ಆದಿಮದಲ್ಲಿಂದು ಅಹೋರಾತ್ರಿ ಕವಿಗೋಷ್ಠಿ
ಕೋಲಾರ: ಕಳೆದ ಏಳೂವರೆ ವರ್ಷಗಳಿಂದ ತಾಲೂಕಿನ ತೇರಹಳ್ಳಿ ಬೆಟ್ಟದ ಶಿವಗಂಗೆಯ ಜಿಂಕೆ ರಾಮಯ್ಯ ಜೀವತಾಣದಲ್ಲಿ ದೇಸೀ ಸಂಸ್ಕೃತಿಯ ಉಳಿವಿಗಾಗಿ ಮತ್ತು ಜನತೆಯಲ್ಲಿ ಅರಿವು ಮೂಡಿಸಲು ಸಾಂಸ್ಕೃತಿಕ ಯಜ್ಞವನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿರುವ ಆದಿಮ ಸಾಂಸ್ಕೃತಿಕ ಕೇಂದ್ರ ಸೆ.19 ರಂದು 89ನೇ ಹುಣ್ಣಿಮೆ ಹಾಡಿನ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ನಡೆಸಲು ಸಿದ್ಧತೆ ನಡೆದಿದೆ.
ಪ್ರತಿ ತಿಂಗಳ ಹುಣ್ಣಿಮೆಯ ದಿನ ಏನೇ ಸಮಸ್ಯೆ ಎದುರಾದರೂ ಹುಣ್ಣಿಮೆ ಹಾಡಿನ ಕಾರ್ಯಕ್ರಮವನ್ನು ತಪ್ಪಿಸದೆ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಹೆಗ್ಗಳಿಕೆಯನ್ನು ಆದಿಮ ಸಂಸ್ಥೆ ಹೊಂದಿರುವುದಲ್ಲದೆ, ಪ್ರತಿ ತಿಂಗಳು ವೈವಿಧ್ಯತೆಯಿಂದ ಕೂಡಿದ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕೇವಲ ಜಿಲ್ಲೆ, ರಾಜ್ಯ ಅಥವಾ ಭಾರತದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಆದಿಮ ಸಂಸ್ಥೆಯು ಕೀರ್ತಿ ಸಂಪಾದಿಸಿದೆ.
ತೇರಹಳ್ಳಿ ಬೆಟ್ಟ ಶತಶಂೃಗ ಪರ್ವತಗಳ ಸಾಲಿನಲ್ಲಿರುವ ಒಂದು ಸುಂದರ ತಾಣವಾಗಿದ್ದು ಇಲ್ಲಿ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಕೋಟಗಾನಹಳ್ಳಿ ರಾಮಯ್ಯ ಹಾಗೂ ಸಂಗಡಿಗರ ಪರಿಶ್ರಮದಿಂದಾಗಿ ಕಳೆದ ಏಳೂವರೆ ವರ್ಷದಿಂದ ನೂರಾರು ಹೊಸ ಪ್ರತಿಭೆಗಳು ಅರಳುವಂತಾಗಿದೆಯಲ್ಲದೆ, ನಾಡಿಗೆ ಮತ್ತು ವಿಶ್ವಕ್ಕೆ ತನ್ನದೇ ಆದ ಸಾಂಸ್ಕೃತಿಕ ಕೊಡುಗೆ ನೀಡುವಲ್ಲಿ ಸಫಲತೆಯನ್ನು ಕಂಡಿದೆ. ಮಕ್ಕಳ ನಾಟಕ, ಸಾಹಿತ್ಯ ಕಮ್ಮಟ, ಕವಿಗೋಷ್ಠಿ, ರಂಗ ಕಲಾವಿದರ ಪರಿಚಯ, ಹೊಸ ನಾಟಕಗಳ ಪ್ರಯೋಗ, ಮಕ್ಕಳ ಬೇಸಿಗೆ ಶಿಬಿರ, ಸಂವಾದ, ಅಧ್ಯಯನ, ಸಾಂಸ್ಕೃತಿಕ ಸಂಶೋಧನೆ, ಸಂಗೀತ ಹೀಗೇ ಹತ್ತಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಆದಿಮ ಸಂಸ್ಥೆಯು ದೊಡ್ಡ ಆಲದ ಮರವಾಗಿ ಬೆಳೆಯುತ್ತಿದೆ. ಕೆಲವು ತಿಂಗಳ ಹಿಂದೆ ಕೋಟಗಾನಹಳ್ಳಿ ರಾಮಯ್ಯನವರು ಆರ್ಥಿಕ ಮತ್ತು ಸಂಘಟನೆಯ ಸಮಸ್ಯೆಯಿಂದಾಗಿ ಆದಿಮ ಸಂಸ್ಥೆಯ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದಾದ ಮಕ್ಕಳ ಬೇಸಿಗೆ ಶಿಬಿರ ಹಾಗೂ ರಂಗಭೂಮಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾಗ ಜಿಲ್ಲೆಯ ಅನೇಕ ಕಲಾಸಕ್ತರು, ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರಲ್ಲದೆ, ಯಾವುದೇ ಕಾರಣಕ್ಕೂ ಆದಿಮ ಸಂಸ್ಥೆಗೆ ಧಕ್ಕೆ ಆಗಬಾರದೆಂದು ಅನೇಕರು ತಮ್ಮ ಸ್ವಂತ ಹಣದಿಂದ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಉಂಟು.ಆದಿಮ ಕಾರ್ಯಕ್ರಮಕ್ಕೆ ಹವಾನಿಯಂತ್ರಣ ಬದುಕಿಗೆ ಮಾರು ಹೋಗಿರುವವರು ಬರುವುದು ಕಡಿಮೆ, ಈ ತಾಣಕ್ಕೆ ಬರುವವರೆಲ್ಲಾ ಬಹುತೇಕರು ಆಸಿವಿನ ಬಗ್ಗೆ ಅರಿವು ಇರುವವರು, ಬಡತನದಿಂದ ನೊಂದವರು, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಉಳಿವಿಗಾಗಿ ಹಂಬಲಿಸುವವರು ಎಂದರೆ ಅತಿಶಯೋಕ್ತಿ ಆಗಲಾದರು.
ಕೋಟಗಾನಹಳ್ಳಿ ರಾಮಯ್ಯನವರು ಈ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿರುವ ಅಪರೂಪದ ಋಷಿ. ಇವರ ಜೊತೆಗೆ ಗೋವಿಂದಪ್ಪ, ಡಾ. ಶಿವಪ್ಪ, ಕಲಾವಿದ ರಾಜಪ್ಪ ಸೇರಿದಂತೆ ಅನೇಕರು ಕೈಜೋಡಿಸಿರುವುದರಿಂದ ಆದಿಮ ಸಂಸ್ಥೆಯು ಏನೇ ಅಡೆ-ತಡೆಗಳು ಎದುರಾದರೂ ಅಲುಗಾಡದೆ ಭದ್ರವಾಗಿ ಉಳಿದಿದೆ. 89ನೇ ಹುಣ್ಣಿಮೆ ಹಾಡಿನ ಕಾರ್ಯಕ್ರಮವನ್ನು ಈ ಬಾರಿ ಪರಿಸರ ಪ್ರೇಮಿ, ಕವಿ ದಿವಂಗತ ಹೆಚ್.ಎನ್. ಸೋಮಶೇಖರ ಗೌಡ ನೆನಪಿನಲ್ಲಿ ವಿಶಿಷ್ಠ ರೀತಿಯಲ್ಲಿ ನಡೆಸಲಾಗುತ್ತಿದೆ. ಸೆ.19ರಂದು ಶುಕ್ರವಾರ ರಾತ್ರಿ 7 ಗಂಟೆಗೆ ಜಿಂಕೆ ರಾಮಯ್ಯ ಜೀವತಾಣದಲ್ಲಿ ಅಹೋರಾತ್ರಿ ಕವಿಗೋಷ್ಠಿ, ಅಜೀವಕ ಗುರುಕುಲದ ರಂಗ ವಿದ್ಯಾರ್ಥಿಗಳಿಂದ ಕಿನ್ನೊರಿ ನುಡಿದೋ ನೃತ್ಯರೂಪಕ ಹಾಗೂ ಹೆಚ್.ಎಸ್. ಶಿವಪ್ರಸಾದ್ ಅವರ ಸಿಂಗಿರಾಜನ ಸಂಪಾದನೆ ಎಂಬ ಏಕವ್ಯಕ್ತಿ ಪ್ರದರ್ಶನ ಹಾಗೂ ಹಾಡುಗಾರಿಕೆಯನ್ನು ಏರ್ಪಡಿಸಲಾಗಿದೆ. ಅಹೋರಾತ್ರಿ ಕವಿಗೋಷ್ಠಿಯಲ್ಲಿ ನಾಡಿನ ಅನೇಕ ಕವಿಗಳು ಕವಿತೆ ವಾಚಿಸಲಿದ್ದಾರೆ. ಕಾರ್ಯಕ್ರಮಕ್ಕೆ ಹೋಗಿ ಬರುವುದಕ್ಕೆ ಸೆ.19ರ ಸಂಜೆ 6.30ಕ್ಕೆ ಕೋಲಾರ ಸರ್ಕಾರಿ ಬಸ್ನಿಲ್ದಾಣದಿಂದ ಬಸ್ಸಿನ ವ್ಯವಸ್ಥೆಯು ಉಂಟು ಎಂದು ಗುರುವಾರ ಸುದ್ದಿಗಾರರಿಗೆ ಕೋಟಗಾನಹಳ್ಳಿ ರಾಮಯ್ಯ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಲೇಖಕ ಡಾ.ಶಿವಪ್ಪ ಇದ್ದರು.