'ತೈಲ ಬೆಲೆ ಹೆಚ್ಚಳದಿಂದ ಆರ್ಥಿಕ ದುಷ್ಪರಿಣಾಮ'
ಬಾಗೇಪಲ್ಲಿ: ವಿಶ್ವದಾದ್ಯಂತ ಹೆಚ್ಚುತ್ತಿರುವ ಕಚ್ಚಾ ತೈಲದ ಬೇಡಿಕೆಯಿಂದ ತೈಲ ಬೆಲೆಗಳು ಸತತವಾಗಿ ಹೆಚ್ಚುತ್ತಿವೆ. ಇದರಿಂದ ರಾಷ್ಟ್ರದ ಆರ್ಥಿಕ ವ್ಯವಸ್ಥೆ ಮೇಲೆ ವ್ಯತಿರಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಬಿ. ಪಿ.ಹನುಮಂತರಾಯಪ್ಪ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ವಿಕಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಚಿಂತಾಮಣಿ ರೇಷ್ಮೆ ಕೃಷಿ ಮಹಾ ವಿದ್ಯಾಲಯ, ಜಿಲ್ಲಾ ಜೈವಿಕ ಇಂಧನ ಉಸ್ತುವಾರಿ ಸಮಿತಿ, ಶಿಡ್ಲಘಟ್ಟ ಲೀಡ್ ಸ್ವಯಂ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರಕ್ಕೆ ಅಗತ್ಯವಿರುವ ಶೇ.85ರಷ್ಟು ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಂಡು ಉಪಯೋಗಿಸುತ್ತಿದ್ದೇವೆ. ಮಿತಿ ಮೀರಿದ ಬಳಕೆಯಿಂದ ದಿನದಿಂದ ದಿನಕ್ಕೆ ಕಚ್ಚಾ ತೈಲಸಂಪನ್ಮೂಲ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅತಿಯಾದ ಪೆಟ್ರೋಲಿಯಂ ಬಳಕೆಯಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿರುವ ಪರಿಣಾಮ, ತಾಪಮಾನ ವೈಪರೀತ್ಯ ಕಾಡುತ್ತಿರುವುದರಿಂದ ಬದಲಿ ಇಂಧನ ಮೂಲಗಳ ಬಳಕೆಗೆ ಪ್ರಾಮುಖ್ಯ ಒದಗಿಸಿದೆ. ಕಚ್ಚಾ ತೈಲದ ಬಳಕೆಯನ್ನು ಹತೋಟಿಯಲ್ಲಿರಿಸಬಲ್ಲ ಸಾಮರ್ಥ್ಯ ಕಚ್ಚಾ ತೈಲದ ಪರ್ಯಾಯ ಸ್ವರೂಪದಂತಿರುವ ಜೈವಿಕ ಇಂಧನಕ್ಕಿದೆ ಎಂದರು.
ವೈಜ್ಞಾನಿಕ ಸಹಾಯಕ ಕೆ.ಸಿ.ವೆಂಕಟೇಶ್ ಮಾತನಾಡಿ, ನಮ್ಮ ಪರಿಸರದಲ್ಲಿ ಹಾಸು ಹೊಕ್ಕಾಗಿರುವ ಸಸ್ಯಗಳಾದ ಹೊಂಗೆ, ಬೇವು, ಹಿಪ್ಪೆ, ಜತ್ರೋಫಾ, ಸಿಮರೂಬ, ನಾಗಸಂಪಿಗೆ, ಸುರಹೊನ್ನೆ ಮೊದಲಾದವುಗಳಿಂದ ಬರುವ ಎಣ್ಣೆಯನ್ನು ಬಳಸಿ ಜೈವಿಕ ಡೀಸೆಲನ್ನು ಉತ್ಪಾದನೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ತಮ್ಮ ಮನೆಗಳ ಮುಂದೆ ಹಾಗೂ ಗ್ರಾಮೀಣ ಭಾಗಗಳಲ್ಲಿ ಮರಗಿಡಗಳನ್ನು ಹೆಚ್ಚಿಗೆ ಬೆಳೆಸಿ ಪರಿಸರ ಉಳಿಸಬೇಕೆಂದು ಕಿವಿಮಾತು ಹೇಳಿದರು. ಎಸಿಎಫ್ ಅಬ್ದುಲ್ ಖದ್ದೂಸ್, ವಲಯ ಅರಣಾಧಿಕಾರಿ ಟಿ.ವರದಪ್ಪ, ವಿಕಾಸ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪಿ.ಎನ್. ಶಿವಣ್ಣ, ಉಪನ್ಯಾಸಕ ವೈ.ಲ್.ಬೈಯಪ್ಪರೆಡ್ಡಿ ಹಾಗೂ ಎಂ.ಎ. ಸೌಮ್ಯ, ವಿ. ವೆಂಕಟಸ್ವಾಮಿ, ಟಿ.ಎನ್.ರವಿ ಉಪಸ್ಥಿತರಿದ್ದರು.