ದ್ವಿಚಕ್ರ ವಾಹನ ಡಿಕ್ಕಿ: ಬಾಲಕಿಗೆ ಗಾಯ
ಬಾಗೇಪಲ್ಲಿ: ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿಯೊಬ್ಬಳ ಒಂದು ಕಾಲು ಮತ್ತು ಹಲ್ಲು ಮುರಿದು ತೀವ್ರವಾಗಿ ಗಾಯಗೊಂಡಿರುವ ಘಟನೆ ಗುರುವಾರ ಪಟ್ಟಣದಲ್ಲಿ ನಡೆದಿದೆ.
ಗಾಯಗೊಂಡಿರುವ ಬಾಲಕಿ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಾಣಿ (12)ಎಂದು ಗುರುತಿಸಲಾಗಿದೆ. ಎಂದಿನಂತೆ ಬೆಳಗ್ಗೆ ಪಟ್ಟಣದ ಏಕೈಕ ಮುಖ್ಯರಸ್ತೆಯಾಗಿರುವ ಡಿವಿಜಿ ರಸ್ತೆಯಲ್ಲಿರುವ ಶಾಲೆಗೆ ಬರುತ್ತಿದ್ದಾಗ ಅಜಾಗರೂಕತೆಯಿಂದ ವೇಗವಾಗಿ ಬಂದ ದ್ವಿಚಕ್ರ ವಾಹನ ಬಾಲಕಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ತೀವ್ರವಾಗಿ ಗಾಯಗೊಂಡು ಬಾಲಕಿಗೆ ಎಡಕಾಲು ಮೂಳೆ ಮುರಿದಿದ್ದು, ಹಲ್ಲುಗಳು ಸಹ ಮುರಿದು ತೀವ್ರ ರಕ್ತ ಸ್ರಾವವಾಗಿದೆ. ಕೂಡಲೇ ಶಿಕ್ಷಕರಾದ ಎಂ.ಸಿ. ನಂಜುಂಡಪ್ಪ ಅವರು ಗಾಯಗೊಂಡಿರುವ ಬಾಲಕಿಯನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರ ತನ್ನ ವಾಹನವನ್ನು ಘಟನಾ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಪರಾರಿಯಾಗಿರುವ ದ್ವಿಚಕ್ರ ವಾಹನ ಸವಾರನಿಗಾಗಿ ಬಲೆ ಬೀಸಿದ್ದಾರೆ.
ಕಾಮುಕರ ಕಾಟ: ಪಟ್ಟಣದ ಹೃದಯ ಭಾಗದ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಸಂಕೀರ್ಣ ಆವರಣದಲ್ಲಿ 1ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೂ ತರಗತಿಗಳು ನಡೆಯುತ್ತಿದ್ದು, ಕಾಮುಕರು ಬೆಳಗ್ಗೆಯಿಂದ ಸಂಜೆಯವರೆಗೂ ಶಾಲೆಯ ಸುತ್ತಮುತ್ತಲೂ ತಮ್ಮ ದ್ವಿಚಕ್ರ ವಾಹನಗಳಲ್ಲಿ ವೀಲಿಂಗ್, ರೋಡ್ ಶೋ ಮಾಡುತ್ತಾ, ವಿದ್ಯಾರ್ಥಿನಿಯರನ್ನು ಕೆಣಕುತ್ತಾ ತಮ್ಮ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಓಡಿಸುತ್ತಿರುತ್ತಾರೆ. ಇದರ ಪರಿಣಾಮ ಈಗಾಗಲೇ ಶಾಲೆಯ ಮುಂಭಾಗ ಅನೇಕ ಅಪಘಾತ ನಡೆದಿದ್ದು, ಅನೇಕರು ಗಾಯಗೊಂಡಿದ್ದಾರೆ. ಜೊತೆಗೆ ಈ ಪುಂಡ ಪೋಕರಿಗಳ ಕಾಟಕ್ಕೆ ವಿದ್ಯಾರ್ಥಿನಿಯರೂ ಶಾಲೆಗೆ ಬರಲು ಹೆದರುತ್ತಿದ್ದು, ಪೋಷಕರು ಸಹ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ತುಂಬಾ ಆತಂಕಪಡುತ್ತಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಪುಂಡ- ಪೋಕರಿಗಳಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.