ದ್ವಿಚಕ್ರ ವಾಹನಕ್ಕೆ ಸುಮೋ ಡಿಕ್ಕಿ: ಮೂವರಿಗೆ ಗಾಯ
ಚಿಂತಾಮಣಿ: ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಟಾಟಾ ಸುಮೋ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 3 ಜನರು ತೀವ್ರ ಗಾಯಗಳಾಗಿ ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿರುವ ಘಟನೆ ಬಟ್ಲಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿ ಕೊತ್ತವುಡ್ಯ ಬಳಿ ಬುಧವಾರ ರಾತ್ರಿ ನಡೆದಿದೆ. ಚಿಂತಾಮಣಿ ತಾಲೂಕಿನ ಎಂ.ಗೊಲ್ಲಹಳ್ಳಿ ಗ್ರಾಮದ ರಾಷ್ಟ್ರೀಕೃತ ಬ್ಯಾಂಕಿನ ಒಪ್ಪಂದದ ಮೇರೆಗೆ ಟಾಟಾ ಸುಮೋವೊಂದು ಕೆಲಸ ನಿರ್ವಹಿಸುತ್ತಿರುವಾಗ ಯಗವಕೋಟೆ-ಕೊತ್ತವುಡ್ಯ ಮಾರ್ಗದ ಮಧ್ಯದಲ್ಲಿ ವಾಹನವು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಕ ಚಾಲನೆ ಮಾಡಿದ ಪರಿಣಾಮ ದಿನ್ನಮಿಂದಪಲ್ಲಿ ಗ್ರಾಮದ ವಾಹನ ಸವಾರರಾದ ಹರೀಶ್, ಮಂಜು, ರವಣಪ್ಪ ಎಂಬವರು ತೀವ್ರವಾಗಿ ಗಾಯಗೊಂಡು ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಹರೀಶ್ ಮತ್ತು ಮಂಜು ಕೋಲಾರ್ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ರವಾನಿಸಿರುವುದಾಗಿ ಬಟ್ಲಹಳ್ಳಿ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅತ್ಯಾಚಾರ ಯತ್ನ; ಆರೋಪಿ ನ್ಯಾಯಾಂಗ ಬಂಧನಕ್ಕೆ
ಗೌರಿಬಿದನೂರು: ಕಡಲೇಕಾಯಿ ನೀಡುವುದಾಗಿ ನಂಬಿಸಿ 6ವರ್ಷದ ಬಾಲಕಿಯೊಬ್ಬಳನ್ನು ಸಮೀಪದ ಹೊಲಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ತಾಲೂಕಿನ ಮಂಚೇನಹಳ್ಳಿ ಹೋಬಳಿ ರಾಯನಕಲ್ಲು ಗ್ರಾಮದಲ್ಲಿ ಬುಧವಾರ ಸಂಜೆ ಸಂಭವಿಸಿದೆ. ರಾಯನಕಲ್ಲು ಗ್ರಾಮದ ನರಸಿಂಹಪ್ಪ(40) ಎಂಬುವವ ತನ್ನ ಪಕ್ಕದ ಮನೆಯ 6ವರ್ಷದ ಹುಡುಗಿಯನ್ನು ಕಡಲೆಕಾಯಿ ನೀಡುವುದಾಗಿ ನಂಬಿಸಿ ಪಕ್ಕದಲ್ಲೇ ಇದ್ದ ಹೊಲಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾಗ ಬಾಲಕಿ ಕಿರುಚಿಕೊಂಡಿದ್ದಾಳೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿ ನರಸಿಂಹಪ್ಪನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಸಿಪಿಐ ಲಕ್ಷ್ಮಯ್ಯ ತಿಳಿಸಿದ್ದಾರೆ. ಅತ್ಯಾಚಾರಯತ್ನಕ್ಕೊಳಗಾದ ಬಾಲಕಿಗೆ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿಸಿದ್ದಾರೆ.