'ಕ್ರೀಡೆ ಗಂಧ- ಗಾಳಿ ತಿಳಿಯದವರನ್ನು ಆಹ್ವಾನಿಸಬೇಡಿ'
ಕ.ಪ್ರ.ವಾರ್ತೆ ಕೋಲಾರ ಸೆ.19
ಕ್ರೀಡಾಕೂಟಗಳ ಉದ್ಘಾಟನೆ ಮತ್ತು ಬಹುಮಾನ ವಿತರಣಾ ಸಮಾರಂಭಕ್ಕೆ ಕ್ರೀಡೆಯ ಬಗ್ಗೆ ಗಂಧ-ಗಾಳಿ ಗೊತ್ತಿಲ್ಲದ ರಾಜಕಾರಣಿಗಳನ್ನು ಕರೆಯಬೇಡಿ ಎಂದು ಕೋಲಾರ ನಗರ ವೃತ್ತ ನಿರೀಕ್ಷಕ ರಮೇಶ್ ಸಲಹೆ ನೀಡಿದರು.
ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಗುರುವಾರ ಪಿಯು ಶಿಕ್ಷಣ ಮಂಡಳಿ ಮತ್ತು ಸಹ್ಯಾದ್ರಿ ಪದವಿ ಪೂರ್ವ ಕಾಲೇಜಿನ ಸಹಯೋಗದಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು, ಕ್ರೀಡೆಗಳ ಬಗ್ಗೆ ತಿಳಿವಳಿಕೆ, ಕನಿಷ್ಠ ಜ್ಞಾನ ಇಲ್ಲದ ರಾಜಕಾರಣಿಗಳನ್ನು ಕ್ರೀಡಾಕೂಟಗಳಿಗೆ ಕರೆದಲ್ಲಿ ಅವರು ತಮಗೆ ತೋಚಿದ ರೀತಿಯಲ್ಲಿ ಭಾಷಣ ಬಿಗಿದು ಹೋಗುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಇಲ್ಲವೇ ಸಂಘಟಕರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲವೆಂದು ಅಭಿಪ್ರಾಯಪಟ್ಟರು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ಸಂಘಟಕರು ಯಾವುದೇ ರಾಜಕಾರಣಿಯನ್ನು ಆಹ್ವಾನಿಸಿರಲಿಲ್ಲ. ಆದರೂ ಪೊಲೀಸ್ ವೃತ್ತ್ತ ನಿರೀಕ್ಷಕ ರಮೇಶ್ ರಾಜಕಾರಣಿಗಳ ಬಗ್ಗೆ ಏಕೆ ಪ್ರಸ್ತಾಪ ಮಾಡಿದರು ಎಂಬುದು ವೇದಿಕೆಯಲ್ಲಿದ್ದವರು ಪಿಸುಗುಟ್ಟುವುದಕ್ಕೆಡೆ ಮಾಡಿತು.
ತಾವು ಸಹ ಕ್ರೀಡಾಪಟು ಎಂದು ಹೇಳಿಕೊಂಡ ಕೋಲಾರ ವೃತ್ತ ನಿರೀಕ್ಷಕ ರಮೇಶ್, ಸರ್ಕಾರಿ ಶಾಲೆಗಳಲ್ಲಿ ಇರುವಂತೆಯೋ ಪದವಿಪೂರ್ವ ಕಾವೇಜುಗಳಲ್ಲೂ ದೈಹಿಕ ಶಿಕ್ಷಣ ಅಧಿಕಾರಿಗಳು ಇದ್ದಾಗ ಮಾತ್ರ ವಿದ್ಯಾರ್ಥಿಗಳಿಗೆ ಉತ್ತರ ತರಬೇತಿ ನೀಡಿ ಕ್ರೀಡಾಕೂಟಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕ್ರೀಡಾಕೂಟವನ್ನು ಉದ್ಘಾಟಿಸಿದ ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ ಎಂ. ಉದಯ ಕುಮಾರ್, ವಿದ್ಯಾರ್ಥಿಗಳು ಪಾಠ-ಪ್ರವಚನದ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಅಭಿವೃದ್ಧಿ ಹೆಚ್ಚಿಸಿಕೊಳ್ಳಬೇಕೆಂದರು.
ಕ್ರೀಡಾಜ್ಯೋತಿ ಬೆಳಗಿಸಿದ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಬಸವರಾಜ್ ಚಿಲಕಾಂತ್ ಮಠ್, ಕಳೆದ 20 ವರ್ಷಗಳಿಂದ ಪದವಿ ಪೂರ್ವ ಕಾಲೇಜುಗಳಿಗೆ ದೈಹಿಕ ಶಿಕ್ಷಣ ಅಧಿಕಾರಿಗಳನ್ನು ನೇಮಕ ಮಾಡುವಂತೆ ಹಾಗೂ ಯುಪಿ ಇಲಾಖೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರ ಹುದ್ದೆಗೆ ಒತ್ತಾಯ ಮಾಡುತ್ತಾ ಬಂದಿದ್ದರೂ ಬೇಡಿಕೆ ಈಡೇರಿಲ್ಲವೆಂದು ತಿಳಿಸಿದರು.
ಇದಕ್ಕೆ ತಮ್ಮ ಭಾಷಣದಲ್ಲಿ ಉತ್ತರಿಸಿದ ಜಿಲ್ಲಾ ಪಿಯು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ದೊರೆಸ್ವಾಮಿ, 200 ವಿದ್ಯಾರ್ಥಿಗಳು ಇರುವ ಪಿಯು ಕಾಲೇಜುಗಳಿಗೆ ದೈಹಿಕ ಶಿಕ್ಷಣಾಧಿಕಾರಿ ನೇಮಕಕ್ಕೆ ಸರ್ಕಾರ ಕ್ರಮ ಕೈಗೊಂಡಿದ್ದು ಮುಂದಿನ ತಿಂಗಳು ಆದೇಶ ಜಾರಿಗೆ ಬರಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಜಿ.ವಿ. ಕೃಷ್ಣಪ್ಪ ಮಾತನಾಡಿ, ಕ್ರೀಡಾಕೂಟಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಸ್ತು ಮತ್ತು ಕ್ರೀಡಾ ನಿಮಯಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ವರದರಾಜು, ಜಿಲ್ಲಾ ಪಿಯು ಒಕ್ಕೂಟದ ಅಧ್ಯಕ್ಷ ಎಸ್. ವೆಂಕಟಸ್ವಾಮಿ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ. ನಟರಾಜ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ರತ್ನಪ್ಪ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪಿ. ರುದ್ರಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ. ಮಂಜುನಾಥ್ ಹಾಗೂ ವಿವಿಧ ಪಿಯು ಕಾಲೇಜುಗಳ ಪ್ರಾಂಶುಪಾಲರು ಇದ್ದರು.
ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿನಿ ಶ್ವೇತ ಕ್ರೀಡಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಇದೇ ಕಾಲೇಜಿನ ಕನ್ನಡ ಉಪನ್ಯಾಸಕ ಮುನಿರಾಜು ಸ್ವಾಗತಿಸಿ, ಕ್ರೀಡಾ ತರಬೇತುದಾರ ನಾಗರಾಜ್ ನಿರೂಪಿಸಿದರು.