ಆರೋಗ್ಯ ಕೇಂದ್ರಕ್ಕೆ ಶೀಘ್ರ ಸೌಕರ್ಯ
ಕ.ಪ್ರ.ವಾರ್ತೆ ಮಾಲೂರು ಸೆ.20
ತಾಲೂಕಿನ ಚಿಕ್ಕತಿರುಪತಿಯಲ್ಲಿನ ಆರೋಗ್ಯ ಕೇಂದ್ರವು ಮುಚ್ಚಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕನ್ನಡಪ್ರಭ ವರದಿಯು ಶುಕ್ರವಾರ ನಡೆದ ತಾಪಂ ಸಭೆಯಲ್ಲಿ ಪ್ರತಿಧ್ವನಿಸಿತು.
ವರದಿಯನ್ನು ಪ್ರಸ್ತಾಪಿಸಿದ ಸದಸ್ಯ ಎಸ್.ವಿ. ಲೋಕೇಶ್, ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಚಿಕ್ಕತಿರುಪತಿಯಲ್ಲಿ ನಿತ್ಯ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಆರೋಗ್ಯ ಕೇಂದ್ರದ ಸೇವೆ ಅತಿ ಜರೂರಾಗಿ ಬೇಕಾಗಿದೆ. ಗ್ರಾಮೀಣ ಭಾಗದ ಜನರು ಆಸ್ಪತ್ರೆಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಆರೋಗ್ಯ ಇಲಾಖೆಯ ಈ ರೀತಿಯ ನಿರ್ಲಕ್ಷ್ಯ ಸಲ್ಲ ಎಂದರು. ಸದಸ್ಯರ ಮಾತಿಗೆ ಸ್ಪಂದಿಸಿದ ತಾಲೂಕು ವೈದ್ಯಾಧಿಕಾರಿ ಡಾ.ಅನುರಾಧ, ಚಿಕ್ಕತಿರುಪತಿ ಸೇರಿದಂತೆ ತಾಲೂಕಿನ ಹಲವೆಡೆ ಉಪ ಆರೋಗ್ಯ ಕೇಂದ್ರಗಳ ಕಟ್ಟಡಗಳು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದು, ರಿಪೇರಿಗಾಗಿ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗುವ ನಿರೀಕ್ಷೆ ಇದೆ ಎಂದರು.
ಇಂದು ಹಿಂದಿ ದಿನಾಚರಣೆ
ಚಿಂತಾಮಣಿ: ರಾಜ್ಯ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ವತಿಯಿಂದ ಚಿಂತಾಮಣಿ ತಾಲೂಕು ಘಟಕ ಮತ್ತು ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಸೆ. 21ರಂದು ಶನಿವಾರ ಪಟ್ಟಣದ ಡಿಲಿಜನ್ ಸಂಯುಕ್ತ ಪ್ರೌಢಶಾಲೆಯಲ್ಲಿ ಹಿಂದಿ ದಿನಾಚರಣೆ ಮತ್ತು ಕಾರ್ಯಾಗಾರ ಆಯೋಜಿಸಲಾಗಿದೆ. ಸದರಿ ಕಾರ್ಯಾಗಾರದಲ್ಲಿ ತಾಲೂಕಿನ ಎಲ್ಲಾ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರು ಭಾಗವಹಿಸಲು ಒಒಡಿ ಸೌಲಭ್ಯವಿದ್ದು, ತಪ್ಪದೆ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನಿತರಹಿತ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ಆದೇಶ ಪತ್ರ ತಲುಪದಿದ್ದಲ್ಲಿ ರಾಮಚಂದ್ರಸಿಂಗ್ ಅಧ್ಯಕ್ಷರು, ತಾಲೂಕು ಘಟಕ(ಮೊ. 9743892550) ಸಂಪರ್ಕಿಸಲು ಕೋರಿದೆ.