ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸುಸಜ್ಜಿತ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಕ್ರಮ

Srinivasa Murthy VN
Updated On : 26 Oct 2013, 12:08 pm

-ಪಾ. ಶ್ರೀ. ಅನಂತರಾಮ್
ಶತಮಾನ ದಾಟಿರುವ ಹಾಗೂ ಶಿಥಲಗೊಂಡಿರುವ ಜಿಲ್ಲಾಧಿಕಾರಿಗಳ ಕಚೇರಿಯನ್ನು ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-4ರ ಮುಳಬಾಗಿಲು ರಸ್ತೆಗೆ ಒಳಪಟ್ಟಿರುವ ಟಮಕ ಪ್ರದೇಶಕ್ಕೆ ಸ್ಥಳಾಂತರ ಮಾಡಲು ನಿರ್ಧರಿಸಿರುವ ಸರ್ಕಾರ ಸುಸಜ್ಜಿತ ಜಿಲ್ಲಾ ಭವನ ನಿರ್ಮಾಣ ಮೂಲಕ ಜನತೆಗೆ ಉತ್ತಮ ಆಡಳಿತ ನೀಡಲು ಮುಂದಾಗಿದೆ.
ಪ್ರಸ್ತುತ ಜಿಲ್ಲಾಧಿಕಾರಿಗಳ ಕಚೇರಿ 1867ರಲ್ಲಿ ನಿರ್ಮಾಣವಾಗಿದ್ದು ಹಳೆಯ ಕಾಲದ ತಂತ್ರಜ್ಞಾನ ಅಳವಡಿಸಿ ಕಟ್ಟಡ ನಿರ್ಮಾಣ ಮಾಡಿರುವುದರಿಂದ ದುರಸ್ತಿ ಕಾಮಗಾರಿಗಳು ಫಲಪ್ರದವಾಗುತ್ತಿಲ್ಲ. ಜೊತೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲೇ ಪ್ರಮುಖ 15 ಇಲಾಖೆಗಳು ಕಾರ್ಯನಿರ್ವಹಿಸಬೇಕಾಗಿದ್ದು, ಸ್ಥಳಾವಕಾಶವಿಲ್ಲದೆ ಜನತೆಯ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಸರ್ಕಾರ ಸುಸಜ್ಜಿತ ಜಿಲ್ಲಾ ಆಡಳಿತ ಭವನ ನಿರ್ಮಾಣಕ್ಕೆ ಕ್ರಮ ಕೈಗೊಂಡಿದೆ.
ಜಿಲ್ಲೆಯ ಎಲ್ಲಾ ಶಾಸಕರ ಸಮ್ಮತಿಯ ಮೇರೆಗೆ ಜಿಲ್ಲಾ ಆಡಳಿತ ಟಮಕ ಪ್ರದೇಶದಲ್ಲಿ 8 ಎಕರೆ ಭೂಮಿ ಗುರುತಿಸಿ ಅಲ್ಲಿ ಜಿಲ್ಲಾ ಆಡಳಿತ ಭವನ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಿ ಸರ್ಕಾರದಿಂದ ಯೋಜನೆ ಅನುಷ್ಠಾನಕ್ಕೆ ಅನುಮತಿ ಪಡೆದಿದೆ.
ಬೆಂಗಳೂರು ವಿಧಾನಸೌಧ ಮಾದರಿಯಲ್ಲಿ ಭವ್ಯವಾದ ಹಾಗೂ ಎಲ್ಲಾ ಇಲಾಖೆಗಳು ಒಂದೆಡೆ ಕೆಲಸ ಮಾಡುವ ರೀತಿಯಲ್ಲಿ ಏಕ ಗಾವಕ್ಷಿ ಯೋಜನೆ ಸಿದ್ಧಪಡಿಸಲಾಗಿದ್ದು, ಲೋಕೋಪಯೋಗಿ ಇಲಾಖೆಯ ಎಂಜನಿಯರ್ಗಳು ನಕ್ಷೆಗೆ ಅನುಮೋದನೆ ಪಡೆಯಲು ಕಡತಗಳನ್ನು ಸಂಬಂಧಪಟ್ಟ ಸಚಿವಾಲಯಕ್ಕೆ ಸಲ್ಲಿಸಿದ್ದಾರೆ.
ಹಾಲಿ ಜಿಲ್ಲಾಧಿಕಾರಿಗಳ ಕಚೇರಿಯನ್ನು ಟಮಕಕ್ಕೆ ಸ್ಥಳಾಂತರ ಮಾಡುವುದಕ್ಕೆ ನಿರ್ಧರಿಸಿರುವುದರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸರ್ಕಾರ, ಜಿಲ್ಲಾಧಿಕಾರಿಗಳ ಕಚೇರಿ ಇರುವುದು ಕೇವಲ ಕೋಲಾರಕ್ಕೆ ಮಾತ್ರವಲ್ಲ, ಇಡೀ ಜಿಲ್ಲೆಯ ಜನತೆಯ ಅನುಕೂಲಕ್ಕಾಗಿ, ಭವಿಷ್ಯದ ದೃಷ್ಟಿಯಿಂದ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಜಿಲ್ಲಾ ಆಡಳಿತ ಭವನ ನಿರ್ಮಿಸಲು ಉದ್ದೇಶಿಸಿರುವುದರಿಂದ ಯಾವುದೇ ಸಂಶಯ, ಗೊಂದಲ,ವಿವಾದಗಳಿಗೆ ಅವಕಾಶವಾಗದಂತೆ ಯೋಜನೆ ಅನುಷ್ಠಾನಕ್ಕೆ ಪ್ರತಿಯೊಬ್ಬರು ಸಹಕಾರ ನೀಡುವಂತೆ ಮನವಿ ಮಾಡಿದೆ.
ಶತಮಾನ ದಾಟಿರುವ ಪುರಾತನ ಕಟ್ಟಡವನ್ನು ನೆಲಸಮ ಮಾಡಿ ಹೊಸದಾಗಿ ಕಟ್ಟಡ ನಿರ್ಮಿಸಲು ಪುರಾತತ್ವ ಇಲಾಖೆ ಒಪ್ಪುತ್ತಿಲ್ಲ. ಇದನ್ನು ಸ್ಮಾರಕವಾಗಿ ಉಳಿಸಲು ಸೂಚಿಸಿದೆ. ಇದರಿಂದಾಗಿ ಹೊಸ ಕಟ್ಟಡ ನಿರ್ಮಾಣ ಅನಿವಾರ್ಯವಾಗಿದೆ. ಹಾಲಿ ಜಿಲ್ಲಾಧಿಕಾರಿಗಳ ಪ್ರಾಂಗಣದಲ್ಲಿ ಭವ್ಯವಾದ ಜಿಲ್ಲಾ ಭವನ ನಿರ್ಮಾಣಕ್ಕೆ ಬೇಕಾದ 8 ಎಕರೆ ಜಾಗ ಲಭ್ಯವಿಲ್ಲ. ಜೊತೆಗೆ ತೋಟಗಾರಿಕೆ ಇಲಾಖೆಗೆ ಸೇರಿದ ನರ್ಸರಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯೂ ಒಪ್ಪುತ್ತಿಲ್ಲ. ಹಸಿರು ವಲಯದಲ್ಲಿ ಕಾಂಕ್ರಿಟ್ ಕಟ್ಟಡಗಳ ನಿರ್ಮಾಣ ಸೂಕ್ತವಲ್ಲವೆಂದು ತಿಳಿಸಿರುವುದರಿಂದ ಟಮಕದಲ್ಲಿನ 8 ಎಕರೆ ಸರ್ಕಾರಿ ಜಾಗದಲ್ಲಿ ಜಿಲ್ಲಾ ಭವನ ನಿರ್ಮಾಣಕ್ಕೆ ಮುಂದಾಗಿದ್ದು, ಜನತೆಗೆ ಅನಾನುಕೂಲ ಮಾಡುವ ಉದ್ದೇಶ ಹೊಂದಿಲ್ಲವೆಂದು ಸ್ಪಷ್ಟಪಡಿಸಿದೆ.
ಸೌಕರ್ಯಗಳು ಏನು?: 8 ಎಕರೆ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಜಿಲ್ಲಾ ಭವನದಲ್ಲಿ ಎಲ್ಲಾ ಇಲಾಖೆಗಳು ಒಟ್ಟಿಗೆ ಕೆಲಸ ಮಾಡುವ ರೀತಿಯಲ್ಲಿ ಸಂಕೀರ್ಣ ನಿರ್ಮಾಣ.
- ಸದರಿ ಪ್ರದೇಶದ ವ್ಯಾಪ್ತಿಯಲ್ಲಿನ 15 ಎಕರೆ ಪ್ರದೇಶದಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸುವುದು.
- ಅಧಿಕಾರಿಗಳು,ಸಿಬ್ಬಂದಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನಗರ ಸಾರಿಗೆ ಬಸ್ಸಿನ ವ್ಯವಸ್ಥೆ ಹಾಗೂ ಪ್ರಯಾಣಿಕರ ತಂಗುದಾಣ ನಿರ್ಮಾಣ.
- ಸಾರ್ವಜನಿಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಸುಂದರವಾದ ಉದ್ಯಾನವನ, ಜನಪರ ಹೋರಾಟಗಳಿಗಾಗಿ ವೇದಿಕೆ ಹಾಗೂ ಇನ್ನಿತರ ಮೂಲ ಸೌಕರ್ಯಗಳ ಮೂಲಕ ಸೇವಾ ಸೌಲಭ್ಯ ಹೆಚ್ಚಿಸಲು ಯೋಜನೆ ಸಿದ್ಧಪಡಿಸಲಾಗಿದೆ.
ರು. 25 ಕೋಟಿ  ಕ್ರಿಯಾ ಯೋಜನೆ: ಜಿಲ್ಲಾ ಭವನ ನಿರ್ಮಾಣಕ್ಕೆ ಜಿಲ್ಲಾ ಆಡಳಿತದಿಂದ ಈ ಮುಂಚೆ ರು. 48 ಕೋಟಿ ಗಳ ಪ್ರಸ್ತಾವನೆಯನ್ನು ಕಳುಹಿಸಲಾಗಿತ್ತು. ಆದರೆ.ಬೇರೆ ಜಿಲ್ಲೆಗಳಿಗೆ ರು. 20ರಿಂದ ರು. 25 ಕೋಟಿ ಬಿಡುಗಡೆ ಮಾಡಿರುವುದರಿಂದ ನೂತನ ಜಿಲ್ಲಾ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ರು. 25 ಕೋಟಿ ಬಿಡುಗಡೆ ಮಾಡಿದ್ದು, ಈ ಅನುದಾನಕ್ಕೆ ಅನುಗುಣವಾಗಿ ಯೋಜನೆ ಸಿದ್ಧಪಡಿಸಲಾಗಿದೆ.
ನಗರದ ಜನತೆಗೆ ಸಾರಿಗೆ ವ್ಯವಸ್ಥೆಯನ್ನು ಉನ್ನತಿಕರಿಸಿಕೊಡುವ ಉದ್ದೇಶದಿಂದ 19 ಕಿಮೀ ವ್ಯಾಪ್ತಿಯ ವರ್ತುಲ ರಸ್ತೆ ನಿರ್ಮಾಣಕ್ಕೂ ಸಿದ್ಧತೆ ನಡೆಯುತ್ತಿದೆ.
ಟಮಕ ಪ್ರದೇಶಕ್ಕೆ ಜಿಲ್ಲಾ ಭವನ ಸ್ಥಳಾಂತರವಾಗುವುದರಿಂದ ನಗರ ಪ್ರದೇಶದ ಜನತೆಗೆ ಕೊಂಚ ತೊಂದರೆ ಆಗುತ್ತದೆ. ಆದರೆ, ಜಿಲ್ಲೆಯ ವಿವಿಧ ಭಾಗದ ಜನತೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಕೋಲಾರದ ಮುಂದಿನ ಬೆಳವಣಿಗೆ, ಅಭಿವೃದ್ಧಿಗಾಗಿ ಮಾತ್ರವೇ ಯೋಜನೆ ಕೈಗೆತ್ತಿಕೊಂಡಿದ್ದು, ಈ ಯೋಜನೆಯ ಅನುಷ್ಠಾನ ವಿಚಾರದಲ್ಲಿ ಯಾವುದೇ ಲಾಬಿ ಅಥವಾ ಭೂಮಾಫಿಯಾಗಳ ಮರ್ಜಿಗೆ ಒಳಗಾಗಿಲ್ಲ ಹಾಗೂ ಇದರ ಅವಶ್ಯಕತೆಯೂ ಇಲ್ಲವೆಂದು ಮೂಲಗಳು ಸ್ಪಷ್ಟಪಡಿಸಿದೆ.
ಮುಂದಿನ ತಿಂಗಳಲ್ಲಿ ಟೆಂಡರ್: ಹೊಸ ಜಿಲ್ಲಾ ಆಡಳಿತ ಭವನ ನಿರ್ಮಾಣಕ್ಕೆ ಮುಂದಿನ ತಿಂಗಳು ಟೆಂಡರ್ ಕರೆಯಲು ನಿರ್ಧರಿಸಿರುವ ಜಿಲ್ಲಾ ಆಡಳಿತ ನಿಗದಿತ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವುದಕ್ಕೂ ಸಕಲ ಸಿದ್ಧತೆ ನಡೆಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement