ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಆಯ್ಕೆಯಿಂದ ಕಾಂಗ್ರೆಸ್‌ನಲ್ಲಿ ನಡುಕ'
ಬಂಗಾರಪೇಟೆ: ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯವರನ್ನು ಆಯ್ಕೆ ಮಾಡಿರುವುದರಿಂದ ಕಾಂಗ್ರೆಸ್ ಮತ್ತು ನಾಯಕರಿಗೆ ಈಗಾಗಲೇ ನಡುಕ ಉಂಟಾಗಿದ್ದು ಮುಂದೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಕೋಲಾರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಹೇಳಿದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿರವರ ಹುಟ್ಟುಹಬ್ಬದ ಪ್ರಯುಕ್ತ ಹಾಗೂ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿರುವುದಕ್ಕೆ ಇಲ್ಲಿನ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಮಾತನಾಡುತ್ತಾ, ಗುಜರಾತ್‌ನಲ್ಲಿ ನಾಲ್ಕು ಬಾರಿ ಸತತವಾಗಿ ಮೋದಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ಆ ರಾಜ್ಯವನ್ನು ದೇಶದಲ್ಲಿಯೇ ಮಾದರಿ ರಾಜ್ಯ ಮಾಡುತ್ತಿದ್ದಾರೆ. ಇಂತಹ ದೀಮಂತ ವ್ಯಕ್ತಿಯನ್ನು ಪ್ರಧಾನಿಯಾಗಿ ಮಾಡಿದರೆ ದೇಶದ ಆರ್ಥಿಕ ಸಂಕಷ್ಟ ಸುಧಾರಿಸಿ ದೇಶವನ್ನು ಭ್ರಷ್ಟಾಚಾರ ಮುಕ್ತ ದೇಶವಾಗಿ ರೂಪಿಸುವಲ್ಲಿ ಎರಡು ಮಾತಿಲ್ಲ ಎಂದರು.
ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದೆ ಇದಕ್ಕಾಗಿ ಮತದಾರರನ್ನು ಓಲೈಸಲು ನಾನಾ ತಂತ್ರಗಳಲ್ಲಿ ತೊಡಗಿದೆ ಇದ್ಯಾವುದೂ ಫಲ ನೀಡುವುದಿಲ್ಲ ಹಾಗೂ ಕಾಂಗ್ರೆಸ್‌ನ ಯುವರಾಜ ರಾಹುಲ್ ಗಾಂಧಿ ಪ್ರಧಾನಿಯಾಗುವುದು ಕನಸಿನ ಮಾತು ಎಂದು ಲೇವಡಿ ಮಾಡಿದರಲ್ಲದೆ ಜಿಲ್ಲೆಯಿಂದ ಆರು ಬಾರಿ ಸಂಸದರಾಗಿ ಕೇಂದ್ರ ಸಚಿವರಾಗಿರುವ ಕೆ.ಎಚ್. ಮುನಿಯಪ್ಪ ಸಾಧನೆ ಶೂನ್ಯವಾಗಿದೆ ಈ ಬಾರಿ ಬಿಜೆಪಿಗೆ ಮತ ಹಾಕಿ ದೇಶದ ಚಿತ್ರಣವನ್ನು ಬದಲಾಯಿಸಿ ನೀವೂ ಬದಲಾಗಿ ಎಂದು ಕರೆ ನೀಡಿದರು.
ಈ ವೇಳೆ ಪಕ್ಷದ ತಾ-ಅಧ್ಯಕ್ಷ ಮಾಕಂರ್ಡೇಗೌಡ, ಪುರಸಭೆ ಸದಸ್ಯರಾದ ಬಿ.ಸಿ. ಶ್ರೀನಿವಾಸಮೂರ್ತಿ,ವೇದಾವತಿ ಪ್ರಭಾಕರ್, ಭೂ ಬ್ಯಾಂಕ್ ಅಧ್ಯಕ್ಷ ಹುನ್ಕುಂದ ವೆಂಕಟೇಶ್, ಕೀಲುಕೊಪ್ಪ ಶ್ರೀನಿವಾಸ್,ನಾಗಪ್ರಕಾಶ್, ಸುಗೇಂದ್ರನ್,ಬಾಲಚಂದ್ರ ಮತ್ತಿತರರು ಇದ್ದರು.