ಅಂತರ್ಜಲ ಕುರಿತು ವಿಚಾರ ಸಂಕಿರಣ
ಕ.ಪ್ರ.ವಾರ್ತೆ ಕೋಲಾರ ಅ. 25
ಕರ್ನಾಟಕ ಮಾಧ್ಯಮ ಅಕಾಡೆಮಿ 30ರ ಸಂಭ್ರಮದಲ್ಲಿ ವಾರ್ತಾ ಇಲಾಖೆ ಹಾಗೂ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಅ.28 ಮತ್ತು 29 ರಂದು ಕೋಲಾರದಲ್ಲಿ ಅಂತರ್ಜಲ ಸಂರಕ್ಷಣೆ-ಅಭಿವೃದ್ಧಿ ಬಗ್ಗೆ ಮಾಧ್ಯಮಗಳ ಪಾತ್ರ ಕುರಿತು ವಿಚಾರ ಸಂಕಿರಣ ಹಾಗೂ ಗ್ರಾಮೀಣ ಪತ್ರಕರ್ತರಿಗೆ ಆಧುನಿಕ ತಂತ್ರಜ್ಞಾನ ಬಳಕೆ ಕುರಿತು ತರಬೇತಿ ಶಿಬಿರವನ್ನು ಕೋಲಾರದಲ್ಲಿ ಹಮ್ಮಿಕೊಂಡಿದೆ.
ಅ.28ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ವಿಚಾರ ಸಂಕಿರಣವನ್ನು ಟಿ. ಚನ್ನಯ್ಯರಂಗಮಂದಿರದಲ್ಲಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ವಾರ್ತಾ ಮತ್ತು ಮೂಲಸೌಕರ್ಯ ಸಚಿವ ಸಂತೋಷ್ ಲಾಡ್, ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಶಿವಯೋಗಿಸ್ವಾವು ಹಾಗೂ ಜಿಲ್ಲೆಯ ಎಲ್ಲ ಶಾಸಕರು ಭಾಗವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಶಾಸಕ ವರ್ತೂರು ಪ್ರಕಾಶ್ ವಹಿಸಲಿದ್ದು, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ.ಪೊನ್ನಪ್ಪ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ಮೊದಲ ದಿನದ ವಿಚಾರ ಸಂಕಿರಣದಲ್ಲಿ ಅಂತರ್ಜಲ ಸಂರಕ್ಷಣೆ-ಅಭಿವೃದ್ಧಿ ಬಗ್ಗೆ ಮಾಧ್ಯಮಗಳ ಪಾತ್ರ ಕುರಿತ ಗೋಷ್ಠಿಯ ಅಧ್ಯಕ್ಷತೆಯನ್ನು ಕೋಲಾರ ಪತ್ರಿಕೆ ಸಂಪಾದಕ ಕೆ. ಪ್ರಹ್ಲಾದರಾವ್ ವಹಿಸಲಿದ್ದಾರೆ. ವಿಷಯ ಮಂಡನೆಯನ್ನು ಕನ್ನಡಪ್ರಭದ ಮುಖ್ಯ ವರದಿಗಾರ ಕೆ.ವಿ.ಪ್ರಭಾಕರ್, ಹಿರಿಯ ಪತ್ರಕರ್ತ ಮಂಜುನಾಥ ಅದ್ದೆ ಹಾಗೂ ಹೈಕೋರ್ಟ್ ವಕೀಲ ಎಂ. ಶಿವಪ್ರಕಾಶ್ ಮಾಡಲಿದ್ದಾರೆ.
ಮಧ್ಯಾಹ್ನ 2ನೇ ಗೋಷ್ಠಿಯ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್ ವಹಿಸಲಿದ್ದು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್, ಪತ್ರಕರ್ತ ಕೆರೆ ಮಂಜುನಾಥ್, ಕೆ. ನರಸಿಂಹಮೂರ್ತಿ, ಎಂ.ಜಿ. ಪ್ರಭಾಕರ್, ವಿಶ್ವಕುಂದಾಪುರ ವಿಷಯ ಮಂಡನೆ ಮಾಡಲಿದ್ದಾರೆ.
ಮಂಗಳವಾರ ಬೆಳಿಗ್ಗೆ 10ಗಂಟೆಗೆ ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಆಧುನಿಕ ತಂತ್ರಜ್ಞಾನ ಬಳಕೆ ಕುರಿತು ತರಬೇತಿ ಶಿಬಿರ ನಡೆಯಲಿದೆ. ಶಿಬಿರವನ್ನು ಮಾಜಿ ವಿಧಾನಸಭಾಧ್ಯಕ್ಷ ಹಾಗೂ ಶಾಸಕ ಕೆ.ಆರ್. ರಮೇಶ್ ಕುಮಾರ್ ಉದ್ಘಾಟಿಸಿ ಮಾಧ್ಯಮ ಮತ್ತು ರಾಜಕಾರಣ ಕುರಿತು ವಿಷಯ ಮಂಡಿಸಲಿದ್ದಾರೆ.
ಕರ್ನಾಟಕ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮಿಳಾ ನೇಸರ್ಗಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ರಾಮನಿವಾಸ್ ಸಪೆಟ್, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಎಂ. ಜುಲ್ಫಿಕಾರ್ ಉಲ್ಲಾ, ಹಿರಿಯ ಪತ್ರಕರ್ತ ಇ.ಎಸ್. ಸುಧೀಂದ್ರ ಪ್ರಸಾದ್, ಎಸ್.ಆರ್. ಆರಾಧ್ಯ ಮಾಧ್ಯಮಕ್ಕೆ ಸಂಬಂಧಪಟ್ಟ ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ. ಮಧ್ಯಾಹ್ನ 3ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರ ವಿತರಿಸಲಿದ್ದು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್ ಭಾಗವಹಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಪತ್ರಕರ್ತರು ಎರಡು ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾದ್ಯಮ ಅಕಾಡೆಮಿ ಕಾರ್ಯದರ್ಶಿ ಶಂಕರಪ್ಪ ಕೋರಿದ್ದಾರೆ. ಸೋಮವಾರ ರಂಗಮಂದಿರದಲ್ಲಿ ನಡೆಯುವ ವಿಚಾರಸಂಕಿರಣದಲ್ಲಿ ಪತ್ರಕರ್ತರ ಜತೆಗೆ ಅಂತರ್ಜಲ ಸಂರಕ್ಷಣೆ ವಿಚಾರದಲ್ಲಿ ಆಸಕ್ತರಾದವರು ಮತ್ತು ಸಂಘಟನೆಗಳವರು ಭಾಗವಹಿಸಬಹುದು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್ ಕೋರಿದ್ದಾರೆ.