ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚುನಾವಣೆ ತಂತ್ರ: ಜೆಡಿಎಸ್ ಒಗ್ಗಟ್ಟಿನ ಮಂತ್ರ

Srinivasa Murthy VN
Updated On : 2 Sept 2013, 12:31 pm

ಕನ್ನಡಪ್ರಭವಾರ್ತೆಕೋಲಾರ ಸೆ.1
ಕೋಲಾರ ನಗರಸಭೆಯ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡ, ಮಾಜಿ ಸಚಿವ ಕೆ. ಶ್ರೀನಿವಾಸಗೌಡರು ತಮ್ಮ ಪಕ್ಷದಿಂದ ಆಯ್ಕೆಯಾಗಿರುವ ಸದಸ್ಯರೊಂದಿಗೆ ಮಹತ್ವದ ಮಾತುಕತೆ ನಡೆಸಿ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.
ಶನಿವಾರ ತಮ್ಮ ನಿವಾಸಕ್ಕೆ ಜೆಡಿಎಸ್‌ನಿಂದ ಗೆದ್ದಿರುವ 17 ಹಾಗೂ ಸಿಪಿಐಎಂನ ಒಬ್ಬರು ಸೇರಿದಂತೆ ಒಟ್ಟು 18 ಸದಸ್ಯರನ್ನು ಕರೆಸಿಕೊಂಡು ಏನೇ ಒತ್ತಡ, ಅಮಿಷಗಳು ಎದುರಾದರೂ ಒಗ್ಗಟ್ಟಿನಿಂದ ಇದ್ದು ನಗರಸಭೆಯಲ್ಲಿ ಜೆಡಿಎಸ್ ಬಾವುಟ ಹಾರಿಸಲು ಸಜ್ಜಾಗುವಂತೆ ತಿಳಿಸಿದ್ದಾರೆ.
ಜೆಡಿಎಸ್‌ನಿಂದ ಆಯ್ಕೆಯಾಗಿರುವ 17 ಸದಸ್ಯರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಐದಾರು ಮಂದಿ ಆಕಾಂಕ್ಷಿಗಳು ಇರುವುದು ತಮ್ಮ ಗಮನಕ್ಕೆ ಬಂದಿದೆ. ಪ್ರತಿಯೊಬ್ಬರಿಗೂ ಅಧಿಕಾರ ಬೇಕೆಂಬ ಆಸೆ ಇರುವುದು ಸಹಜ. ತ್ಯಾಗ ಮನೋಭಾವನೆ, ಕೊಟ್ಟು ತೆಗೆದುಕೊಳ್ಳುವ ಗುಣ ಇಲ್ಲದಿದ್ದರೆ ಅಧಿಕಾರ ವಿರೋಧಿಗಳ ಪಾಲಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದ್ದಾರೆ.
ಒಗ್ಗಟ್ಟಿನ ಮಂತ್ರ: 2008ರ ವಿಧಾನಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ನಂಬಿ ಸೋಲಬೇಕಾಯಿತು. 2013ರ ಚುನಾವಣೆಯಲ್ಲಿ ಸೋಲು ನಿರೀಕ್ಷೆ ಮಾಡಿರಲಿಲ್ಲ. ನಗರದಲ್ಲಿ ನನಗೆ ಹೆಚ್ಚು ಮತ ಸಿಕ್ಕಿದೆ. ನಿಮ್ಮ ಗೆಲವಿನಲ್ಲೂ ಸಾಕಷ್ಟು ಶ್ರಮ ವಹಿಸಿದ್ದೇನೆ. ನಗರದ ಜನತೆಗೆ ಏನಾದರೂ ಒಳ್ಳೆಯದು ಆಗಬೇಕಾದರೆ ನೀವು ಒಗ್ಗಟ್ಟಿನಿಂದ ಕೆಲಸ ಮಾಡಿದಲ್ಲಿ ಮಾತ್ರ ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಶ್ರೀನಿವಾಸಗೌಡರು ತಮ್ಮ ನಿವಾಸಕ್ಕೆ ಬಂದಿದ್ದ 18 ಸದಸ್ಯರಿಗೆ ಹಿತೋಪದ್ದೇಶ ನೀಡಿದ್ದಾರೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಒಂದು ಕಡೆ ಕುಳಿತು ಒಮ್ಮತಕ್ಕೆ ಬನ್ನಿ, ನಾನು ಮಧ್ಯ ಪ್ರವೇಶ ಮಾಡುವುದಿಲ್ಲ. ಕೋಲಾರ ನಗರದ ಅಭಿವೃದ್ಧಿ, ಪಕ್ಷದ ಸಂಘಟನೆಯ ದೃಷ್ಟಿಯಿಂದ ಒಗ್ಗಟ್ಟು ಕಾಪಾಡಿ, ಪಕ್ಷದ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಯಾರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸುತ್ತಾರೋ ಅದಕ್ಕೆ ಬೆಂಬಲ ಸೂಚಿಸುವ ಮೂಲಕ ಕುಮಾರಸ್ವಾಮಿ ನಾಯಕತ್ವಕ್ಕೆ ಬಲ ತುಂಬಿ ಎಂದು ಸಲಹೆ ನೀಡಿದ್ದಾರೆ.
ರಾಜಧಾನಿಗೆ ಆಹ್ವಾನ: ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ದಿನಾಂಕ ಇನ್ನು ನಿಗದಿಯಾಗಿಲ್ಲ. ಚುನಾವಣೆ ಯಾವಾಗ ನಡೆದರೂ ವ್ಯತ್ಯಾಸ ಆಗದಂತೆ ಎಲ್ಲ ಸದಸ್ಯರು ಐಕ್ಯತೆ ಕಾಪಾಡಿ. ನೀವೇ ಒಂದು ದಿನ ನಿಗದಿ ಮಾಡಿ ಎಲ್ಲ 18 ಸದಸ್ಯರು ಬೆಂಗಳೂರಿಗೆ ಬಂದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಸುತ್ತೇನೆಂದು ತಿಳಿಸಿದ್ದಾರೆ.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಹಿರಿಯ ಸದಸ್ಯ ರವೀಂದ್ರ, ಮುರಳಿಗೌಡ,ಅಪ್ರೋಜ್ ಪಾಷ, ಹೊಸದಾಗಿ ಆಯ್ಕೆಯಾಗಿರುವ ಮುಬಾಕರ್, ಸುಕುಮಾರ್ ಹಾಗೂ ಸಿಪಿಐಎಂನ ಗಾಂಧಿನಗರ ನಾರಾಯಣಸ್ವಾಮಿ ಅವರ ಜೊತೆ ಶ್ರೀನಿವಾಸಗೌಡರು ಪ್ರತ್ಯೇಕವಾಗಿ ಮಾತನಾಡಿ, ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುವಂತೆ ಸೂಚಿಸಿ, ಶೀಘ್ರವೇ ಮತ್ತೊಂದು ಸಭೆ ಕರೆಯುವುದಾಗಿ ತಿಳಿಸಿದ್ದಾರೆ.

ಜೆಡಿಎಸ್‌ನಿಂದ ಆಯ್ಕೆಯಾಗಿರುವ 17 ಸದಸ್ಯರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಐದಾರು ಮಂದಿ ಆಕಾಂಕ್ಷಿಗಳು ಇರುವುದು ತಮ್ಮ ಗಮನಕ್ಕೆ ಬಂದಿದೆ. ಪ್ರತಿಯೊಬ್ಬರಿಗೂ ಅಧಿಕಾರ ಬೇಕೆಂಬ ಆಸೆ ಇರುವುದು ಸಹಜ. ತ್ಯಾಗ ಮನೋಭಾವನೆ, ಕೊಟ್ಟು ತೆಗೆದುಕೊಳ್ಳುವ ಗುಣ ಇಲ್ಲದಿದ್ದರೆ ಅಧಿಕಾರ ವಿರೋಧಿಗಳ ಪಾಲಾಗುತ್ತದೆ
-ಕೆ. ಶ್ರೀನಿವಾಸಗೌಡ, ಮಾಜಿ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement