ್ರಾಯಪಟ್ಟರು. ಪಟ್ಟಣದ ನ್ಯೂ ಪಬ್ಲಿಕ್ ಶಾಲೆಯಲ್ಲಿ ಕೋಲಾರದ ನೆಹರು ಯುವಕೇಂದ್ರ, ಸ್ಥಳೀಯ ರಾಷ್ಟ್ರಪಿತ ಯುವಜನ ಸೇವಾ ಸಂಘ ಹಾಗೂ ನ್ಯೂ ಪಬ್ಲಿಕ್ ಕಂಪ್ಯೂಟರ್ಸ್  ಸಹಯೋಗದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ ಮಹಿಳೆಯರಿಗೆ 3 ತಿಂಗಳ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿಗಳನ್ನಾಡಿದ ಅವರು, ಪ್ರತಿ ರಂಗದಲ್ಲೂ ಕಂಪ್ಯೂಟರ್ ಬಳಕೆ ಅಗತ್ಯವಿದೆ ಎಂದರು. ಬೆಂಗಳೂರಿನ ಪಾಪ್ಯೂಲೇಷನ್ ಆಫ್ ಇಂಡಿಯಾ ಪೌಂಡೇಷನ್ ದಾಖಲಾತಿ ಅಧಿಕಾರಿ ಕೆ.ಪಿ. ತಾರ ಜೊನ್ನಕುಟ್ಟ ಮಾತನಾಡಿ, ಗ್ರಾಮೀಣ ಮಹಿಳೆಯರು ಉದ್ಯೋಗಾಕಾಂಶಿಗಳಾಗಿ ಪಟ್ಟಣ ಮತ್ತು ನಗರ ಪ್ರದೇಶಗಳ ಕಂಪನಿಗಳಿಗೆ ಭೇಟಿ ನೀಡುತ್ತಿದ್ದು, ಅವರಿಗೆ ಕಂಪ್ಯೂಟರ್ ಶಿಕ್ಷಣ ಅಗತ್ಯವಿದೆ ಎಂದರು. ಪಿ.ಎನ್. ರಾಜಶೇಖರ್, ಡಿ.ಎಲ್. ಪರಿಮಳ, ಜಿ.ವಿ. ವಿಶ್ವನಾಥ್, ಬಿ.ಎಸ್. ರಘು, ಅರುಣ, ಎನ್. ಮಂಜುನಾಥ್, ಎನ್. ಗಣೇಶ್, ಕೆ.ಎನ್. ನಾರಾಯಣಸ್ವಾಮಿ ಇದ್ದರು.

ಬಾಲಕ ಅಪಹರಣ; ಪ್ರಕರಣ ದಾಖಲು
ಕೆಜಿಎಫ್:
ಮನೆಯ ಮುಂದೆ ಆಟವಾಡುತ್ತಿದ್ದ ಆರು ವರ್ಷದ ಬಾಲಕನನ್ನು ಅಪಹರಿಸಿರುವ ಘಟನೆ ಮಡಿವಾಳ ಗ್ರಾಮದಲ್ಲಿ ನಡೆದಿದೆ.
ಆಂಡ್ರಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಡಿವಾಳ ಗ್ರಾಮದ ನಿವಾಸಿ ರಘುರಾಮ್ ಎಂಬವರ  ಮಗ ಸಂದೀಪ್ ಎಂಬ 6 ವರ್ಷದ ಬಾಲಕನ್ನು ಅಪಹರಿಸಿರುವ ಬಗ್ಗೆ ದೂರು ದಾಖಲಾಗಿದೆ. ದುರುದ್ದೇಶದಿಂದ ಅದೇ ಗ್ರಾಮದ ಶಂಕರಪ್ಪ ಮತ್ತು ಶ್ರೀನಿವಾಸಪ್ಪ ಎಂಬವರು ಅಪಹರಿಸಿರುವುದಾಗಿ ರಘುರಾಮ್ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಪಹರಣ ಪ್ರಕರಣ ದೂರು ದಾಖಲಿಸಿಕೊಂಡ ಆಂಡ್ರಸನ್‌ಪೇಟೆ ಠಾಣಾ ಪೊಲೀಸರು ಬಾಲಕನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ತರಬೇತಿ
ಮುಳಬಾಗಲು:
ಮುಂಬರುವ 2014ರ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿಲ್ಲಿ ಮತಗಟ್ಟಿ ಅಧಿಕಾರಿಗಳಿಗೆ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು. ತರಬೇತಿಯಲ್ಲಿ ಭಾಗವಹಿಸಿದ್ದ ಕೋಲಾರ ಉಪವಿಭಾಗಧಿಕಾರಿ ಸಿ.ಎನ್. ಮಂಜುನಾಥ್ ಮತದಾರರ ಪಟ್ಟಿಯನ್ನು ಬೂತ್ ಮಟ್ಟದ ಅಧಿಕಾರಿಗಳು ಎಚ್ಚರದಿಂದ ತಯಾರಿಸಲು ಸೂಚಿಸಿದರು. ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪದೋಷಗಳು ಮತ್ತು ಆರೋಪಗಳಿಗೆ ಅಸ್ಪದವಿಲ್ಲದಂತೆ ತಯಾರಿಸಬೇಕು ಎಂದರು. ತಹಶೀಲ್ದಾರ್ ಡಿ.ವಿ. ರಾಮಮೂರ್ತಿ ಮಾತನಾಡಿ, ತಾಲೂಕಿನಲ್ಲಿ 269 ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಮತದಾರ ಪಟ್ಟಿ ಪರಿಷ್ಕರಣೆ ವೇಳೆ ತೆಗೆದುಕೊಳ್ಳಬಹುದಾದ ಕ್ರಮಗಳನ್ನು ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement