ಸಚಿವರಿಂದ ಒಳಾಂಗಣ ಕ್ರೀಡಾಂಗಣ ಪರಿಶೀಲನೆ
ಕೋಲಾರ: ನಗರದ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಕಿರಿಯ ಕಾಲೇಜಿನ ಪಕ್ಕದಲ್ಲಿರುವ ಒಳಾಂಗಣ ಕ್ರೀಡಾಂಗಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅ.22ರಂದು ಒಳಾಂಗಣ ಕ್ರೀಡಾಂಗಣದಲ್ಲಿ ನರೇಗಾ ಮೇಳ ನಡೆದಿತ್ತು. ಕ್ರೀಡಾಂಗಣ ಕಾಮಗಾರಿ ಶೇ.80ರಷ್ಟು ಮುಕ್ತಾಯವಾಗಿದ್ದರೂ ಬಾಕಿ ಕಾಮಗಾರಿಗಳಿಗೆ ಅನುದಾನ ಕೊರತೆಯಿಂದ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ನರೇಗಾ ಮೇಳದ ನೆಪದಲ್ಲಿ ಒಳಾಂಗಣ ಕ್ರೀಡಾಂಗಣದ ಬಾಗಿಲು ತೆರೆಯುವ ಅದೃಷ್ಟ ಸಿಕ್ಕಿರುವುದು ಕುರಿತು ಅ.22ರ ಕನ್ನಡಪ್ರಭದಲ್ಲಿ ವರದಿಯಾಗಿತ್ತು.
ಕೆಡಿಪಿ ಸಭೆಯಲ್ಲಿ ಭಾಗವಹಿಸಲು ಬುಧವಾರ ಕೋಲಾರಕ್ಕೆ ಆಗಮಿಸಿದ್ದ ಸಚಿವರಿಗೆ ಪತ್ರಕರ್ತರು ಒಳಾಂಗಣ ಕ್ರೀಡಾಂಗಣದ ಬಗ್ಗೆ ತಿಳಿಸಿದಾಗ, ಕೂಡಲೇ ಸ್ಥಳ ಪರಿಶೀಲನೆಗೆ ಒಪ್ಪಿದ ಸಚಿವರು ಕ್ರೀಡಾಂಗಣಕ್ಕೆ ಭೇಟಿ ನೀಡಿ ಜಿಪಂ ಉಪ ಕಾರ್ಯದರ್ಶಿ ಬದನೂರು ಮತ್ತು ಭೂಸೇನಾ ನಿಗಮದ ಸಿಬ್ಬಂದಿಯಿಂದ ಬಾಕಿ ಕಾಮಗಾರಿಗಳ ಮಾಹಿತಿ ಪಡೆದರು.
ಈಗಾಗಲೇ 1.20 ಕೋಟಿ ರು.ಖರ್ಚು ಮಾಡಲಾಗಿದೆ, ವಿದ್ಯುತ್, ಕಿಟಕಿಗಳು ಸೇರಿದಂತೆ ಇತರ ಕಾಮಗಾರಿಗಳಿಗೆ ಅಂದಾಜು ರು. 60 ಲಕ್ಷ ಬೇಕಾಗುತ್ತದೆ, ಟೆನ್ನಿಸ್, ಟೇಬಲ್ ಟೆನ್ನಿಸ್, ಬಾಲ್ ಬ್ಯಾಡ್ಮಿಟನ್ ಸೇರಿದಂತೆ ಇತರ ಒಳಾಂಗಣ ಆಟಗಳಿಗೆ ಸಿಂತಿಟಿಕ್ ಹಾಸು ಕಾಮಗಾರಿ ಆಗಬೇಕಾಗಿದೆ ಎಂದು ಭೂ ಸೇನಾ ಸಿಬ್ಬಂದಿ ಸಚಿವರಿಗೆ ಮಾಹಿತಿ ನೀಡಿದರು.
ಬಾಕಿ ಕಾಮಗಾರಿಗೆ ಬೇಕಾದ ಹಣಕ್ಕೆ ಸಂಬಂಧಿಸಿದಂತೆ ಈ ಮುಂಚೆ ಕ್ರೀಡಾ ಇಲಾಖೆಗೆ ಬರೆದಿರುವ ಪತ್ರಗಳ ಪ್ರತಿಗಳನ್ನು ಹಾಗೂ ಹೊಸದೊಂದು ಪ್ರಸ್ತಾಪನೆಯನ್ನು ನೀಡಿದಲ್ಲಿ ಮುಖ್ಯಮಂತ್ರಿಗಳು ಮತ್ತು ಕ್ರೀಡಾ ಸಚಿವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸುವುದಾಗಿ ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷ ಜಯದೇವ್ ಬೇಗನೆ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡಬೇಕೆಂದು ಮನವಿ ಮಾಡಿದರು. ನಗರಸಭೆ ಸದಸ್ಯ ಪ್ರಸಾದ್ ಬಾಬು ಇತರರು ಇದ್ದರು.