ಕೈವಾರ ತಾತಯ್ಯನ ಬೋಧನೆ ಬದುಕಿನ ಸಾಹಿತ್ಯವಿದ್ದಂತೆ'
ಕ.ಪ್ರ.ವಾರ್ತೆ ಚಿಂತಾಮಣಿ ಸೆ.20
ಮನಸ್ಸಿನ ನಿಯಂತ್ರಣವಿಲ್ಲದೆ ಬದುಕಿನಲ್ಲಿ ಸುಖವಾಗಿರಲು ಸಾಧ್ಯವಿಲ್ಲ ಎಂದು ಸಾರಿದ ಯೋಗಿ ನಾರೇಯಣ ತಾತಯ್ಯನವರ ಬೋಧನೆಗಳು ಬದುಕಿನ ಸಾಹಿತ್ಯ ಎಂದು ಪ್ರವಚನಕಾರ ತಳಗವಾರ ಆನಂದ್ ಹೇಳಿದರು.
ಕೈವಾರ ಯೋಗಿ ನಾರೇಯಣ ಮಠದಲ್ಲಿ ನಡೆದ ಹುಣ್ಣಿಮೆ ವಿಶೇಷ ಕಾರ್ಯಕ್ರಮದಲ್ಲಿ ಯೋಗಿನಾರೇಯಣ ತಾತಯ್ಯನವರ ಸಂದೇಶ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ನಾರೇಯಣರು ಊರೂರು ತಿರುಗುತ್ತಾ ಜನರ ಕಷ್ಟ- ಸುಖ ಅರಿತು, ಜನರ ಸಮಸ್ಯೆ ಪರಿಹರಿಸುವ ಸುಲಭ ಮಾರ್ಗೋಪಾಯ ಸೂಚಿಸುತ್ತಿದ್ದರು. ತಾತಯ್ಯ ಅವರು ಆಧ್ಯಾತ್ಮಿಕ ಚಿಂತನೆಗಳಿಂದ ಮನುಕುಲವನ್ನು ಎಚ್ಚರಿಸಿದ್ದಾರೆ. ಅವರು ರಚಿಸಿರುವ ಗ್ರಂಥಗಳು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ರಚಿಸಿದ್ದಾರೆ. ಯೋಗ ಸಾಧನೆಯನ್ನು ಸುಲಭವಾಗಿ ವಿವರಿಸಿದ್ದಾರೆ ಎಂದರು.
ಇಂದಿನ ವೈಜ್ಞಾನಿಕ ಯುಗದಲ್ಲಿ ಸುಖ- ಸೌಲಭ್ಯ ಒದಗಿಸಿಕೊಡುತ್ತಿರುವ ಭೋಗ ಸಾಮಗ್ರಿಗಳ ನಡುವೆಯೂ ಬದುಕಿನ ಅಭದ್ರತೆ ಮತ್ತು ಮಾನಸಿಕ ಅಶಾಂತಿ ನಡುವೆ ನೆಮ್ಮದಿ ಕೆಟ್ಟು ನರಳುತ್ತಿರುವ ಮಾನವಕುಲದ ಉದ್ಧಾರಕ್ಕೆ ದಾರಿದೀಪದಂತಿರುವ ಆಧ್ಯಾತ್ಮಿಕ ಸಾಹಿತ್ಯವನ್ನು ಕೈವಾರ ತಾತಯ್ಯ ಅವರು ರಚಿಸಿದ್ದಾರೆ ಎಂದರು.
ಹುಣ್ಣಿಮೆ ವಿಶೇಷ ಕೈಂಕರ್ಯದಲ್ಲಿ ತಾತಯ್ಯನವರ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ ಮತ್ತು ಅಷ್ಠಾವಧಾನ ಸೇವೆ ನೆರವೇರಿಸಿ, ರಥೋತ್ಸವ ನಡೆಸಲಾಯಿತು. ರಥೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು. ತಾತಯ್ಯನವರ ಮೂಲ ಬೃಂದಾವನವನ್ನು ವಿಶೇಷ ಹೂಗಳಿಂದ ಸಿಂಗರಿಸಲಾಗಿತ್ತು. ಹುಣ್ಣಿಮೆ ಪ್ರಯುಕ್ತ ನಾದಸುಧಾರಸ ವೇದಿಕೆಯಲ್ಲಿ ಅಖಂಡ ಸಂಕೀರ್ತನೆ ಏರ್ಪಡಿಸಲಾಗಿತ್ತು.
ದೊರೆ ದರ್ಶನಕ್ಕೆ ಜನತೆ ಕಾತುರ
ಕೋಲಾರ: ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಹಾಗೂ ಜಿಲ್ಲಾ ಆಡಳಿತಕ್ಕೆ ಚುರುಕು ಮುಟ್ಟಿಸಲು ಇದೇ ಸೆ. 27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವ ನಿರೀಕ್ಷೆ ಇರುವುದರಿಂದ ಜನತೆ ದೊರೆಯ ದರ್ಶನಕ್ಕಾಗಿ ಕಾತರರಾಗಿದ್ದಾರೆ.
ಗುರುವಾರ ಜಿಲ್ಲೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಇನ್ನೂ ಖಚಿತಗೊಂಡಿಲ್ಲವೆಂದು ಹೇಳಿದ್ದಾರೆಯಾದರೂ ಜಿಲ್ಲಾ ಆಡಳಿತ ಮಾತ್ರ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ. ಜಿಲ್ಲೆಗೆ ಮೊದಲ ಬಾರಿಗೆ ಸಿಎಂ ಬರುವುದರಿಂದ ಯಾವುದೇ ಲೋಪವಿಲ್ಲದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳು ಉಪ ಸಮಿತಿಗಳನ್ನು ರಚನೆ ಮಾಡಿದ್ದಾರೆ. ಆದರೆ, ಮಿನಿ ವಿಧಾನಸೌಧ, ಅರಸು ಭವನ, ಒಳಾಂಗಣ ಕ್ರೀಡಾಂಗಣ ಕಟ್ಟಡಗಳ ಕಾಮಗಾರಿ ಬಾಕಿ ಇರುವುದರಿಂದ ಈ ಕಟ್ಟಡಗಳ ಉದ್ಘಾಟನೆ ಮುಂದೂಡುವ ಸಾಧ್ಯತೆಗಳಿವೆ.
ಜಿಲ್ಲಾ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿಸಲು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಶಾಸಕರು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಟಮಕ ಬಳಿ 8 ಎಕರೆ ಜಾಗವನ್ನು ಗುರುತಿಸಲಾಗಿದೆ. ಸರ್ಕಾರ ಅನುಮತಿ ನೀಡಿದಲ್ಲಿ ಜಿಲ್ಲಾ ಭವನಕ್ಕೆ ಸೆ.27ರಂದು ಶಂಕುಸ್ಥಾಪನೆಯ ಭಾಗ್ಯ ದೊರೆಯಬಹುದಾಗಿದೆ. ಕೇವಲ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲು ಸಿಎಂ ಬರುವುದಕ್ಕೆ ಒಪ್ಪುತ್ತಾರೆಯೇ ಅಥವಾ ಆ ದಿನ ಕೆಲ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ದೊರಕಿಸಲು ಜಿಲ್ಲೆಯ ಜನಪ್ರತಿನಿಧಿಗಳು ಕಾಳಜಿ ವಹಿಸುವರೇ ಎಂಬುದು ಪ್ರಶ್ನೆಯಾಗಿದೆ. ಸಿಎಂ ಬರುವರೆಂಬ ನಿರೀಕ್ಷೆಯಲ್ಲಿ ದಲಿತ ಮುಖಂಡರು ತಮ್ಮ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.