ಒಗ್ಗಟ್ಟಿನ ರಾಜ್ಯೋತ್ಸವ ಆಚರಣೆಗೆ ಸಂಘಟನೆ ಕರೆ
ಕೋಲಾರ: ಈ ಬಾರಿಯ ನಾಡಹಬ್ಬವನ್ನು ಅರ್ಥಪೂರ್ಣವಾಗಿ ಹಾಗೂ ಒಗ್ಗಟ್ಟಿನಿಂದ ಆಚರಿಸಲು ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಒಕ್ಕೂಟದ ಅಧ್ಯಕ್ಷ ಅ.ಕೃ. ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಗತ ವೈಭವದಿಂದ ನಡೆಯುತ್ತಿದ್ದ ಕೋಲಾರ ಕನ್ನಡ ರಾಜ್ಯೋತ್ಸವ ಕೆಲವು ವರ್ಷಗಳಿಂದ ಕಾಟಾಚಾರಕ್ಕೆ ನಡೆಯುತ್ತಿದ್ದು ಜಿಲ್ಲೆಯಲ್ಲಿ ಮತ್ತೆ ಕನ್ನಡದ ವಾತಾವಣ ವೃದ್ಧಿಸಲು ಎಲ್ಲ ಕನ್ನಡಪರ ಸಂಘಟನೆಗಳು ಒಗ್ಗಟ್ಟಿನಿಂದ ಕಾರ್ಯಕ್ರಮ ನಡೆಸಬೇಕಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಲಾವಿದ ವಿಷ್ಣು ತಿಳಿಸಿದರು.
ಹಲವಾರು ದಶಕಗಳಿಂದ ನಾಡು ನುಡಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿರುವ ಹಿರಿಯ ಕನ್ನಡ ಹೋರಾಟಗಾರರನ್ನು ರಾಜ್ಯೋತ್ಸವ ಸಂದರ್ಭದಲ್ಲಿ ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಕನ್ನಡ ಕಾರ್ಯಕ್ರಮಕ್ಕೆ ಇಲ್ಲಿನ ಜಿಲ್ಲಾ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕೆಂದು ಕಲಾವಿದ ವಿಷ್ಣು ಕೋರಿದರು.
ಒಕ್ಕೂಟದ ಉಪಾಧ್ಯಕ್ಷ ಜಯದೇವ ಪ್ರಸನ್ನ ಮಾತನಾಡಿ, ಮುಂದಿನ 2014ರ ಕೋಲಾರದ ಕನ್ನಡ ರಾಜ್ಯೋತ್ಸವ ಆಚರಿಸುವ ಸಂಪೂರ್ಣ ಜವಾಬ್ದಾರಿಯನ್ನು ಕನ್ನಡಪರ ಸಂಘಟನೆಗಳ ಒಕ್ಕೂಟದ ಹೆಗಲಿಗೆ ನೀಡಬೇಕೆಂದು ಜಿಲ್ಲಾ ಆಡಳಿತವನ್ನು ಕೋರಿದರು.
ಕನ್ನಡಪಕ್ಷದ ಜಿಲ್ಲಾ ಪ್ರಧಾನಕಾರ್ಯದರ್ಶಿ ಕೋ.ನಾ. ಪ್ರಭಾಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಜ್ಯೋತ್ಸವ ಕಳೆಗುಂದುವಂತಾಗಿದೆ ಎಂದು ಆರೋಪಿಸಿದರು.
ಜಯಕರ್ನಾಟಕದ ತ್ಯಾಗರಾಜು, ಕೆಲವ್ಯಕ್ತಿಗಳು ತಮ್ಮ ಸ್ವಾರ್ಥಕ್ಕೆ ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಮತ್ತು ದಾನಿಗಳು ನೀಡುವ ಹಣ ಪೋಲಾಗುತ್ತಿದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ರಾಘವೇಂದ್ರ, ಗಡಿಭಾಗದಲ್ಲಿ ಕನ್ನಡಕ್ಕಾಗಿ ದುಡಿಯುವ ನಾವುಗಳು ಹೆಸರು ಮಾಡಲು ಬಂದಿಲ್ಲ, ಬದಲಿಗೆ ಇಲ್ಲಿನ ಕನ್ನಡಿಗರ ಹಿತಕ್ಕಾಗಿ ದುಡಿಯುತ್ತಿದ್ದೇವೆ. ನಿಜವಾದ ಅರ್ಥದಲ್ಲಿ ಕನ್ನಡ ರಾಜ್ಯೋತ್ಸವ ನಮ್ಮ ಸಂಘಟನೆಗಳಿಂದಲೇ ಆಚರಿಸುವುದು ಸಂಪ್ರದಾಯ ಎಂದರು.
ಮುಳಬಾಗಿಲಿನ ಕನ್ನಡ ಸೇನೆಯ ಕನ್ನಡ ಮಿತ್ರ ವೆಂಕಟಪ್ಪ, ಕರ್ನಾಟಕ ರಕ್ಷಣಾ ಸಮಿತಿಯ ಎಂ.ಆರ್. ಚೇತನ್ ಬಾಬು, ಕರ್ನಾಟಕ ರಕ್ಷಣಾ ವೇದಿಕೆ ಪರಮೇಶ್ವರ್ ಮತ್ತು ಪರ್ವೀಜ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ರಾ. ರಾಂಪ್ರಸಾದ್, ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರಾದ ಅಬ್ಬಣಿ ಶಿವಪ್ಪ, ಗಾಯಕ ಜನಘಟ್ಟ ಕೃಷ್ಣಮೂರ್ತಿ, ರಾಜಣ್ಣ, ಮಹಮದ್ ಅಲಿ, ವಕೀಲ ಮಾಗೇರಿ ಎಂ.ಪಿ. ನಾರಾಯಣಸ್ವಾಮಿ, ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾ. ಮಂಜುನಾಥ್ ಇದ್ದರು.