ಎಸ್ಮಾ ಜಾರಿ ವಿರೋಧಿಸಿ ಸಿಐಟಿಯು ಪ್ರತಿಭಟನೆ
ಕ.ಪ್ರ.ವಾರ್ತೆ ಕೋಲಾರ ಸೆ.20
ಅಸಂಘಟಿತ ಕಾರ್ಮಿಕರ ಹಕ್ಕು ದಮನಕ್ಕಾಗಿ ರಾಜ್ಯ ಸರ್ಕಾರ ಎಸ್ಮಾ ಜಾರಿಗೆ ತರುತ್ತಿರುವುದನ್ನು ವಿರೋಧಿಸಿ ಹಾಗೂ ಸಾಮಾಜಿಕ ಭದ್ರತೆಗಾಗಿ ಒತ್ತಾಯಿಸಿ ಸಿಐಟಿಯುನಿಂದ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಅಂಗನವಾಡಿ ಕೇಂದ್ರಗಳ ಖಾಸಗೀಕರಣ, ಶಾಲೆಗಳ ಮಧ್ಯಾಹ್ನ ಬಿಸಿಯೂಟ ಯೋಜನೆಯ ಹೊರಗುತ್ತಿಗೆಕರಣ, ಆಶಾ ಕಾರ್ಯಕರ್ತರಿಗೆ ಕನಿಷ್ಠ ವೇತನ ನೀಡುವುದು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಬಿಬಿಎಮ್ಪಿ ಕಂಪ್ಯೂಟರ್ ಆಪರೇಟರ್ಗಳ ರೀತಿಯ ನೌಕರರಿಗೆ ನಿಗದಿ ಸಮಯಕ್ಕೆ ವೇತನ ನೀಡುವುದು, ಹಾಗೂ ಹಕ್ಕುಗಳಿಗಾಗಿ ಹೋರಾಡುವ ನೌಕರರ ವಿರುದ್ಧ ಎಸ್ಮಾ ಜಾರಿ ಮಾಡದಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು.
ಬೆಲೆ ಏರಿಕೆ ನಿಯಂತ್ರಿಸದೆ, ಬಸ್ ಪ್ರಯಾಣ ದರ, ಹಾಲಿನ ದರ ಏರಿಸಿ, ವಿದ್ಯುತ್ ದರ, ಕುಡಿಯುವ ನೀರಿನ ದರಗಳ ಹೆಚ್ಚಿಸಲು ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಸಿಐಟಿಯು ಮುಖಂಡರು ಆರೋಪಿಸಿದರು.
ಬಿಪಿಎಲ್ ಕಾರ್ಡುದಾರರಿಗೆ 1 ರು.ಗೆ ಅಕ್ಕಿ ನೀಡುವ ಯೋಜನೆ ಸ್ವಾಗತಾರ್ಹವಾದರೂ ಎ.ಪಿ.ಎಲ್ ಕುಟುಂಬಗಳಿಗೆ ಆಹಾರ ಧಾನ್ಯ ನೀಡದೆ ಇರುವುದರಿಂದ ಸಾರ್ವತ್ರಿಕ ಪಡಿತರ ವ್ಯವಸ್ಥೆಗೆ ಧಕ್ಕೆಯಾಗಿದೆ, ವಸತಿ ರಹಿತರಿಗೆ ವಸತಿ ನೀಡಬೇಕು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಉಪಾಧ್ಯಕ್ಷರಾದ ಅರ್ಜುನನ್, ಪ್ರಧಾನ ಕಾರ್ಯದರ್ಶಿ ಬಿ.ಎಸ್. ನಾಗರತ್ನ, ಮುಖಂಡರಾದ ಮುನಿರಾಜಮ್ಮ, ಬಿ.ವಿ. ಸಂಪಂಗಿ, ಜಯಮ್ಮ, ರವೀಂದ್ರ, ಜಯಲಕ್ಷ್ಮೀ, ವಿ. ಮಂಜುಳ, ಆನಂದ್, ಭೀಮರಾಜ್, ಸಿದ್ದನಹಳ್ಳಿ ಸೀನಪ್ಪ ಮತ್ತಿತರರು ಇದ್ದರು.