ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೈತ ಸಂಘದ ಸಮ್ಮೇಳನ

Srinivasa Murthy VN
Updated On : 19 Sept 2013, 12:29 pm

ಕೋಲಾರ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಶ್ರೀನಿವಾಸಪುರ ತಾಲೂಕು ಸಮ್ಮೇಳನವನ್ನು ಬರುವ ಆಕ್ಟೋಬರ್‌ನಲ್ಲಿ ಪಟ್ಟಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಾಲೂಕು ಅಧ್ಯಕ್ಷ ಎಸ್.ಜಿ. ವೀರಭದ್ರಸ್ವಾಮಿ ತಿಳಿಸಿದ್ದಾರೆ. ಶ್ರೀನಿವಾಸಪುರ ಪಟ್ಟಣದ ನೌಕರರ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಪರಮಶಿವಯ್ಯ ಆಧಾರಿತ ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನಕ್ಕಾಗಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ವಸೂಲಾತಿಯನ್ನು ಕೂಡಲೇ ನಿಲ್ಲಿಸಬೇಕು, ರೈತರ ಮೇಲೆ ದಾಖಲು ಮಾಡುತ್ತಿರುವ ಪ್ರಕರಣಗಳನ್ನು ತಕ್ಷಣ ನಿಲ್ಲಿಸಬೇಕು, ಜಿಲ್ಲೆಯಲ್ಲಿ ಕೆರೆಗಳ ಪುನಶ್ಚೇತನಗೊಳಿಸಿ ಅಕ್ರಮ ಮರಳು ದಂಧೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಲಾಗುತ್ತದೆ ಎಂದು ಹೇಳಿದರು. 5 ರು. ಪಹಣಿ ಮತ್ತು ಮ್ಯೂಟೇಶನ್‌ಗಳನ್ನು ಗ್ರಾಪಂ ಕೇಂದ್ರಗಳಲ್ಲಿ ವಿತರಣೆ ಮಾಡಬೇಕು, ಸಂಸ್ಕರಣೆ ಘಟಕಗಳಿಗೆ ಹೆಚ್ಚಿನ ಆದ್ಯತೆ ಮತ್ತು ಸಬ್ಸಿಡಿ ನೀಡಬೇಕು, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಒತ್ತಾಯಿಸಲಾಯಿತು. ಬೈಚೇಗೌಡ, ಗಣೇಶ್‌ಗೌಡ, ಉಪಾಧ್ಯಕ್ಷ ಪ್ರಭಾಕರ್, ಗೌರವಾಧ್ಯಕ್ಷ ನಂಜುಡಪ್ಪ, ಮಾಸ್ತೇನಹಳ್ಳಿ ಗೋಪಾಲಕೃಷ್ಣ, ನಾರಾಯಣಸ್ವಾಮಿ, ಯಲವಕುಂಟೆ ಬೈರಾರೆಡ್ಡಿ, ರೆಡ್ಡೆಪ್ಪ, ಜಿ.ಎಂ. ಆಶ್ವತ್, ನಾರಾಯಣಸ್ವಾಮಿ, ಬಿ.ಟಿ. ನಂಜುಡಗೌಡ, ದೇವರಾಜು ಗೌಡ, ಓಜಲಹಳ್ಳಿ ಚಂದ್ರಪ್ಪ ಇದ್ದರು.

ತಾ. ಪಿಯು ಕಾಲೇಜುಕ್ರೀಡಾಕೂಟ
ಕೋಲಾರ: ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಸಹ್ಯಾದ್ರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಸೆ.19 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಪಿಯು ಡಿಡಿ ಎಂ.ಜಿ. ದೊರೆಸ್ವಾಮಿ ದ್ವಜಾರೋಹಣ ನೆರವೇರಿಸಲಿದ್ದು, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಕ್ರೀಡಾ ಜ್ಯೋತಿ ಬೆಳಗಿಸಲಿದ್ದಾರೆ. ಕ್ರೀಡಾಕೂಟದ ಉದ್ಘಾಟನೆಯನ್ನು ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ ಎಂ. ಉದಯಕುಮಾರ್ ನೆರವೇರಿಸಲಿದ್ದು, ಕಾಲೇಜಿನ ಪ್ರಾಂಶುಪಾಲ ಜಿ.ವಿ. ಕೃಷ್ಣಪ್ಪ ಅಧ್ಯಕ್ಷತೆ ವಹಿಸುವರು.

ವಿಶ್ವ ಅಲ್ಜಿಮರ್ಸ್ ದಿನ
ಕೋಲಾರ: ಬೆಂಗಳೂರಿನ ನೈಟಿಂಗೇಲ್ಸ್ ಸೆಂಟರ್ ಫಾರ್ ಏಜಿಂಗ್ ಮತ್ತು ಅಲ್ಜಿಮರ್ಸ್‌ನಿಂದ ನಗರದ ಇಟಿಸಿಎಂ ಆಸ್ಪತ್ರೆಯಲ್ಲಿ ಸೆ.19ರಂದು ಬೆಳಗ್ಗೆ 9 ಗಂಟೆಗೆ ಉಚಿತ ಜ್ಞಾಪಕಶಕ್ತಿ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಾಸಕ ವರ್ತೂರ್ ಪ್ರಕಾಶ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.

ರಸ್ತೆ ಬೇಲಿಗೆ ಖಂಡನೆ
ಕೋಲಾರ: ಬಂಗಾರಪೇಟೆ ತಾಲೂಕಿನ ಚಿಕ್ಕಕಲ್ಲಹಳ್ಳಿ ಗ್ರಾಮದಿಂದ ಕೆಂಪಾಪುರಕ್ಕೆ ಹಾದು ಹೋಗುವ ಕಾಲು ದಾರಿಗೆ ಚಂಭರಸನಹಳ್ಳಿಯ ನಿವಾಸಿ ರವಿಕುಮಾರ್ ಎಂಬುವರು ಬೇಲಿ ಹಾಕಿ ಗ್ರಾಮದ ಜನರಿಗೆ ತೊಂದರೆ ಉಂಟು ಮಾಡಿದ್ದಾರೆಂದು ಚಿಕ್ಕಕಲ್ಲಹಳ್ಳಿಯ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಗ್ರಾಮದ ಮುಖಂಡರಾದ ಜಯರಾಮರೆಡ್ಡಿ ಹಾಗೂ ಇನ್ನಿತರರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕಾಲು ದಾರಿಗೆ ಹಾಕಿರುವ ಬೇಲಿ ತೆರವುಗೊಳಿಸಬೇಕೆಂದು ಒತ್ತಾಯಿಸಿದರು.

ಕಾಲುಬಾಯಿ ಜ್ವರ; 21 ಜಾನುವಾರು ಸಾವು
ಮುಳಬಾಗಲು: ತಾಲೂಕಿನ ಕೋಗಿಲೇರು ಗ್ರಾಮದಲ್ಲಿ ಕಾಲುಬಾಯಿ ಜ್ವರದ ಕಾರಣ 21 ಜಾನುವಾರುಗಳ ಸಾವಿಗೀಡಾಗಿದ್ದು, ಈ ಸಂಬಂಧ ಬೆಂಗಳೂರು ನಗರದ ಕೇಂದ್ರ ಕಾಲುಬಾಯಿ ನಿಯಂತ್ರಣಾಧಿಕಾರಿ ಡಾ. ಎಚ್. ರವೀಂದ್ರ ಭೇಟಿ ನೀಡಿದರು. ಅವರೊಂದಿಗೆ ಕೋಲಾರ ಪಶುಪಾಲನೆ ಸಹಾಯಕ ನಿರ್ದೇಶಕ ಡಾ. ರಘುರಾಮೇಗೌಡ, ಡಾ. ಶಿವಶಂಕರರೆಡ್ಡಿ ಭಾಗವಹಿಸಿದ್ದರು. ಗ್ರಾಮಸ್ಥರು ಕಾಲುಬಾಯಿ ಲಸಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಹಾಕಿಸದ ಕಾರಣವಾಗಿ ಕಾಯಿಲೆ ಉಲ್ಬಣವಾಗಿರಬಹುದೆಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಗ್ರಾಮಸ್ಥರು ತಮ್ಮ ಜಾನುವಾರುಗಳಿಗೆ ವಿಮೆ ಸಹ ಮಾಡಿಸದ ಕಾರಣವಾಗಿ ವಿಮೆಯ ಪರಿಹಾರ ಸಹ ಬರುವುದಿಲ್ಲ. ಮುಳಬಾಗಲು ಶಾಸಕ ಕೊತ್ತೂರು ಮಂಜುನಾಥ್ ಸಹ ಗ್ರಾಮಕ್ಕೆ ಭೇಟಿ ನೀಡಿದ್ದರು.

ಇಂದು ಗ್ರಾಪಂ ನೌಕರರ ಪ್ರತಿಭಟನೆ
ಕೋಲಾರ: ಸರ್ಕಾರದ ಆದೇಶಗಳ ಜಾರಿಗೆ ಒತ್ತಾಯಿಸಿ ಸೆ.19ರಂದು ಬೆಳಗ್ಗೆ 11 ಗಂಟೆಗೆ ಕೋಲಾರ ತಾಪಂ ಮುಂದೆ ಗ್ರಾಪಂ ನೌಕರರ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಅಶ್ವಥಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ವೆಂಕಟರಾಮೇಗೌಡ ಜಂಟಿ ಪ್ರಕರಣೆಯಲ್ಲಿ ತಿಳಿಸಿದ್ದಾರೆ.

ಆರ್‌ಎಸ್‌ಎಸ್ ಕಾರ್ಯಕರ್ತ ನಿಧನಕ್ಕೆ ಶೋಕ
ಕೋಲಾರ: ಆಧ್ಯಾತ್ಮಿಕ ಚಿತಂಕ, ಆರ್‌ಎಸ್‌ಎಸ್ ಕಾರ್ಯಕರ್ತ ಆರ್.ವಿ. ಶ್ರೀನಿವಾಸಶೆಟ್ಟಿ ಅವರ ನಿಧನಕ್ಕೆ ವಾಸವಿ ಯುವಜನ ಸಂಘ ಮುಂಖಡರು ಶೋಕ ವ್ಯಕ್ತಪಡಿಸಿದ್ದಾರೆ. ಸೋಮವಾರ ಆರ್.ವಿ. ಶ್ರೀನಿವಾಸಶೆಟ್ಟಿ ನಿಧನರಾಗಿದ್ದು, ಕುಟುಂಬಕ್ಕೆ ದೇವರು ದುಖಃವನ್ನು ಭರಿಸುವ ಶಕ್ತಿ ನೀಡಲೆಂದು ಸಂಘದ ಮುಖಂಡರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement