ಮೇಲಧಿಕಾರಿ ಕಿರುಕುಳ: ಚಾಲಕ ಆತ್ಮಹತ್ಯೆ ಯತ್ನ
ಕ.ಪ್ರ.ವಾರ್ತೆ ಬಾಗೇಪಲ್ಲಿ ಸೆ.19
ಅಧಿಕಾರಿಯೊಬ್ಬರು ನೀಡುತ್ತಿದ್ದ ಕಿರುಕುಳ ತಾಳದೇ ಬೇಸತ್ತ ಸರ್ಕಾರಿ ಬಸ್ ಚಾಲಕನೊಬ್ಬ ಮರವನ್ನು ಏರಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಪಟ್ಟಣದ ಹೊರವಲಯದಲ್ಲಿರುವ ಕೆಎಸ್ಸಾರ್ಟಿಸಿ ಬಸ್ ಡಿಪೋದಲ್ಲಿ ನಡೆದಿದೆ.
ಬಿ. ಕೃಷ್ಣಪ್ಪ ಎಂಬುವವರೆ ಕೆಎಸ್ಸಾರ್ಟಿಸಿ ಬಸ್ ಡಿಪೋ ಆವರಣದಲ್ಲಿರುವ ಮರವನ್ನು ಹಗ್ಗ ಮತ್ತು ವಿಷದ ಬಾಟಲಿ ಸಮೇತ ಏರಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ವ್ಯಕ್ತಿ.
ಘಟನೆ ವಿವರ: ಚಿಕ್ಕಬಳ್ಳಾಪುರ ತಾಲೂಕಿನ ಪೇರೆಸಂದ್ರ ಸಮೀಪದಲ್ಲಿರುವ ತಿಪ್ಪಾರೆಡ್ಡಿನಾಗೇನಹಳ್ಳಿ ಗ್ರಾಮದ ಬಿ.ಕೃಷ್ಣಪ್ಪ ಎಂಬವರು 2008ರಲ್ಲಿ ರಸ್ತೆ ಸಾರಿಗೆ ಸಂಸ್ಥೆ ಬಸ್ ಚಾಲಕರಾಗಿ ನೇಮಕವಾದರೂ ಅಂದಿನಿಂದ ಇಂದಿನವರೆಗೂ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ನೀಡುತ್ತಲೇ ಬಂದಿದ್ದಾರೆ ಎನ್ನಲಾಗಿದೆ.
ಇದರಿಂದ ಬೇಸತ್ತ ಇವರು ಗುರುವಾರ ಕ್ರಿಮಿನಾಶಕದ ಬಾಟಲ್ಅನ್ನು ಕೈಯಲ್ಲಿ ಹಿಡಿದುಕೊಂಡು ಹಾಗೂ ನೇಣು ಹಗ್ಗ ಕುತ್ತಿಗೆಗೆ ಬಿಗಿದುಕೊಂಡು ರಸ್ತೆ ಸಾರಿಗೆ ಸಂಸ್ಥೆಯ ಘಟಕದ ಆವರಣದಲ್ಲಿರುವ ಮರ ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ ಸಿಬ್ಬಂದಿ ಗಮನಿಸಿ ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಆರಕ್ಷಕ ಉಪ ನಿರೀಕ್ಷಕ ವಿ.ಮುನಿರೆಡ್ಡಿ ಮತ್ತು ಅಪರಾಧ ವಿಭಾಗದ ಆರಕ್ಷಕ ಉಪ ನಿರೀಕ್ಷಕ ಎಂ. ಕೃಷ್ಣಪ್ಪ ಸ್ಥಳಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಚಾಲಕನನ್ನು ಮರದಿಂದ ಕೆಳಗಿಳಿಸಲು ಹರಸಾಹಸಪಟ್ಟರೂ ಚಾಲಕ ಮಾತ್ರ ಮರದಿಂದ ಕೆಳಕ್ಕೆ ಇಳಿಯದೆ ತನ್ನ ಹಠ ಮುಂದುವರಿಸಿದ. ವಿಷಯ ತಿಳಿಯುತ್ತಿದ್ದಂತೆ ರಸ್ತೆ ಸಾರಿಗೆ ಸಂಸ್ಥೆಯ ಡಿಟಿಒ ಶಿವಪ್ರಕಾಶ್ ಸ್ಥಳಕ್ಕೆ ಆಗಮಿಸಿ ಚಾಲಕನ ಮನವೊಲಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಲ್ಲಿಲ್ಲ. ಕೊನೆಗೆ ಸಿಬ್ಬಂದಿ ವರ್ಗದವರು ಮತ್ತು ಪೊಲೀಸರು ಸಿನಿಮಾ ಶೈಲಿಯಲ್ಲಿ ಮರ ಹತ್ತಿ ಕುಡಿಯಲು ನೀರು ನೀಡಿ ಮರದ ಬಳಿಗೆ ಬಸ್ ತೆಗೆದುಕೊಂಡು ಹೋಗಿ ಬಸ್ನ ಚಾವಣಿಯ ಮೇಲೆ ಚಾಲಕನ್ನು ಕೆಳಗಿಳಿಸಿ ಕಚೇರಿಗೆ ಕರೆದುಕೊಂಡು ಹೋದರು.
ವಿಚಾರಣೆ ವೇಳೆ ಘಟಕ ವ್ಯವಸ್ಥಾಪಕರಿಗೆ 1 ಸಾವಿರ ಲಂಚ ನೀಡಿದರೆ ಒಳ್ಳೆಯ ಮಾರ್ಗ ಹಾಗೂ ಹೊಸ ಬಸ್ ನೀಡುತ್ತಾರೆ. ಲಂಚ ನೀಡದಿದ್ದಲ್ಲಿ ಹದಗಟ್ಟಿರುವ ಬಸ್ ಹಾಗೂ ಕಲೆಕ್ಷನ್ ಇಲ್ಲದೆ ಕಿತ್ತು ಹೋಗಿರುವ ಮಾರ್ಗ ನೀಡುತ್ತಾರೆ. ಈ ಬಗ್ಗೆ ನಾವು ಪ್ರಶ್ನಿಸಿದರೆ ಇಲ್ಲಸಲ್ಲದ ಆರೋಪ ಮಾಡಿ ಕಿರುಕುಳ ನೀಡುತ್ತಾರೆ ಎಂದು ಆತ್ಮಹತ್ಯೆಗೆ ಯತ್ನಿಸಿದ್ದ ಬಸ್ ಚಾಲಕ ಬಿ.ಕೃಷ್ಣಪ್ಪ ಆರೋಪಿಸಿದರು.
ನಾನು ಕೆಲಸಕ್ಕೆ ಸೇರಿ ಸುಮಾರು 6 ವರ್ಷಗಳು ಉರುಳಿದೆ. ನನ್ನ ಸೇವಾವಧಿಯಲ್ಲಿ ವಿವಿಧ ಡಿಪೋಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ನನ್ನ ಪ್ರೋಬೇಷನರಿ ಅವಧಿ ಮುಗಿದಿದೆ. ಆದರೆ, ಪ್ರೊಬೇಷನರಿ ಅವಧಿ ಮುಗಿದಿದೆ ಎಂದು ದಾಖಲೆಗಳಲ್ಲಿ ಮಾತ್ರ ಇದುವರೆಗೂ ತೋರಿಸಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡ ಅವರು, ಪ್ರತಿದಿನ 700 ಕಿಮೀ ದೂರ ಬಸ್ ಓಡಿಸಬೇಕೆಂದು ಅಧಿಕಾರಿಗಳು ಆದೇಶ ನೀಡುತ್ತಾರೆ. ಆಂಧ್ರ ಪ್ರದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ನಾವು 650 ಕಿಮೀ ದೂರ ಬಸ್ ಚಾಲನೆ ಮಾಡಲು ಆಗುವುದಿಲ್ಲ. ಇದು ಅಧಿಕಾರಿಗಳಿಗೆ ಗೊತ್ತಿದ್ದರೂ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಅಧಿಕಾರಿಗಳು ನಾನು ಓಡಿಸುತ್ತಿರುವ ಬಸ್ ಮೇಲೆ ನಾಲ್ಕು ಮತ್ತು ಐದು ತನಿಖಾ ಸಿಬ್ಬಂದಿಯಿಂದ ದಾಳಿ ನಡೆಸಿ ಅನಗತ್ಯ ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಿಲ್ಲವಾಯಿತು. ಇತ್ತೀಚೆಗೆ ವ್ಯವಸ್ಥಾಪಕರು ನನ್ನನ್ನು ಸೇವೆಯಿಂದ ವಜಾಗೊಳಿಸುವುದಾಗಿ ಹೇಳಿದ್ದಾರೆಂದು ಕೆಲವರು ಹೇಳಿಕೊಳ್ಳುತ್ತಿರುವುದು ಕೇಳಿ ಬಂತು. ಇದರಿಂದ ಮನಸ್ಸಿಗೆ ಬೇಸರವಾಗಿ ಆತ್ಮಹತ್ಯೆಗೆ ಮುಂದಾದೆ ಎಂದು ನೋವಿನಿಂದ ಹೇಳಿಕೊಂಡರು.
ಈ ಸಂದರ್ಭದಲ್ಲಿ ಚಾಲಕ ಮತ್ತು ನಿರ್ವಾಹಕರು ಡಿಟಿಒ ಅವರನ್ನು ತರಾಟೆಗೆ ತೆಗೆದುಕೊಂಡರು.