ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೊಲೆ ಆರೋಪಿ ಸಂತೋಷ್‌ಕುಮಾರ್ ಬಂಧನ

Srinivasa Murthy VN
Updated On : 19 Sept 2013, 12:30 pm

ಕೋಲಾರ: ಕಳೆದ ಜುಲೈ ತಿಂಗಳ 10 ರಂದು ಕೋಲಾರ ನಗರದಲ್ಲಿ ಹೆಂಡತಿ ವೀಣಾ ಮತ್ತು ಮಗಳು ದೀಪ್ತಿಯ ಸಾವಿನ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸಂತೋಷ್‌ಕುಮಾರ್‌ನನ್ನು ಕೋಲಾರ ಪೊಲೀಸರು ಪಾಂಡಿಚೇರಿಯಲ್ಲಿ ಬಂಧಿಸಲಾಗಿದೆ ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ. ಸಂತೋಷ್‌ಕುಮಾರ್ ಬಂಧನಕ್ಕೆ ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಗಳು ಕಳೆದ ಒಂದು ತಿಂಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದರು. ಡಿಸಿ, ಎಸ್ಪಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಂಧನಕ್ಕಾಗಿ ಕಾರ್ಯತಂತ್ರ ರೂಪಿಸಿದ್ದರಲ್ಲದೆ, ಆರೋಪಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಚಿಂತನೆ ನಡೆಸಿದ್ದರು. ಆರೋಪಿಯು ಕಡೆಗೂ ಸಿಕ್ಕಿರುವುದರಿಂದ ಮೃತ ವೀಣಾ ಹಾಗೂ ದೀಪ್ತಿಯ ಕಡೆಯವರು ಮಾತ್ರವಲ್ಲದೆ, ಪ್ರತಿಭಟನಾಕಾರರು ಸಹ ಹರ್ಷ ವ್ಯಕ್ತಪಡಿಸಿದ್ದಾರೆ. ಬಂಧಿತ ಆರೋಪಿಯನ್ನು ಪಾಂಡಿಚೇರಿಯಿಂದ ಕೋಲಾರಕ್ಕೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶಾಶ್ವತ ನೀರಾವರಿಗೆ ಶೀಘ್ರ ಸಮಾವೇಶ
ಶ್ರೀನಿವಾಸಪುರ: ಭೀಕರ ಬರಗಾಲ ಎದುರಿಸುತ್ತಿರುವ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸಿಕೊಂಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಮುಂದಿನ ತಿಂಗಳು ಶ್ರೀನಿವಾಸಪುರ ತಾಲೂಕು ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗುವುದೆಂದು ಸಮಿತಿ ಜಿಲ್ಲಾ ಉಪಾಧ್ಯಕ್ಷ ಸಿ.ವಿ. ಪ್ರಭಾಕರಗೌಡ ತಿಳಿಸಿದರು.
ಸುದ್ದಿಗಾರೊಂದಿಗೆ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಪ್ರಣಾಳಿಕೆಗಳಲ್ಲಿ ಕೋಲಾರ ಹಾಗೂ ಇನ್ನು ಇತರೆ ಬಯಲುಸೀಮೆ ಪ್ರದೇಶಗಳಿಗೆ ಶಾಶ್ವತ ನೀರಾವರಿ ಕಲ್ಪಿಸಿಕೊಡುತ್ತೇವೆ ಎಂದು ಹೇಳುತ್ತಾರೆ. ನಂತರ ಶಾಶ್ವತ ನೀರಾವರಿಯ ಬಗ್ಗೆ ಚಕಾರ ಎತ್ತದ ಮೈಮರೆತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.  ತಾಲೂಕು ಪದಾಧಿಕಾರಿಗಳಾದ ವೀರಭದ್ರಸ್ವಾಮಿ, ಬೈರಾರೆಡ್ಡಿ, ನಂಜುಂಡಪ್ಪ, ನಾರಾಯಣಸ್ವಾಮಿ, ಬೀಸನಹಳ್ಳಿ ಬೈಚೇಗೌಡ ಉಪಸ್ಥಿತರಿದ್ದರು.

ಇಂದು ನಗರಕ್ಕೆ ಉಸ್ತುವಾರಿ ಸಚಿವರ ಭೇಟಿ
ಕೋಲಾರ: ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ಸೆ.19 ರಂದು ಗುರುವಾರ ಮಧ್ಯಾಹ್ನ 4 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಭೂಸ್ವಾಧೀನಕ್ಕೆ ಮಡೇರಹಳ್ಳಿ ಗ್ರಾಮಸ್ಥರ ವಿರೋಧ
ಕೋಲಾರ: ಅಭಿವೃದ್ಧಿ ಕಾರ್ಯಗಳಿಗಾಗಿ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರವು ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲವೆಂದು ತಾಲೂಕಿನ ಮಡೇರಹಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮದ ರೈತರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ಪ್ರತಿಭಟನೆ ನಡೆಸಿ ಮಡೇರಹಳ್ಳಿ ಗ್ರಾಮಕ್ಕೆ ಸೇರಿದ ಜಮೀನುಗಳಲ್ಲಿ ಅನಾದಿಕಾಲದಿಂದಲೂ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದವರು ಯಾವುದೇ ಕಾರಣಕ್ಕೂ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಬಿಡುವುದಿಲ್ಲವೆಂದು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಮಡೇರಹಳ್ಳಿಯ ಸಿ. ವೆಂಕಟರಾಮಪ್ಪ, ಬಿ. ಮುದ್ದೇಗೌಡ, ಸಾವಿತ್ರಮ್ಮ, ನಂಜಪ್ಪ, ಭಾಗ್ಯಮ್ಮ, ಪಾರ್ವತಮ್ಮ,ಇ. ವೆಂಕಟೇಶ್, ನಾರಾಯಣಸ್ವಾಮಿ, ಮುನಿಯಪ್ಪ, ಎಂ. ಚಲಪತಿ, ರವಿಕುಮಾರ್, ಪಾಪಣ್ಣ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಮಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement