ಶತಕ ಪೂರೈಸಿದ ಆಸ್ಪತ್ರೆಗೆ ನೂರಾರು ಸಮಸ್ಯೆ
ಆರ್. ರಜನೀಕಾಂತ್
ಕ.ಪ್ರ.ವಾರ್ತೆ ಕೆಜಿಎಫ್ಸೆ. 18
ಸುಮಾರು 100 ವರ್ಷಗಳಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವ ಕೆಜಿಎಫ್ ಸಾರ್ವಜನಿಕ ಆಸ್ಪತ್ರೆ ಇದೀಗ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಆಸ್ಪತ್ರೆಗೆ ಬೇಕಿದೆ ಹೆಚ್ಚಿನ ಚಿಕಿತ್ಸೆ...
ಮೈಸೂರು ಮಹಾರಾಜರ ಜಯಚಾಮರಾಜ ಒಡೆಯರ್ ಕಾಲದಲ್ಲಿ ನಿರ್ಮಿಸಿದ ಕೆಜಿಎಫ್ ಸಾರ್ವಜನಿಕ ಆಸ್ಪತ್ರೆ ಜಿಲ್ಲೆಯಲ್ಲೇ ಪ್ರಸಿದ್ಧಿ ಪಡೆದಿತ್ತು. ಬಿಜಿಎಂಎಲ್ ಚಿನ್ನದ ಗಣಿಗಳು ಕಾರ್ಯನಿರ್ವಹಿಸುತ್ತಿದ್ದಾಗ ಕೆಜಿಎಫ್ ನಗರ, ಚಿನ್ನದ ಗಣಿ ಕಾರ್ಮಿಕರ ಕುಟುಂಬ ವರ್ಗ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಗಡಿ ಭಾಗದ ಜನರು ಚಿಕಿತ್ಸೆಗಾಗಿ ಬರುತ್ತಿದ್ದಾಗ ಆಸ್ಪತ್ರೆಯ ಎಲ್ಲಾ ಕೊಠಡಿಗಳು ತುಂಬಿತುಳುಕುತ್ತಿತ್ತು. ಪ್ರತಿಯೊಂದು ಕಾಯಿಲೆಗೂ ಇಲ್ಲಿ ಚಿಕಿತ್ಸೆ ನೀಡಲು 16ರಿಂದ 18 ವೈದ್ಯರು ಕಾರ್ಯನಿರ್ವಹಿಸುತ್ತಿದ್ದರು.
ಬೆಡ್ಗಳು ಖಾಲಿ.. ಖಾಲಿ...: ಆದರೆ ಸುಮಾರು 10 ವರ್ಷಗಳಿಂದ ಆಸ್ಪತ್ರೆಯ ವ್ಯವಸ್ಥೆ ತೀರಾ ಹದೆಗೆಟ್ಟಿದ್ದು ರೋಗಿಗಳಿಗೆ ಮೂಲ ಸೌಕರ್ಯ ಕೊರತೆ, ಭದ್ರತೆಯಿಲ್ಲ, ಕೊಳವೆ ಬಾವಿ ದುರಸ್ತಿಗೊಂಡು ನೀರಿನ ವ್ಯವಸ್ಥೆಯಿಲ್ಲ, ಸರ್ಜಿಕಲ್, ಮಕ್ಕಳ ತಜ್ಞರು, ಫಿಸಿಷಿಯನ್, ಇಎನ್ಟಿ, ಚರ್ಮ, ಆರ್ಥೋಪೆಡಿಕ್ ಮುಂತಾದ 8 ವಿಭಾಗದ ಆರೋಗ್ಯ ಕಾರ್ಯನಿರ್ವಹಿಸುತ್ತಿದ್ದ ಆಸ್ಪತ್ರೆಯಲ್ಲಿ ಈಗ ಕೇವಲ 3 ವೈದ್ಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ರೋಗಿಗಳು ಇಲ್ಲದೆ ಬೆಡ್ಗಳು ಖಾಲಿ.. ಖಾಲಿ..., ಕೊಠಡಿಗೆ ಬೀಗ ಹಾಕುತ್ತಿದ್ದು, ಜಾನುವಾರುಗಳು, ಬೀದಿ ನಾಯಿಗಳ ವಾಸಸ್ಥಳವಾಗಿ ಪರಿವರ್ತನೆಗೊಂಡಿದೆ.
ಚಿಕಿತ್ಸೆಗೆ ಪರದಾಟ: ಸಣ್ಣಪುಟ್ಟ ಕಾಯಿಲೆಗಳಿಗೂ ಕೋಲಾರ, ಬೆಂಗಳೂರು, ಕುಪ್ಪಂ ಪ್ರದೇಶಗಳಿಗೆ ರೋಗಿಗಳನ್ನು ಕಳುಹಿಸಲಾಗುತ್ತಿದೆ. ರಸ್ತೆ ಅಪಘಾತ, ಹಲ್ಲೆ, ಆತ್ಮಹತ್ಯೆ ಯತ್ನ ಮುಂತಾದ ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಬರುವ ರೋಗಿಗಳನ್ನು ತಕ್ಷಣ ಬೇರೆ ಆಸ್ಪತ್ರೆಗೆ ಕೊಂಡೊಯ್ಯಲು ವೈದ್ಯರು ತಿಳಿಸುತ್ತಾರೆ. ಆದರೆ ಅವರನ್ನು ಕೊಂಡೊಯ್ಯಲು ತುರ್ತು ವಾಹನಗಳಲ್ಲಿ ಹೆಚ್ಚಿನ ಚಿಕಿತ್ಸೆಗಳ ವ್ಯವಸ್ಥೆಯಿಲ್ಲದೆ ಅದೆಷ್ಟೋ ಜೀವಗಳು ಮಾರ್ಗ ಮಧ್ಯದಲ್ಲೇ ಸಾವನ್ನಪಿರುವುದು ಉಂಟು. ಆಸ್ಪತ್ರೆಗೆ ಬೇಕಾಗಿರುವ ಪ್ರಮುಖ ಉಪಕರಣಗಳ ಕೊರತೆ, ದಲ್ಲಾಳಿಗಳ ಹಾವಳಿ ಮುಂತಾದ ಸಮಸ್ಯೆಗಳಿಂದ ಇತರೆ ಬಡ ಕುಟುಂಬ ವರ್ಗದವರು, ದಲಿತರು, ಚಿನ್ನದ ಗಣಿ ಕಾರ್ಮಿಕರು, ಕ್ಷೇತ್ರದ 166 ಗ್ರಾಮೀಣ ಭಾಗಗಳಿಂದ ಬರುವ ಗ್ರಾಮಸ್ಥರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.
ಬರೀ ಆಶ್ವಾಸನೆ: ಈ ಹಿಂದೆ ಶಾಸಕರಾಗಿದ್ದ ವೈ. ಸಂಪಂಗಿ ಹಲವು ಬಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳೊಂದಿಗೆ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರೂ ಯಾವುದೇ ಪ್ರಯೋಜನೆವಾಗಿಲ್ಲ. ಅದೇ ರೀತಿ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಸಚಿವರಾದ ಶ್ರೀರಾಮುಲು, ಆರ್. ಅಶೋಕ್, ಇದೀಗ ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂತಾದವರು ಕೆಜಿಎಫ್ನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ರೋಗಿಗಳ ಕುಂದುಕೊರತೆಯನ್ನು ವಿಚಾರಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ಕೊಟ್ಟು ಹೋಗಿದ್ದಾರೆ.
ಅದನ್ನು ಬಿಟ್ಟರೆ ಈವರೆಗೆ ಯಾವುದೇ ಬದಲಾವಣೆಯಾಗದೇ ಹಾಗೇ ಉಳಿದಿದೆ. ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಯು.ಟಿ. ಖಾದರ್ ಅವರು ಇನ್ನಾದರೂ ಇತ್ತ ಗಮನ ಹರಿಸಿ ಕೆಜಿಎಫ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ, ಆಸ್ಪತ್ರೆಗೆ ಅಗತ್ಯವಿರುವ ವೈದ್ಯರ ನೇಮಕ ಮಾಡಿ ಅಗತ್ಯವಿರುವ ಉಪಕರಣಗಳನ್ನು ಪೂರೈಕೆಗೆ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ ಎಂಬುದು ಕ್ಷೇತ್ರದ ಜನತೆಯ ನಿರೀಕ್ಷೆಯಾಗಿದೆ.