ಲಾರಿಗಳಿಗೆ ಬೆಂಕಿ ಹಚ್ಚಿದರೆ ಮರಳು ದಂಧೆ ನಿಲ್ಲುತ್ತದೆ
ಕ.ಪ್ರ.ವಾರ್ತೆ ಗೌರಿಬಿದನೂರು ಸೆ. 18
ನಿರಂತರವಾಗಿ ಮರಳು ಸಾಗಣೆಯಾಗುತ್ತಿರುವ ಸ್ಥಳಕ್ಕೆ ತೆರಳಿ ಮರಳು ಲಾರಿಗಳನ್ನು ರೈತರೇ ಸುಡಬೇಕು. ಆಗ ಮರಳು ಸಾಗಣೆ ನಿಲ್ಲುತ್ತದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ರೈತರಿಗೆ ತಿಳಿಸಿದರು.
ಗೌರಿಬಿದನೂರು ತಾಲೂಕು ಮಂಚೇನಹಳ್ಳಿ ಹೋಬಳಿ ಬಿಸಲಹಳ್ಳಿ ಗ್ರಾಮಕ್ಕೆ ಜಲಾನಯನ ಇಲಾಖೆಯ ಸಮಗ್ರ ಜಲಾನಯನ ನಿರ್ವಹಣಾ ಯೋಜನೆಯ ಕಾಮಗಾರಿ ಪರಿಶೀಲನೆ ನಡೆಸಲು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ರೈತರೊಂದಿಗೆ ಮಾತನಾಡಿದರು.
ತಾಲೂಕಿನಲ್ಲಿ ನಿರಂತರ ಮರಳು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ರಾತ್ರಿ ವೇಳೆ ಮರಳು ಲಾರಿಗಳಲ್ಲಿ ತುಂಬಲಾಗುತ್ತದೆ. 50 ಲಾರಿಗಳಷ್ಟು ಸಾಗಣೆಯಾಗುತ್ತಿದೆ. ಇದನ್ನು ತಡೆಯುವವರು ಯಾರು ಎಂಬ ರೈತರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ರೈತರೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ರೈತರಿಗೆ ತೊಂದರೆಯಾಗುತ್ತಿರುವ ವಿಷಯ ಇದು ನೀವು ಏಕೆ ಸುಮ್ಮನಿದ್ದೀರಿ? ನೀವೇ ಟ್ರ್ಯಾಕ್ಟರ್ ಹಾಗೂ ಲಾರಿಯನ್ನು ಸುಟ್ಟು ಹಾಕಿ ಆಗ ಅದೇ ನಿಲ್ಲುತ್ತದೆ ಎಂದ ಅವರು ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಚಿಕ್ಕಬಳ್ಳಾಪುರದಲ್ಲಿ ನಡೆಯುವ ಅಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತೇನೆ ಎಂದರು. ಜಲಾನಯನ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ಕೃಷಿ ಸಚಿವರು, ಜಲಾನಯನ ಇಲಾಖೆಯಲ್ಲಿ ಕೈಗೊಂಡಿರುವ ಯೋಜನೆಗಳು ಕಾಮಗಾರಿಗಳು ಗುಣಮಟ್ಟವಾಗಿಲ್ಲ ಎಂಬ ಖಚಿತ ಮಾಹಿತಿಯ ಮೇರೆಗೆ ಮಂಚೇನಹಳ್ಳಿ ಹೋಬಳಿ ಬಿಸಲಹಳ್ಳಿ ಗ್ರಾಮಕ್ಕೆ ಆಗಮಿಸಿದ ಕೃಷಿ ಸಚಿವರು ಸುಮಾರು ಅರ್ಧ ಗಂಟೆ ಕಾಲ ರೈತ ಜಮೀನುಗಳಲ್ಲಿ ಜಲಾನಯನ ಇಲಾಖೆಯ ವತಿಯಿಂದ ಕೈಗೊಂಡಿರುವ ಯೋಜನೆಗಳನ್ನು ಪರಿಶೀಲಿಸಿದರು ಕೈಗೊಂಡಿರುವ ಕಾಮಗಾರಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.
ಜಲಾನಯನ ಇಲಾಖೆಯ ಕೃಷಿ ಹೊಂಡ, ಬದುಗಳು, ಕೃಷಿ ಅರಣ್ಯ ಸಸಿಗಳು, ನಾಲಾ ಬದುಗಳನ್ನು ಜಲಾನಯನ ಇಲಾಖೆಯ ಅಧಿಕಾರಿಗಳಿಂದ ಸರ್ವೆನಂ ಪ್ರಕಾಶ್ ಅವರ ಪಡೆದ ಸದರಿ ಸರ್ವೆನಂಬರ್ ಇರುವ ಜಮೀನಿಗೆ ತೆರಳಿ ರೈತರಿಂದ ಕಾಮಗಾರಿಯ ಬಗ್ಗೆ ವಿವರ ಪಡೆದ ನಂತರ ಜಲಾನಯನ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ನೀವು ನಕ್ಷೆ ಪ್ರಕಾರ ಸರ್ವೆ ನಂಬರ್ ಗುರ್ತಿಸಿಲ್ಲ. ಮುಂದಿನ ದಿನಗಳಲ್ಲಿ ನಕ್ಷೆ ಪ್ರಕಾರವೇ ಸರ್ವೆ ನಂಬರ್ ಗುರ್ತಿಸಿ ಕಾಮಗಾರಿ ಕೈಗೊಳ್ಳಬೇಕು ಗುಣಮಟ್ಟ ಕಾಯ್ದುಕೊಳ್ಳಬೇಕು, ರೈತರು ಕೇಳಿದರೆ ಮಾತ್ರ ನೀವು ಯೋಜನೆಯ ಪ್ರಯೋಜನೆಗಳನ್ನು ತಿಳಿಸುತ್ತೀರಿ. ಆದರೆ ಸಾಮಾನ್ಯ ರೈತನಿಗೂ ಜಲಾನಯನ ಯೋಜನೆ ಬಗ್ಗೆ ಮಾಹಿತಿ ನೀಡಬೇಕು ಸೌಲಭ್ಯ ಸಿಗಬೇಕು ಎಂದರು. ಇವರೊಂದಿಗೆ ಗೌರಿಬಿದನೂರು ಶಾಸಕರು ಹಾಗೂ ವಿಧಾನಸಭಾ ಉಪ ಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಉಪಸ್ಥಿತರಿದ್ದರು.