ನ.1 ರಿಂದ ಶಾಲಾ ಮಕ್ಕಳಿಗೆ ಗೋದಿ ಭಾಗ್ಯ
ಕೋಲಾರ: ಕಳೆದ ಜನವರಿ 26ರಂದು ಗಣ ರಾಜ್ಯೋತ್ಸವ ದಿನ ಶಾಲಾ ಮಕ್ಕಳಿಗೆ ಜಾರಿಗೆ ತಂದ ರಾಗಿ ಮುದ್ದೆ ಭಾಗ್ಯವನ್ನು ಹಿಂಪಡೆದಿರುವ ಸರ್ಕಾರ ನ.1ರಿಂದ ಗೋದಿ ಆಹಾರ ನೀಡಲು ನಿರ್ಧರಿಸಿದೆ. ಈ ಸಂಬಂಧವಾಗಿ ಈಗಾಗಲೇ ಜಿಪಂಗೆ ಸಂಬಂಧಪಟ್ಟ ಇಲಾಖೆಯಿಂದ ಸುತ್ತೂಲೆ ಬಂದಿದ್ದು ಗೋದಿ ಆಹಾರ ನೀಡಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಸಾಮಾನ್ಯವಾಗಿ ಪ್ರತಿ ಹಳ್ಳಿಗಳಲ್ಲಿಯೂ ಮಕ್ಕಳಿಗೆ ಅವರ ಮನೆಯಲ್ಲಿ ರಾಗಿ ಮುದ್ದೆ ಸಿಗುತ್ತದೆ. ಇದರಿಂದ ಮಕ್ಕಳು ಮುದ್ದೆಯನ್ನು ತಿನ್ನುತ್ತಿರಲಿಲ್ಲ. ಆ ಕಾರಣ ರಾಗಿ ಮುದ್ದೆ ಯೋಜನೆಯನ್ನು ಸರ್ಕಾರ ಕೈ ಬಿಟ್ಟು ಗೋದಿ ಉಪ್ಪಿಟ್ಟು, ರೋಟಿ ವಿತರಿಸಲು ಮುಂದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜುಲ್ಫಿಖಾರ್ ಉಲ್ಲಾ 'ಕನ್ನಡಪ್ರಭ'ಕ್ಕೆ ತಿಳಿಸಿದರು. ಜಿಲ್ಲೆಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಹಾರ ಇಲಾಖೆಯಿಂದ ಗೋದಿಯನ್ನು ಪಡೆದು ಯೋಜನೆ ಅನುಷ್ಠಾನಕ್ಕೆ ತರಲಾಗುತ್ತದೆ. ಈ ಸಂಬಂಧ ಕ್ರಿಯಾ ಯೋಜನೆಯನ್ನು ತುರ್ತಾಗಿ ಸಿದ್ಧಪಡಿಸಲಾಗುವುದು. ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ, ಶಿಕ್ಷಣಾಧಿಕಾರಿಗಳು, ಬಿಇಒಗಳು, ಅಕ್ಷರ ದಾಸೋಹ ಅಧಿಕಾರಿಗಳು, ಆಹಾರ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಗೋದಿ ಆಹಾರ ವಿತರಣೆಗೆ ಕಾರ್ಯಕ್ರಮ ರೂಪಿಸುವುದಾಗಿ ಹೇಳಿದರು.