ಜಿಪಂ ಗಾದಿಗೆ ದಳ, ಕೈ ತೀವ್ರ ಕಸರತ್ತು
ಕ.ಪ್ರ.ವಾರ್ತೆ ಕೋಲಾರ ಸೆ.1
ಇಲ್ಲಿನ ಜಿಲ್ಲಾ ಪಂಚಾಯಿತಿಯ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗಾಗಿ ಸೆ.6 ರಂದು ಚುನಾವಣೆ ನಡೆಯಲಿರುವುದರಿಂದ ಜೆಡಿಎಸ್ ಮತ್ತು ಕಾಂಗ್ರೆಸ್ನಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ.
ಜೆಡಿಎಸ್ನ 13 ಸದಸ್ಯರನ್ನು ಪಕ್ಷಾಂತರದ ಭಯದಿಂದ ಈಗಾಗಲೇ ಪ್ರವಾಸಕ್ಕೆ ಕಳುಹಿಸಲಾಗಿದೆ. ಇವರೊಂದಿಗೆ ಬಿಜೆಪಿಯ ಮೂವರು ಸದಸ್ಯರು ಇದ್ದಾರೆನ್ನಲಾಗಿದೆ.
ಹೇಗಾದರೂ ಮಾಡಿ ಜಿ.ಪಂ.ನಲ್ಲಿ ಮತ್ತೆ ಜೆಡಿಎಸ್ ಬಾವುಟ ಹಾರಿಸಬೇಕೆಂಬ ಆಸೆಯಿಂದ ಜೆಡಿಎಸ್ ಮುಖಂಡರು ತಮ್ಮ ಸದಸ್ಯರನ್ನು ಪ್ರವಾಸದ ನೆಪದಲ್ಲಿ ತಡೆದಿಟ್ಟುಕೊಳ್ಳುವುದಕ್ಕೆ ಹರ ಸಾಹಸ ಮಾಡುತ್ತಿದ್ದಾರೆ.
ಈಗ ಪ್ರವಾಸದಲ್ಲಿರುವ ಎಲ್ಲ 16 ಸದಸ್ಯರು ಸೆ.6ರಂದು ನಡೆಯಲಿರುವ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದಲ್ಲಿ ಅಧಿಕಾರ ಹಿಡಿಯುವುದು ಸುಲಭ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಹಾಗೂ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸ್ಥಾನ ಉಳಿಸಿಬೇಕಾಗಿರುವುದರಿಂದ ಜಿಲ್ಲಾ ಕಾಂಗ್ರೆಸ್ ಮುಖಂಡರು ಕೋಲಾರ ಜಿ.ಪಂ ಹಿಡಿತಕ್ಕೆ ತೆಗೆದುಕೊಳ್ಳುವುದಕ್ಕೆ ನಿಗೂಢ ಭೇಟಿ ಆರಂಭಿಸಿದ್ದಾರೆ.
ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರಾದ ರಮೇಶ್ ಕುಮಾರ್, ಕೆ.ಎಂ. ನಾರಾಯಣಸ್ವಾಮಿ, ಸಹ ಸದಸ್ಯ ಕೊತ್ತೂರು ಮಂಜುನಾಥ್, ವಿಧಾನಪರಿಷತ್ ಸದಸ್ಯ ನಜೀರ್ ಅಹಮ್ಮದ್, ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ಕುಮಾರ್ ಹಾಗೂ ಇನ್ನಿತರ ಮುಖಂಡರೊಂದಿಗೆ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಶನಿವಾರ ಸಮಾಲೋಚನೆ ನಡೆಸಿ ಕಾಂಗ್ರೆಸ್ನಿಂದ ಗೆದ್ದಿರುವ 5ಸದಸ್ಯರನ್ನು ನೆಚ್ಚಿಕೊಂಡು ಅಧಿಕಾರ ಹಿಡಿಯಲು ಕಷ್ಟ. ಬಿಜೆಪಿಯ ಕೆಲ ಸದಸ್ಯರು ಜೆಡಿಎಸ್ ಜೊತೆ ಹೋಗಿದ್ದಾರೆ, ಮಾಲೂರು ಮಾಜಿ ಶಾಸಕ ಕೃಷ್ಣಯ್ಯಶೆಟ್ಟಿ ಜೊತೆ ಗುರುತಿಸಿಕೊಂಡಿರುವ ಸದಸ್ಯರು, ಪಕ್ಷೇತರರು ಕಾಂಗ್ರೆಸ್ಸಿಗೆ ಬೆಂಬಲ ನೀಡಿದರೂ ಇನ್ನು 7ಸದಸ್ಯರ ಕೊರತೆ ಇರುವುದರಿಂದ ಬಹುಮತಕ್ಕಾಗಿ ಪರಿಣಾಮಕಾರಿಯಾಗಿ ಬೇಟೆ ನಡೆಸಬೇಕಾಗಿದ್ದು ನಮ್ಮ ಶಾಸಕರು ಈ ಕಾರ್ಯದಲ್ಲಿ ಯಶಸ್ವಿಯಾದಲ್ಲಿ ಮಾತ್ರ ಅಧಿಕಾರ ಹಿಡಿಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಅಮರನಾಥ್ ಆಗಮನ ಆನೆ ಬಲ: ಶಾಸಕ ವರ್ತೂರ್ ಪ್ರಕಾಶ್ ಬಣದ ಪ್ರಭಾವಿ ಸದಸ್ಯ ಅಮರನಾಥ್ ನಮ್ಮ ಕಡೆ ಬಂದಿರುವುದು ಆನೆ ಬಲ ಬಂದಾಂತಾಗಿದೆ, ಕಾಂಗ್ರೆಸ್ ಸರ್ಕಾರದಿಂದ ನಮ್ಮ ಕ್ಷೇತ್ರಗಳಿಗೆ ಅನುಕೂಲವಾಗುತ್ತದೆ ಎಂಬ ನಂಬಿಕೆಯಿಟ್ಟು ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಬೆಂಬಲ ನೀಡಿದಲ್ಲಿ ಒಪ್ಪಿಕೊಳ್ಳುವುದು ಅನಿವಾರ್ಯ, ವಿರೋಧ ಪಕ್ಷದ ಸದಸ್ಯರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಲು ಸೂಕ್ತರನ್ನು ರಾಯಭಾರಿಗಳನ್ನಾಗಿ ಕಳುಹಿಸುವ ಬಗ್ಗೆಯೂ ಕೆ.ಹೆಚ್. ಮುನಿಯಪ್ಪ ಶಾಸಕರೊಂದಿಗೆ ಚರ್ಚಿಸಿದ್ದಾರೆನ್ನಲಾಗಿದೆ.
ಕಳೆದ ಸಾರಿ ನಮ್ಮ ಪಕ್ಷದಿಂದ ಅಧ್ಯಕ್ಷರಾಗುವ ಅವಕಾಶವಿತ್ತು. ಆದರೆ ಪಕ್ಷೇತರ ಸದಸ್ಯ ಎಂ.ಎಸ್.ಆನಂದ್ ಹಾಗೂ ಚೌಡೇಶ್ವರಿ ಜೆಡಿಎಸ್ಗೆ ಬೆಂಬಲ ನೀಡಿದರು. ಈ ಬಾರಿಯೂ ಅದೇ ರೀತಿ ಆದರೆ ಅಧಿಕಾರ ಹಿಡಿಯುವುದು ಕಷ್ಟವಾಗುತ್ತದೆ. ಶ್ರೀನಿವಾಸಪುರ ತಾಲೂಕಿನ ತೂಪಲ್ಲಿ ನಾರಾಯಣಸ್ವಾಮಿ ಮತ್ತು ವೇಮಗಲಲ್ನ ಆಶಾ ಲೋಕೇಶ್ ನಡುವೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಎದುರಾಗಿದೆ. ಜೆಡಿಎಸ್ ಮುಖಂಡರಿಗೆ ಇವರಿಬ್ಬರಲ್ಲಿ ಒಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡುವುದು ಕಗ್ಗಂಟಾಗಿದೆ. ತೂಪಲ್ಲಿ ನಾರಾಯಣಸ್ವಾಮಿ ಅವರನ್ನು ಯಾವುದೇ ಕಾರಣಕ್ಕೂ ಅಧ್ಯಕ್ಷರನ್ನಾಗಿ ಮಾಡಬಾರದೆಂದು ಎರಡು ಬಾರಿ ಅವಕಾಶ ತಪ್ಪಿಸಿದ್ದ ಮಾಜಿ ಶಾಸಕ, ಜೆಡಿಎಸ್ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ ಶಾಸಕ ರಮೇಶ್ಕುಮಾರ್ ಮೇಲಿನ ಕೋಪದಿಂದಾಗಿ ಈ ಬಾರಿ ತೂಪಲ್ಲಿ ನಾರಾಯಣಸ್ವಾಮಿ ಪರವಾಗಿ ಬ್ಯಾಂಟಿಗ್ ಆರಂಭಿಸಿರುವುದರಿಂದ ನಮಗೆ ಬೇಕಾದ ಬಹುಮತಕ್ಕಾಗಿ ಎಚ್ಚರಿಕೆಯಿಂದ ಕಾರ್ಯಾಚರಣೆ ಮಾಡುವ ಬಗ್ಗೆ ಅಭಿಪ್ರಾಯ ಸಂಗ್ರಹಣೆ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.
ಮಾಜಿ ಶಾಸಕ ಶ್ರೀನಿವಾಸಗೌಡರಿಗೆ ವೇಮಗಲ್ನ ಆಶಾ ಲೋಕೇಶ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಆಸೆಯಿದ್ದು ಪಕ್ಷದ ವರಿಷ್ಠರ ಬಳಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆಂದು ಹೇಳಲಾಗಿದೆ.
ಒಂದು ವೇಳೆ ಆಶಾ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ಜೆಡಿಎಸ್ ವರಿಷ್ಠರು ಒಪ್ಪದಿದ್ದರೆ ಕೋಲಾರ ತಾಲೂಕಿನ ಜೆಡಿಎಸ್ ಸದಸ್ಯರಲ್ಲಿ ಕೆಲವರು ತೂಪಲ್ಲಿ ನಾರಾಯಣಸ್ವಾಮಿ ವಿರುದ್ಧ ಮತ ಹಾಕಲು ನಿರ್ಧರಿಸಿದ್ದಾರೆಂಬ ಮಾಹಿತಿ ಸಿಕ್ಕಿರುವುದರಿಂದ ಜೆಡಿಎಸ್ ಮುಖಂಡರು ಹಾಲಿ ಕೇರಳದ ಪ್ರವಾಸದಲ್ಲಿರುವ ಜೆಡಿಎಸ್ ಸದಸ್ಯರಲ್ಲಿ ಒಡಕು ಬಾರದಂತೆ ಎಚ್ಚರಿಕೆ ವಹಿಸಿದ್ದಾರೆಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಸಭೆ: ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪನವರು ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ರಾಜಕೀಯ ನಡೆಯನ್ನು ಗಂಭೀರವಾಗಿ ಗಮನಿಸುತ್ತಿದ್ದು ಸೆ.2 ಇಲ್ಲವೇ 3 ರಂದು ಬೆಂಗಳೂರಿನಲ್ಲಿ ಜಿಲ್ಲಾ ಮುಖಂಡರ ಸಭೆ ಕರೆದು ಅಂತಿಮ ತೀರ್ಮಾನಕ್ಕೆ ಬರಲಿರುವುದರಿಂದ ಯಾರಿಗೆ ಜಿ.ಪಂ ಅಧ್ಯಕ್ಷ ಸ್ಥಾನ ಒಲಿಯುತ್ತದೆ ಎಂಬುದು ಕುತೂಹಲಕ್ಕೆಡೆ ಮಾಡಿದೆ.