ಬೇಡಿಕೆಗಳ ಈಡೇರಿಸಲು ಗ್ರಾಪಂ ನೌಕರರ ಪ್ರತಿಭಟನೆ
ಕ.ಪ್ರ.ವಾರ್ತೆ ಕೋಲಾರ ಸೆ.19
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೋಲಾರ ತಾಲೂಕಿನ ಗ್ರಾಮ ಪಂಚಾಯಿತಿ ನೌಕರರು ನಗರದ ತಾ.ಪಂ ಕಚೇರಿ ಮುಂದೆ ಗುರುವಾರ ಧರಣಿ ನಡೆಸಿದರು.
ಗ್ರಾಮೀಣ ಅವಶ್ಯಕವಾದ ಕುಡಿಯುವ ನೀರು, ಬೆಳಕು, ಸ್ವಚ್ಛತೆ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸಿ ಕನಿಷ್ಠ ವೇತನ, ರಜೆ, ನೌಕರಿ ಭದ್ರತೆ ಇನ್ನಿತರೆ ಯಾವುದೇ ಸೌಲಭ್ಯಗಳಿಲ್ಲದೇ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಇರುವ ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಹಾಗೂ ಬಾಕಿ ವೇತನ ಪಾವತಿ ಆಗುತ್ತಿಲ್ಲವೆಂದು ದೂರಿದರು.
ಗ್ರಾ.ಪಂ. ನೌಕರರ ಹೋರಾಟದ ಫಲವಾಗಿ ಕನಿಷ್ಠ ವೇತನ ಕಾಯ್ದೆಯಡಿ ವೇತನವನ್ನು 2008ರ ಮಾರ್ಚ್ 25 ರಂದು ಪರಿಷ್ಕರಿಸಿರುವುದಲ್ಲದೆ ವಿಮೆ ಸೌಲಭ್ಯವನ್ನು ಒದಗಿಸಿದ್ದರೂ ಆದೇಶ ಜಾರಿಗೆ ಬಂದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಖಾಲಿ ಇರುವ ಬಿಲ್‌ಕಲೆಕ್ಟರ್ ಹುದ್ದೆಗಳಿಗೆ ಪಂಚಾಯಿತಿಯ ಇತರೆ ನೌಕರರನ್ನು ಮಾತ್ರ ತುಂಬಬೇಕು, ಗ್ರಾ.ಪಂ.ತಿಯ ಎಲ್ಲಾ ನೌಕರರಿಗೂ ಸೇವಾ ಪುಸ್ತಕಗಳನ್ನು ತೆರೆಯಬೇಕು, ವಿನಾಕಾರಣ ಕೆಲಸದಿಂದ ತೆಗೆಯುವುದನ್ನು ನಿಲ್ಲಿಸಬೇಕು, ನಿವೃತ್ತಿ ಅಥವಾ ಮರಣ ಹೊಂದಿದ ನೌಕರರಿಗೆ ಒಂದು ವರ್ಷ ಸೇವೆಗೆ 15 ದಿನಗಳ ವೇನತದಂತೆ ಅವರ ಸೇವೆಯ ಎಲ್ಲ ವರ್ಷಗಳನ್ನು ಪರಿಗಣಿಸಿ ಗ್ರಾಚ್ಯೂಟಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ನೇತೃತ್ವವನ್ನು ರಾಜ್ಯ ಗ್ರಾ.ಪಂ. ನೌಕರರ ಸಂಘದ ಜಿಲ್ಲಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ವಿ.ಎಂ. ಕೃಷ್ಣಪ್ಪ, ಈರಪ್ಪ, ಮುನಿಯಪ್ಪ, ಕೆ.ರಮೇಶ್, ದೇವರಾಜ್, ಚೌಡಪ್ಪ, ಗೋವಿಂದಗೌಡ, ರಾಮಲಿಂಗ, ರಾಮಲಿಂಗ ಇದ್ದರು