ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಸು ಮಾಲೀಕರಿಗೆ ಪರಿಹಾರ ನೀಡಿ: ಸಚಿವ ಖಾದರ್

Srinivasa Murthy VN
Updated On : 19 Sept 2013, 11:03 am

ಕೋಲಾರ: ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ 4 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ನಡೆಯಬೇಕಾಗಿದ್ದ ಅಧಿಕಾರಿಗಳ ಸಭೆ ರಾತ್ರಿ 7 ಗಂಟೆಗೆ ಪ್ರಾರಂಭವಾಗಿ ಸುಮಾರು ಎರಡು ಗಂಟೆಗಳ ಸುದೀರ್ಘ ಚರ್ಚೆ ನಡೆಯಿತು.
ಆಗಸ್ಟ್ 15ರಂದು ಜಿಲ್ಲೆಗೆ ಭೇಟಿ ನೀಡಿದ್ದ ಸಚಿವರು ಗುರುವಾರ ಮಧ್ಯಾಹ್ನ ಕೆಜಿಎಫ್‌ಗೆ ಭೇಟಿ ನೀಡಿ ನಂತರ ಕೋಲಾರಕ್ಕೆ ಆಗಮಿಸಲು ಮೂರು ಗಂಟೆ ತಡವಾಗಿದ್ದರಿಂದ ಅಧಿಕಾರಿಗಳು ಸಚಿವರಿಗಾಗಿ ಕಾದು ಸುಸ್ತಾದರು. ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲೆಯ ಸ್ಥಿತಿ-ಗತಿ ಅರಿಯಲು ಕರೆಯಲಾಗಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಬಹುತೇಕ ಎಲ್ಲ ಇಲಾಖೆಗಳ ಕಾರ್ಯವೈಖರಿ, ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ಜಿಲ್ಲೆಯಲ್ಲಿ ಹಸುಗಳಿಗೆ ಕಾಲುಬಾಯಿ ಜ್ವರದಿಂದ 142 ಹಸುಗಳು ಮೃತಪಟ್ಟಿದ್ದು 845 ಹಸುಗಳಿಗೆ ರೋಗ ಹರಡಿರುವುದರಿಂದ ಪಶು ಸಂಗೋಪನೆ ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದಾಗ, ಕೂಡಲೇ ಜಿಲ್ಲೆಯ ಎಲ್ಲಾ ಹಸುಗಳಿಗೆ ಲಸಿಕೆ ಹಾಕಬೇಕು, ಮೃತಪಟ್ಟಿರುವ ಹಸುಗಳ ರೈತರಿಗೆ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ವಿತರಿಸಬೇಕೆಂದು ಸಚಿವ ಯು.ಟಿ. ಖಾದರ್ ಸೂಚಿಸಿದರು. ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಯ ಸಮಸ್ಯೆಗಳನ್ನು ಅರಿತಿದ್ದು ಅವುಗಳ ಪರಿಹಾರಕ್ಕೆ ಗಮನ ನೀಡದೆ ಅನಾವಶ್ಯಕವಾಗಿ ವಿಷಯಗಳನ್ನು ಪ್ರಸ್ತಾಪ ಮಾಡಿ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸಬಾರದೆಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡಬೇಕು ಅದಕ್ಕೆ ಒಂದು ತಿಂಗಳೊಳಗೆ ಸಮರ್ಪಕ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳುವಂತೆ ನಗರಸಭೆ ಆಯುಕ್ತರಿಗೆ ತಿಳಿಸಿದರು. ಜಿಲ್ಲಾಧಿಕಾರಿ ಡಿ.ಕೆ. ರವಿ ಮಾತನಾಡಿ, ಕುಡಿಯುವ ನೀರಿನ 725 ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ ಹಾಗೂ 240 ಕೊಳವೆ ಬಾವಿಗಳಿಗೆ ಪಂಪ್ ಮೋಟರ್ ಅಳವಡಿಸಲಾಗುವುದು ಇನ್ನು 100 ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಕ್ರಿಯಾ ಯೋಜನೆ ಸಲ್ಲಿಸಲಾಗಿದೆ.
37 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಉಳಿದ 38 ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು. ಜಿಲ್ಲೆಯಲ್ಲಿ ಒಂದು ಕೋಟಿ ರುಪಾಯಿ ನೀರಿನ ಬಿಲ್ಲುಗಳು ಬಾಕಿಯಿದೆ ಎಂದು ಹೇಳಿದಾಗ ಸಚಿವರು ಸಿಎಂ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು. ಜಿಲ್ಲಾ ಪಂಚಾಯತಿಯಿಂದ ಕುಡಿಯುವ ನೀರಿಗಾಗಿ ಪ್ರತಿ ತಾಲೂಕಿಗೆ 15 ಲಕ್ಷ ರು. ನೀಡಲಾಗುತ್ತಿದೆ ಎಂದಾಗ, ಕಾಮಗಾರಿಗಳು ಪೂರ್ಣವಾದ ನಂತರ ಸಾರ್ವಜನಿಕರಿಗೆ  ಗೊತ್ತಾಗುವಂತೆ ಸವಿವರವಾದ ಮಾಹಿತಿಯನ್ನು ಬರೆದು ಫಲಕ ಅಳವಡಿಸಬೇಕೆಂದರು.
ವರ್ತೂರು ಕೆರೆಯಿಂದ ಹರಿದು ವ್ಯರ್ಥವಾಗಿ ಹರಿದು ಹೋಗುತ್ತಿರುವ ನೀರನ್ನು 70 ಕೋಟಿ ವೆಚ್ಚದಿಂದ ಕೋಲಾರಮ್ಮ ಕೆರೆ ಸೇರಿದಂತೆ ಇತರೆ ಕೆರೆಗಳಿಗೆ ತುಂಬಿಸಲು ಕ್ರಿಯಾ ಯೋಜನೆ ತಯಾರಿಸಿ  ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಎಂ. ಜುಲ್ಫಿಖಾರುಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಚಂದ್ರಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement