ಸೌಜನ್ಯಾ ಪ್ರಕರಣ; ತನಿಖೆಗೆ ಸಂಘಟನೆಗಳ ಒತ್ತಾಯ
ಕ.ಪ್ರ.ವಾರ್ತೆ ಕೋಲಾರ ಅ. 23
ಸೌಜನ್ಯ ಕೊಲೆ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ ಹಲವು ಪ್ರಗತಿಪರ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ಪ್ರಕರಣಕ್ಕೆ 1 ವರ್ಷ ಕಳೆದಿದೆ. ಇಲ್ಲಿವರೆಗೂ ಸಂಶಯಾಸ್ಪದ ವ್ಯಕ್ತಿಗಳನ್ನು ಹೆಸರಿಸಿ ದೂರು ನೀಡಿದ್ದರೂ ಅವರನ್ನು ಪ್ರಾಥಮಿಕ ವಿಚಾರಣೆಗೂ ಒಳಪಡಿಸಿಲ್ಲ. ಬದಲಿಗೆ ಈ ವ್ಯಕ್ತಿಯನ್ನೇ ಈ ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಗಳು ಹೆಚ್ಚಾದ ನಂತರ ಪ್ರಕರಣವನ್ನು ಸಿಓಡಿಗೆ ವಹಿಸಿದ್ದು, ನಿಷ್ಪಕ್ಷಪಾತ ತನಿಖೆ ನಡೆಸುವ ವಿಶ್ವಾಸವಿಲ್ಲವಾಗಿದೆ ಎಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿರುವ ಮನವಿಯಲ್ಲಿ ವಿವರಿಸಲಾಗಿದೆ.
ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ನಿರ್ದಿಷ್ಟ ಅವಧಿಯೊಳಗೆ ವರದಿ ನೀಡಬೇಕು. ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗುವಂತೆ ಪ್ರಕರಣ ದಾಖಲಾಗಬೇಕು. ಸಾಕ್ಷ್ಯಗಳನ್ನು ನಾಶ ಮಾಡಿ ಇಡೀ ಪ್ರಕರಣವನ್ನು ದಿಕ್ಕು ತಪ್ಪಿಸಲು ಹೊರಟ ಎಲ್ಲಾ ಹಂತದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಜಿ.ಅರ್ಜುನನ್, ಕದಸಂಸ ರಾಜ್ಯ ಮುಖಂಡರಾದ ಟಿ. ವಿಜಯಕುಮಾರ್, ಕರ್ನಾಟಕ ಸಮತಾ ಸೈನಿಕ ದಳದ ಮುಖಂಡರಾದ ಪಂಡಿತ್ ಮುನಿವೆಂಕಟಪ್ಪ, ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ. ಗೀತಾ, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ವಿ. ಸಂಪಂಗಿ, ಕಾರ್ಯದರ್ಶಿ ವಿಜಯಕೃಷ್ಣ, ಎಸ್.ಎಫ್.ಐ. ಜಿಲ್ಲಾಧ್ಯಕ್ಷ ಅಂಬರೀಷ್ ಮತ್ತಿತರರು ಇದ್ದರು.
ಚಿಕ್ಕಬಳ್ಳಾಪುರ ವರದಿ : ಸೌಜನ್ಯಾ ಸಾವಿನ ಪ್ರಕರಣವನ್ನು ಕೂಡಲೇ ಭೇದಿಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಕೊಡಿಸಬೇಕು. ಈ ಮೂಲಕ ಅಮಾಯಕ ಯುವತಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದರು. ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಜನವಾದಿ ಮಹಿಳಾ ಸಂಘಟನೆಯ ಮುಖಂಡರು ಸೌಜನ್ಯಳ ಸಾವಿಗೆ ಕಾರಣರಾದ ಆರೋಪಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಮಧುಲತಾ, ಬಿ.ಎನ್. ಮುನಿಕೃಷ್ಣಪ್ಪ ಉಪಸ್ಥಿತರಿದ್ದರು.