ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗ್ರಾಮಸಭೆಗೆ ಅಧಿಕಾರಿಗಳು ಹಾಜರಾಗುತ್ತಿಲ್ಲ

Srinivasa Murthy VN
Updated On : 2 Sept 2013, 12:29 pm

ಕನ್ನಡಪ್ರಭ ವಾರ್ತೆಕೆಜಿಎಫ್‌ಸೆ.1
ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸಭೆ ಏರ್ಪಡಿಸಿದ್ದರೂ ಸಂಬಂಧಪಟ್ಟ ಇಲಾಖೆಯ ಪ್ರಮುಖ ಅಧಿಕಾರಿಗಳ ಗೈರು ಹಾಜರಿಯಿಂದ ಯಾವುದೇ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕಿ ವೈ.ರಾಮಕ್ಕ ಅಸಮಾಧಾನ ವ್ಯಕ್ತಪಡಿಸಿದರು.
ಕೆಜಿಎಫ್ ಕ್ಷೇತ್ರದ ಬೇತಮಂಗಲ ಹೋಬಳಿ ಗುಟ್ಟಹಳ್ಳಿ ಹುಲ್ಕೂರು ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಮಾಜಿ ಶಾಸಕ ವೈ.ಸಂಪಂಗಿ ಪ್ರತಿ 15 ದಿನಗಳಿಗೊಮ್ಮೆ ಗ್ರಾಮಸಭೆ ಆಯೋಜಿಸಿ ಗ್ರಾಮಸ್ಥರ ವಿವಿಧ ಸಮಸ್ಯೆಗಳಿಗೆ ಸ್ಪಂಧಿಸಿ ಅವರ ಬೇಡಿಕೆ ಈಡೇರಿಸುವ ಕೆಲಸವನ್ನು ಅಧಿಕಾರಿಗಳಿಂದ ಮಾಡುತ್ತಿದ್ದರು.
ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೆಜಿಎಫ್ ಕ್ಷೇತ್ರದ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಏರ್ಪಡಿಸುವ ಸಭೆಗಳಿಗೆ ಇಲಾಖೆಯ ಅಧಿಕಾರಿಗಳು ಗೈರು ಹಾಜರಿಯಿಂದ ತಮ್ಮ ಮನಸ್ಸಿಗೆ ನೋವು ತಂದಿದೆ ಎಂದರು.
ಸಭೆಗೆ ಮುಖ್ಯವಾಗಿ ಹಾಜರಾಗಬೇಕಾದ ತಾಲೂಕು ಕಾರ್ಯನಿರ್ವಹಣಾಧಿಕಾರಿ ಪ್ರತಿ ಗ್ರಾಮಸಭೆಗೆ ಬರುತ್ತಿಲ್ಲ. ತಾವು ಬಿಜೆಪಿ ಶಾಸಕರಾದ ಕಾರಣ ಕೆಲ ಕಾಂಗ್ರೆಸ್ ಮುಖಂಡರು ಪ್ರಮುಖರು ಅಧಿಕಾರಿಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಅದೇ ರೀತಿ ಇದೀಗ ಬಸವ ಖಾತ್ರಿ ಯೋಜನೆಯಡಿ ಮಂಜೂರಾದ 34 ಮನೆಗಳನ್ನು ಯಾವುದೇ ಪಕ್ಷ ಭೇದವಿಲ್ಲದೆ ಮತ್ತು ವ್ಯಕ್ತಿಯನ್ನು ನೋಡದೆ ಸಮಾನವಾಗಿ ಹಂಚುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿದರು. ಗ್ರಾಮಸಭೆಗೆ ಆಗಮಿಸದ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮೀಣ ಪ್ರದೇಶದಲ್ಲಿ ರೈತರು, ಗ್ರಾಮಸ್ಥರಿಗೆ ವಿವಿಧ ರೀತಿಯ ಸಮಸ್ಯೆಗಳಿದ್ದರೂ ಅವರ ಕುಂದುಕೊರತೆ ಗಮನಕ್ಕೆ ಪಡೆದು ಅಗತ್ಯ ಕ್ರಮ ಜರುಗಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರಲ್ಲದೆ ಕೂಡಲೇ ಕಾರ್ಯನಿರ್ವಹಣಾಧಿಕಾರಿ ಸಭೆಗೆ ಹಾಜರಾಗಬೇಕು ಎಂದು ಪಟ್ಟುಹಿಡಿದರು.
ಮಧ್ಯಪ್ರವೇಶಿಸಿದ ಪ್ರಭಾರಿ ಇಒ, ಅಧಿಕಾರಿ ಅವರು ಬೇರೆ ಸಭೆಗೆ ಹೋಗಿದ್ದು, ಮುಂದಿನ ಸಭೆಗೆ ಹಾಜರಾಗುತ್ತಾರೆ ಎಂದು ತಿಳಿಸಿದ ನಂತರ ಸುಮ್ಮನಾದರು. ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್, ರೈತರಿಗೆ ವಿತರಿಸುವ ಗೊಬ್ಬರ ನಕಲಿಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು ಮತ್ತು ಯಾವುದೇ ಗೊಬ್ಬರ ಮಾರಾಟ ಕೇಂದ್ರಗಳಲ್ಲಿ ನಿಗದಿತ ಬೆಲೆಗಳ ನಾಮಫಲಕ ಹಾಕುತ್ತಿಲ್ಲ ಮತ್ತು ರೈತರು ಖರೀದಿಸುವ ಗೊಬ್ಬರಕ್ಕೆ ರಸೀದಿ ನೀಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿದ್ಯುತ್, ಮೂಲ ಸೌಲಭ್ಯಗಳು, ಕುಡಿಯುವ ನೀರು ಮನೆಗಳ ಮಂಜೂರು ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಮಾಜಿ ಶಾಸಕ ವೈ.ಸಂಪಂಗಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆ.ಮು. ಲಕ್ಷ್ಮೀನಾರಾಯಣ, ಹುಲ್ಕೂರು ಗ್ರಾಪಂ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ನಿರ್ಮಲ, ನೋಡಲ್ ಅಧಿಕಾರಿ ಸಿ.ಕೆ.ಜಯರಾಜ್, ಪಿಡಿಒ ಅನಂತರೆಡ್ಡಿ, ಸದಸ್ಯರಾದ ಸುಬ್ರಮಣಿ, ಮುಖಂಡರಾದ ವೆಂಕಟೇಶಪ್ಪ, ಮುನಿಸ್ವಾಮಿರೆಡ್ಡಿ, ನಾರಾಯಣಸ್ವಾಮಿ, ಗಂಗಿರೆಡ್ಡಿ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement